Last Updated:
ಪ್ರಧಾನ ಅರ್ಚಕರ ಆಯ್ಕೆ ಪ್ರಕ್ರಿಯೆಯ ಸಂದರ್ಶನ ಮಂಡಳಿ ಹಾಗೂ ಪರಿಶೀಲನಾ ಸಮಿತಿಯ ಕಣ್ತಪ್ಪಿಸಿ ಈ ಅಕ್ರಮ ಹೇಗೆ ನಡೆಯಿತು? ಅಥವಾ ಉನ್ನತ ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಈ ಅಕ್ರಮವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಲಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ.
ಸರ್ಕಾರಿ ಉದ್ಯೋಗಗಳಲ್ಲಿ (Government Job) ನಕಲಿ ದಾಖಲೆ (Fake Document) ನೀಡಿ ನೇಮಕಾತಿ ಪಡೆಯುವ ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ, ಇದೀಗ ಭಕ್ತರು (Devotees) ಪವಿತ್ರವೆಂದು ಭಾವಿಸುವ ಶಬರಿಮಲೆ (Sabarimala) ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಹುದ್ದೆಗೂ ನಕಲಿ ದಾಖಲೆ ಸೃಷ್ಟಿಸಿ ನೇಮಕಾತಿ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಸ್ತುತ ಶಬರಿಮಲೆಯ ಪ್ರಧಾನ ಅರ್ಚಕರಾಗಿರುವ ಇ.ಡಿ. ಪ್ರಸಾದ್ ಅವರು ನಕಲಿ ದಾಖಲೆಗಳ ಮೂಲಕ ಈ ಹುದ್ದೆಗೇರಿದ್ದಾರೆ ಎಂದು ನ್ಯೂಸ್ 18 ಮಲಯಾಳಂ ವರದಿ ಮಾಡಿದೆ. ಈ ಹಿಂದೆ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ.ಪದ್ಮಕುಮಾರ್ ಅವರು ತಿಳಿಸಿದ್ದ ಅನುಮಾನಗಳು ಇದೀಗ ದಾಖಲೆಗಳ ಸಮೇತ ದೃಢಪಟ್ಟಿವೆ.
ತಿರುವಾಂಕೂರು ದೇವಸ್ವಂ ಮಂಡಳಿಯು ಅಯ್ಯಪ್ಪನ ಸೇವೆಗೆ ಬರುವ ವ್ಯಕ್ತಿಯು ಯೋಗಿಗೆ ಸಮಾನನಾಗಿರಬೇಕು ಎಂಬ ಕಲ್ಪನೆಯೊಂದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಆ ನಿಯಮಗಳ ಪ್ರಕಾರ, ಈ ಹುದ್ದೆಗೆ ಮಲಯಾಳಿ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಹಾಗೆಯೇ ಅಭ್ಯರ್ಥಿಯು ನಿರಂತರವಾಗಿ 10 ವರ್ಷಗಳ ಕಾಲ, ಪ್ರತಿದಿನ ಕನಿಷ್ಠ ಮೂರು ಪೂಜೆಗಳು ನಡೆಯುವ ದೇವಾಲಯಗಳಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿರಬೇಕು.
ಸಂದರ್ಶನದ ಮೂಲಕ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಚಿಂಗಂ ತಿಂಗಳಲ್ಲಿ (ಮಲಯಾಳಂ ಕ್ಯಾಲೆಂಡರ್‌ನ ತಿಂಗಳು) ನಡೆಯುವ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯ ಹಿನ್ನೆಲೆಯನ್ನು ಪೊಲೀಸ್ ಮತ್ತು ವಿಜಿಲೆನ್ಸ್ (ಜಾಗೃತ ದಳ) ವಿಭಾಗದಿಂದ ಪರಿಶೀಲಿಸಿದ ನಂತರವೇ ನೇಮಕಾತಿ ನಡೆಯುತ್ತದೆ.
ಪ್ರಸಾದ್ ಅವರು ತಾವು ವಿವಿಧ ದೇವಾಲಯಗಳಲ್ಲಿ ಪ್ರಧಾನ ಅರ್ಚಕರಾಗಿ 15 ವರ್ಷಗಳ ಅನುಭವ ಹೊಂದಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಕೊಚ್ಚಿನ್ ದೇವಸ್ವಂ ಮಂಡಳಿ ವ್ಯಾಪ್ತಿಯ ಚೊಟ್ಟಾನಿಕ್ಕರ ದೇವಸ್ಥಾನದಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾಗಿ ಸಹಾಯಕ ಆಯುಕ್ತರಿಂದ ಪಡೆದ ದಾಖಲೆಯನ್ನು ಸಲ್ಲಿಸಿದ್ದರು.
ಚೊಟ್ಟಾನಿಕ್ಕರದ ಮುಖ್ಯ ದೇವಾಲಯದಲ್ಲಿ (ಮೇಲ್ಕಾವು) ಪ್ರಧಾನ ಅರ್ಚಕರಾಗಲು 45 ವರ್ಷ ವಯಸ್ಸಾಗಿರಬೇಕು. ಆದರೆ, 2015ರಲ್ಲಿ ಪ್ರಸಾದ್ ಅವರಿಗೆ ಕೇವಲ 35 ವರ್ಷವಾಗಿತ್ತು. ಆದಾಗ್ಯೂ ತಾವು ಮುಖ್ಯ ದೇವಾಲಯದ ಪ್ರಧಾನ ಅರ್ಚಕರಾಗಿದ್ದೆ ಎಂದು ಅವರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ.
ವಾಸ್ತವದಲ್ಲಿ ಚೊಟ್ಟಾನಿಕ್ಕರದಲ್ಲಿ ಎರಡು ದೇವಸ್ಥಾನಗಳಿವೆ. ಮುಖ್ಯ ದೇವಸ್ಥಾನದಲ್ಲಿ ದಿನಕ್ಕೆ ಮೂರು ಪೂಜೆ ನಡೆದರೆ, ಕೀಳಕಾವು ದೇವಸ್ಥಾನದಲ್ಲಿ ಎರಡು ಪೂಜೆ ನಡೆಯುತ್ತದೆ. ಪ್ರಸಾದ್ ಅವರು ಸೇವೆ ಸಲ್ಲಿಸಿದ್ದು ದಿನಕ್ಕೆ ಕೇವಲ ಎರಡು ಪೂಜೆ ನಡೆಯುವ ಕೀಳಕಾವು ದೇವಸ್ಥಾನದಲ್ಲಿ (2015-2017 ಹಾಗೂ 2019-2020ರ ಅವಧಿಯಲ್ಲಿ). ಹೀಗಾಗಿ ಈ ಸೇವೆಯನ್ನು ಶಬರಿಮಲೆ ಪ್ರಧಾನ ಅರ್ಚಕ ಹುದ್ದೆಗೆ ಅರ್ಹತೆ ಎಂದು ಪರಿಗಣಿಸುವಂತಿಲ್ಲ.
2022ರಿಂದ ಶಬರಿಮಲೆಗೆ ಆಯ್ಕೆಯಾಗುವವರೆಗೆ ಅವರು ತ್ರಿಶೂರ್ ಅರೇಶ್ವರಂ ದೇವಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲೂ ಸಹ ಕೇವಲ ಎರಡು ಪೂಜೆಗಳು ಮಾತ್ರ ನಡೆಯುತ್ತವೆ. ಹೀಗಾಗಿ, ಸತತ 10 ವರ್ಷಗಳ ಕಾಲ ಮೂರು ಪೂಜೆಗಳನ್ನು ನಡೆಸುವ ದೇವಾಲಯದಲ್ಲಿ ಕಾರ್ಯನಿರ್ವಹಿಸಿದ ಮೂಲ ಅರ್ಹತೆಯನ್ನೇ ಇವರು ಹೊಂದಿರಲಿಲ್ಲ.
ದೇವಸ್ವಂ ಅಧಿಕಾರಿಗಳ ನೆರವಿಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ನಕಲಿ ದಾಖಲೆ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಇಷ್ಟೆಲ್ಲಾ ಲೋಪಗಳಿದ್ದರೂ ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ಪ್ರಕ್ರಿಯೆಯ ಸಂದರ್ಶನ ಮಂಡಳಿ ಹಾಗೂ ಪರಿಶೀಲನಾ ಸಮಿತಿಯ ಕಣ್ತಪ್ಪಿಸಿ ಈ ಅಕ್ರಮ ಹೇಗೆ ನಡೆಯಿತು? ಅಥವಾ ಉನ್ನತ ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಈ ಅಕ್ರಮವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಲಾಗಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಪ್ರಸಾದ್ ಅವರಿಗೆ ಈ ಮಟ್ಟದಲ್ಲಿ ಸಹಾಯ ಮಾಡಿದವರು ಯಾರು ಎಂಬ ಮಾಹಿತಿಗಳು ಇನ್ನೂ ಹೊರಬರಬೇಕಿದೆ.













