ಈ ನೇಮಕಾತಿಯಲ್ಲಿ 750 ಹೊಸ ಹುದ್ದೆಗಳು ಹಾಗೂ 25 ಹಿಂಬಾಕಿ ಹುದ್ದೆಗಳು ಸೇರಿ ಒಟ್ಟು 775 ಹುದ್ದೆಗಳು ಭರ್ತಿಯಾಗಲಿವೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕದ ವಿವಿಧ ಅರಣ್ಯ ವೃತ್ತಗಳಲ್ಲಿ ನಿಯೋಜಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ.
ಕರ್ನಾಟಕ ಅರಣ್ಯ ಇಲಾಖೆ ವಿವಿಧ ಅರಣ್ಯ ವೃತ್ತಗಳಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಿದೆ. ಮೈಸೂರು ವೃತ್ತದಲ್ಲಿ 121, ಚಾಮರಾಜನಗರ ವೃತ್ತದಲ್ಲಿ 159, ಬೆಂಗಳೂರು ವೃತ್ತದಲ್ಲಿ 82 (ಹಿಂಬಾಕಿ ಸೇರಿ), ಕೆನರಾ ವೃತ್ತದಲ್ಲಿ 67, ಬಳ್ಳಾರಿ ವೃತ್ತದಲ್ಲಿ 63, ಚಿಕ್ಕಮಗಳೂರು ವೃತ್ತದಲ್ಲಿ 60, ಮಂಗಳೂರು ವೃತ್ತದಲ್ಲಿ 54, ಬೆಳಗಾವಿ ವೃತ್ತದಲ್ಲಿ 42, ಶಿವಮೊಗ್ಗ ವೃತ್ತದಲ್ಲಿ 38, ಕೊಡಗು ವೃತ್ತದಲ್ಲಿ 32, ಹಾಸನ ವೃತ್ತದಲ್ಲಿ 31, ಧಾರವಾಡ ವೃತ್ತದಲ್ಲಿ 12 ಹಾಗೂ ಕಲಬುರ್ಗಿ ವೃತ್ತದಲ್ಲಿ 6 ಹುದ್ದೆಗಳು ಭರ್ತಿಯಾಗಲಿವೆ. ಅಭ್ಯರ್ಥಿಗಳು ತಮ್ಮ ಆಸಕ್ತಿಯ ವೃತ್ತಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (SSLC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. CBSE, ICSE, ಇತರ ರಾಜ್ಯ ಶಿಕ್ಷಣ ಮಂಡಳಿಗಳು ಹಾಗೂ NIOS ಮೂಲಕ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ, 2A, 2B, 3A ಹಾಗೂ 3B ವರ್ಗದ ಅಭ್ಯರ್ಥಿಗಳಿಗೆ 32 ವರ್ಷ, SC/ST ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 33 ವರ್ಷ ವಯೋಮಿತಿ ನಿಗದಿಯಾಗಿದೆ. ಅರಣ್ಯ ಪ್ರೇರಕರು ಹಾಗೂ ಮಾಜಿ ಸೈನಿಕರಿಗೆ ಸರ್ಕಾರದ ನಿಯಮಾನುಸಾರ ಹೆಚ್ಚುವರಿ ವಯೋಸಡಿಲಿಕೆ ದೊರೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ₹27,500ರಿಂದ ₹46,675ರವರೆಗೆ ವೇತನಶ್ರೇಣಿ ದೊರೆಯಲಿದ್ದು, ಸರ್ಕಾರಿ ನಿಯಮಾನುಸಾರ ಇತರೆ ಸೌಲಭ್ಯಗಳೂ ಅನ್ವಯವಾಗಲಿವೆ. ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳು ₹200, ಸಾಮಾನ್ಯ ಮಹಿಳೆಯರು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು ₹100, SC/ST ಹಾಗೂ ಪ್ರವರ್ಗ-1 ಪುರುಷ ಅಭ್ಯರ್ಥಿಗಳು ₹100, ಮಹಿಳೆಯರು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು ₹50 ಅರ್ಜಿ ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಹಲವು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ SSLC ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿ ಸಿದ್ಧಪಡಿಸಲಾಗುತ್ತದೆ. ನಂತರ ದೈಹಿಕ ಮಾನದಂಡ ಪರೀಕ್ಷೆ (ಎತ್ತರ), ದೈಹಿಕ ತಾಳ್ವಿಕೆ ಪರೀಕ್ಷೆ (ಓಟ), ದೈಹಿಕ ಸಾಮರ್ಥ್ಯ ಪರೀಕ್ಷೆ (ಜಂಪ್, ಶಾಟ್‌ಪುಟ್ ಸೇರಿದಂತೆ), ಅಗತ್ಯವಿದ್ದರೆ ಕನ್ನಡ ಭಾಷಾ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ನಂತರ ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ), ಜನ್ಮ ದಿನಾಂಕದ ದಾಖಲೆ, ಇತ್ತೀಚಿನ ಭಾವಚಿತ್ರ, ಸಹಿ ಹಾಗೂ ಇತರೆ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಶುಲ್ಕ ಪಾವತಿಸಿದ ಬಳಿಕ ಸಲ್ಲಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು. ಭವಿಷ್ಯದ ಅಗತ್ಯಕ್ಕಾಗಿ ಅರ್ಜಿ ಸಂಖ್ಯೆ ಹಾಗೂ ಪ್ರಿಂಟ್‌ಔಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಸೂಕ್ತ.
ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ
ಪ್ರತಿ ಅಭ್ಯರ್ಥಿಯೂ ಒಂದೇ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಮುನ್ನ ಸಂಬಂಧಿತ ಅರಣ್ಯ ವೃತ್ತದ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಇತರೆ ನಿಯಮಗಳನ್ನು ಖಚಿತಪಡಿಸಿಕೊಂಡ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ. ಉದ್ಯೋಗದ ಹೆಸರಿನಲ್ಲಿ ಮೋಸ ನಡೆಯುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಅಧಿಕೃತ ಕರ್ನಾಟಕ ಅರಣ್ಯ ಇಲಾಖೆಯ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.













