Last Updated:
ಕೇವಲ ಎರಡು ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಐಕಾನಿಕ್ ಆಟಗಾರನನ್ನು ತಂಡದಿಂದ ಕೈಬಿಡುವುದು ಟೀಮ್ ಇಂಡಿಯಾಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ರೋಹಿತ್ ಅವರ ನಿವೃತ್ತಿಯು ವಿರಾಟ್ ಕೊಹ್ಲಿಯನ್ನು ಸಹ ಸ್ಥಾನವನ್ನ ಕಳೆದುಕೊಳ್ಳವುದಕ್ಕೆ ದಾರಿ ಮಾಡಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಎರಡು ಮೂರು ದಿನಗಳಿಂದ ರೋಹಿತ್ ಶರ್ಮಾ (Rohit Sharma) ವೃತ್ತಿ ಜೀವನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳು ಕೇಳಿಬರುತ್ತಿವೆ. ಲಾರ್ಡ್ಸ್ನಲ್ಲಿ ನಡೆಯುವ ಇಂಗ್ಲೆಂಡ್ (India vs England) ವಿರುದ್ಧದ ಕೊನೆಯ ಏಕದಿನ ಪಂದ್ಯ ಎಂದು ಕೆಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಬಿಸಿಸಿಐ ಲಾರ್ಡ್ಸ್ ಪಂದ್ಯ ರೋಹಿತ್ ಕೊನೆಯ ಪಂದ್ಯವಲ್ಲ ಎಂದು ತಿಳಿಸಿದೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ (Basit Ali), ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ತಂಡದಿಂದ ಬಲವಂತವಾಗಿ ಕೈಬಿಡುವುದು ತಪ್ಪು ಎಂದು ಹೇಳಿದ್ದಾರೆ. ಕೇವಲ ಎರಡು ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಐಕಾನಿಕ್ ಆಟಗಾರನನ್ನು ತಂಡದಿಂದ ಕೈಬಿಡುವುದು ಟೀಮ್ ಇಂಡಿಯಾಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ರೋಹಿತ್ ಅವರ ನಿವೃತ್ತಿಯು ವಿರಾಟ್ ಕೊಹ್ಲಿಯನ್ನು ಸಹ ಸ್ಥಾನವನ್ನ ಕಳೆದುಕೊಳ್ಳುವುದಕ್ಕೆ ದಾರಿ ಮಾಡಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಟ್ ಕೊಹ್ಲಿ ಆಟವನ್ನು ನೋಡಲು ಜಗತ್ತು ಇನ್ನೂ ಬಯಸುತ್ತಿದೆ. ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗ್ಗೆ ಭಾರತೀಯ ಕ್ರಿಕೆಟ್ ಮರುಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದಾರೆ. ಸತತ 2 ಪಂದ್ಯಗಳಲ್ಲಿ ಕೇವಲ 11 ಮತ್ತು 26 ರನ್ ಗಳಿಸಿದ್ದರು. ಇದು ಅವರ ನಿವೃತ್ತಿಯ ಬಗ್ಗೆ ವದಂತಿಗಳಿಗೆ ಕಾರಣವಾಗಿದೆ. 2027 ರ ಏಕದಿನ ವಿಶ್ವಕಪ್ನ ನೀವು ಯೋಜನೆಯ ಭಾಗವಾಗಿಲ್ಲ ಎಂದು ಭಾರತೀಯ ಆಯ್ಕೆದಾರರು ರೋಹಿತ್ಗೆ ತಿಳಿಸಿದ್ದಾರೆ ಮತ್ತು ಅವರ ಭವಿಷ್ಯವನ್ನು ನಿರ್ಧರಿಸಲು ಅವರಿಗೆ ಸಲಹೆ ನೀಡಿದ್ದಾರೆ ಎಂದು ವರದಿಗಳು ಕೇಳಿಬಂದಿದ್ದವು. ಆದರೆ ಬಿಸಿಸಿಐ ಈ ವರದಿಗಳು ಕೇವಲ ಊಹಾಪೋಹ ಎಂದು ತಳ್ಳಿಹಾಕಿದೆ. ಇದರ ಹೊರತಾಗಿಯೂ, ನಿವೃತ್ತಿ ವದಂತಿಗಳು ಮುಂದುವರೆದಿವೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಬಸಿತ್ ಅಲಿ, ಇಂತಹ ಕ್ರಮವು ಭಾರತೀಯ ಕ್ರಿಕೆಟ್ಗೆ ಅಪಾರ ಹಾನಿಯನ್ನುಂಟುಮಾಡುತ್ತದೆ ಎಂದು ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ. ರೋಹಿತ್ ಅವರ ಪ್ರದರ್ಶನವು ತಂಡದಲ್ಲಿ ಅವರ ಸ್ಥಾನವನ್ನು ಸಮರ್ಥಿಸುವವರೆಗೆ ಅವರನ್ನು ಉಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಕೇವಲ ಎರಡು ಪಂದ್ಯಗಳ ಆಧಾರದ ಮೇಲೆ ಅವರನ್ನು ನಿರ್ಣಯಿಸುವುದು ಅನ್ಯಾಯ. ರೋಹಿತ್ ಮೇಲಿನ ಒತ್ತಡವು ವಿರಾಟ್ ಕೊಹ್ಲಿ ಅವರ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು.
ಇಂದು ರೋಹಿತ್ ಅವರ ಸರದಿ ಆಗಿದ್ದರೆ, ಮುಂದಿನ ಸರದಿ ವಿರಾಟ್ ಕೊಹ್ಲಿ ಆಗಿರಬಹುದು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ರೀತಿಯನ್ನು ಪರಿಗಣಿಸಿದರೆ, ಲಾರ್ಡ್ಸ್ ಏಕದಿನ ಪಂದ್ಯದ ಸಮಯದಲ್ಲಿ ಇಬ್ಬರೂ ತಮ್ಮ ನಿವೃತ್ತಿಯನ್ನು ಘೋಷಿಸುವ ಸಾಧ್ಯತೆಯಿದೆ. ಅವರ ಮೇಲೆ ಅತಿಯಾದ ಒತ್ತಡ ಹೇರಿದರೆ, ಅವರು ಅಂತಹ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಾನು ನಂಬುತ್ತೇನೆ. ಹಾಗಾಗಬಾರದು, ಏಕೆಂದರೆ ಕ್ರಿಕೆಟ್ ಜಗತ್ತು ಇನ್ನೂ ವಿರಾಟ್ ಕೊಹ್ಲಿ ಆಟವನ್ನು ನೋಡಲು ಬಯಸುತ್ತದೆ,” ಎಂದು ಬಸಿತ್ ಅಲಿ ಹೇಳಿಕೊಂಡಿದ್ದಾರೆ.
ತನ್ನ ಘನತೆಗೆ ಧಕ್ಕೆ ಬಂದರೆ ಅಥವಾ ಬಲವಂತವಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಸಿಲುಕಿಸಿದರೆ, ತಾನು ತಕ್ಷಣವೇ ಕ್ರಿಕೆಟ್ನಿಂದ ಹಿಂದೆ ಸರಿಯುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರೋಹಿತ್ ಶರ್ಮಾ ನಿವೃತ್ತರಾದರೆ, ಅದು ಕೊಹ್ಲಿ ಮೇಲೆ ಅನಗತ್ಯ ಒತ್ತಡ ಹೇರುತ್ತದೆ ಮತ್ತು ಅವರು ಕೂಡ ಕ್ರೀಡೆಗೆ ವಿದಾಯ ಹೇಳುವ ಅಪಾಯವಿದೆ ಎಂದು ವಿಶ್ಲೇಷಕರು ಬಿಸಿಸಿಐಗೆ ಎಚ್ಚರಿಕೆ ನೀಡುತ್ತಿದ್ದಾರೆ.














