Last Updated:
ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಮುಖಾಮುಖಿ, ಹಾರ್ದಿಕ್ ಪಾಂಡ್ಯ ಜೊತೆ ಫೋಟೋಶೂಟ್ ಸೆಂಟಿಮೆಂಟ್ ನಿಂದ ಗುಜರಾತ್ ಗೆಲುವು ಚರ್ಚೆ
ಐಪಿಎಲ್ 2026 ಆವೃತ್ತಿ ರೋಚಕವಾಗಿ (IPL 2026 Final) ಮುಕ್ತಾಯವಾಗುತ್ತಿದೆ. ಇಂದು ರಾತ್ರಿ 7:30ಕ್ಕೆ ಅಹಮದಾಬಾದ್ ನಗರದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ನಡುವೆ ಫೈನಲ್ (RCB vs GT) ಪಂದ್ಯ ನಡೆಯಲಿದೆ. ಆದರೆ ಈ ಮಹಾ ಸಂಗ್ರಾಮದ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಸಂಬಂಧಿಸಿದ ಒಂದು ವಿಶೇಷ ಟ್ರೋಫಿ ಸೆಂಟಿಮೆಂಟ್ ಫೋಟೋ ಸಖತ್ ವೈರಲ್ ಆಗುತ್ತಿದೆ.
ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಆರ್ಸಿಬಿ ನೇರವಾಗಿ ಫೈನಲ್ ಗೆ ಎಂಟ್ರಿಕೊಟ್ಟಿತ್ತು. ಮತ್ತೊಂದು ಕಡೆ ಕ್ವಾಲಿಫೈಯರ್ 2 ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ಟೈಟಲ್ ಫೈಟ್ಗಾಗಿ ಫೈನಲ್ಗೆ ಬಂದಿದೆ. ಭಾನುವಾರ ರಾತ್ರಿ ಈ ಮ್ಯಾಚ್ ನಡೆಯಲಿದ್ದು, ಆದರೆ ಫೈನಲ್ ಮ್ಯಾಚ್ ಮುನ್ನ ಹಾರ್ದಿಕ್ ಪಾಂಡ್ಯ ಸೆಂಟಿಮೆಂಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಜೋರು ಚರ್ಚೆ ನಡೆಯುತ್ತಿದ್ದು, ಈ ಸೆಂಟಿಮೆಂಟ್ ಅನ್ವಯ, ಗುಜರಾತ್ ಅಭಿಮಾನಿಗಳು ಟೈಟಲ್ ನಮ್ದೆ ಅಂತಿದ್ದಾರೆ. ಅಷ್ಟಕ್ಕೂ ಆ ಸೆಂಟಿಮೆಂಟ್ ಏನಪ್ಪಾ? ಸಡನ್ ಆಗಿ ಯಾಕೆ ಇದು ಚರ್ಚೆಗೆ ಬಂತು? ಅಂತ ಹೇಳ್ತೀವಿ ಕೇಳಿ.
ಐಪಿಎಲ್ ಆರಂಭಕ್ಕೂ ಮುನ್ನ ಪ್ರತಿಯೊಂದು ಆವೃತ್ತಿಯ ಆರಂಭದಲ್ಲಿ ಎಲ್ಲಾ ತಂಡಗಳ ನಾಯಕರೊಂದಿಗೆ ಫೋಟೋಶೂಟ್ ನಡೆಯುತ್ತದೆ. ಕಳೆದ 19 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ವೇಳೆ ಟ್ರೋಫಿಯೊಂದಿಗೆ ಕ್ಯಾಪ್ಟನ್ ಗಳು ಪೋಸ್ ನೀಡುತ್ತಾರೆ. ಆದರೆ ಈ ಫೋಟೋ ಶೂಟ್ ನಲ್ಲಿ 2023, 2024 ಮತ್ತು 2025ರ ಆವೃತ್ತಿಗಳಲ್ಲಿ ಹಾರ್ದಿಕ್ ಪಾಂಡ್ಯ ಪಕ್ಕ ಇರುವ ನಾಯಕರೇ ಕಪ್ ಗೆದ್ದು ಬೀಗಿದ್ದಾರೆ. ಈ ಆವೃತ್ತಿಯ ಆರಂಭದಲ್ಲೂ ಗುಜರಾತ್ ಟೈಟಾನ್ಸ್ ನಾಯಕ ಶುಭ್ ಮನ್ ಗಿಲ್, ಹಾರ್ದಿಕ್ ಪಾಂಡ್ಯ ಪಕ್ಕ ನಿಂತಿದ್ದಾರೆ. ಇದರಂತೆ ಗುಜರಾತ್ ತಂಡಕ್ಕೆ ಗೆಲುವು ಫಿಕ್ಸ್ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ.
ಐಪಿಎಲ್ 2023ರಲ್ಲಿ ಸಿಎಸ್ಕೆ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಆ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಆಗ ಫೋಟೋ ಶೂಟ್ ನಲ್ಲಿ ಸಿಎಸ್ಕೆ ನಾಯಕ ಧೋನಿ, ಹಾರ್ದಿಕ್ ಪಕ್ಕದಲ್ಲಿ ನಿಂತಿದ್ದರು.
ಐಪಿಎಲ್ 2024ರಲ್ಲಿ ಕೆಕೆಆರ್: 2024ರ ಆವೃತ್ತಿಯಲ್ಲಿ ಮುಂಬೈ ತಂಡಕ್ಕೆ ಬಂದಿದ್ದ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿ ಫೋಟೋ ಶೂಟ್ ವೇಳೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ನಿಂತು ಪೋಸ್ ಕೊಟ್ಟಿದ್ದರು. ಈ ಆವೃತ್ತಿಯಲ್ಲಿ ಕೆಕೆಆರ್ ಕಪ್ ಗೆದ್ದಿತ್ತು.
ಐಪಿಎಲ್ 2025ರ ಆವೃತ್ತಿಯಲ್ಲಿ ಆರ್ಸಿಬಿ: ಬೆಂಗಳೂರು ತಂಡ 18 ವರ್ಷಗಳ ಬಳಿಕ ಕಳೆದ ಆವೃತ್ತಿಯಲ್ಲಿ ಕಪ್ ಗೆದ್ದಿತ್ತು. ಆಗ ಆರ್ಸಿಬಿ ನಾಯಕ ಪಟಿದಾರ್, ಪಾಂಡ್ಯ ಪಕ್ಕ ನಿಂತಿದ್ದರು. ಇದರಂತೆ ಈ ಬಾರಿ ಗುಜರಾತ್ ಕಪ್ ಗೆಲ್ಲಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
May 31, 2026 12:14 PM IST













