Last Updated:
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಮತ್ತೆ ಗಾಯವಾಗಿದೆ. ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ (Maisa) ಚಿತ್ರೀಕರಣದ ವೇಳೆ ಸೊಂಟದ ಸ್ನಾಯುವಿಗೆ ತೀವ್ರ ಗಾಯವಾಗಿದ್ದು, ಈ ಕುರಿತು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಮತ್ತೆ ಗಾಯವಾಗಿದೆ. ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ‘ಮೈಸಾ’ (Maisa) ಚಿತ್ರೀಕರಣದ ವೇಳೆ ಸೊಂಟದ ಸ್ನಾಯುವಿಗೆ ತೀವ್ರ ಗಾಯವಾಗಿದ್ದು, ಈ ಕುರಿತು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಕಳೆದ ಕೆಲವು ತಿಂಗಳಲ್ಲಿ ತಮಗೆ ಸಂಭವಿಸಿರುವ ಮೂರನೇ ಗಾಯ ಎಂದು ಹೇಳಿರುವ ರಶ್ಮಿಕಾ, ತಮ್ಮ ದೇಹವನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕೆಂಬ ಪಾಠ ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ಸತತವಾಗಿ ಗಾಯಗೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗಾಯಗಳಾಗುವುದು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಈ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದುಕೊಂಡಿದ್ದೆ. ಆದರೆ ಇದು ನನಗೆ ಆಗುತ್ತಿರುವ ಮೂರನೇ ಗಾಯ. ನನ್ನ ದೇಹವನ್ನು ಯಂತ್ರದಂತೆ ಬಳಸದೇ, ಮನುಷ್ಯನ ದೇಹದಂತೆ ಕಾಳಜಿಯಿಂದ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಹಾಗೆಯೇ ಮೈಸಾ ಚಿತ್ರದ ಡ್ಯಾನ್ಸ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ಈ ಗಾಯ ಸಂಭವಿಸಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಸೊಂಟವನ್ನು ಕಾಲಿಗೆ ಜೋಡಿಸುವ ನಾಲ್ಕು ಪ್ರಮುಖ ಸ್ನಾಯುಗಳಲ್ಲಿ ಒಂದಾದ ಬಲಭಾಗದ ಸ್ನಾಯು ತುಂಡಾಗಿದೆ. ಈ ಕಾರಣದಿಂದ ಕಾಲನ್ನು ಸರಿಯಾಗಿ ಎತ್ತಲು ಸಾಧ್ಯವಾಗುತ್ತಿಲ್ಲ. ಸ್ನಾಯು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವೇ ಸಾಮಾನ್ಯ ಚಟುವಟಿಕೆಗಳಿಗೆ ಮರಳಲು ಸಾಧ್ಯ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಆಕ್ಷನ್ ಹಾಗೂ ಡ್ಯಾನ್ಸ್‌ಗೆ ಹೆಚ್ಚು ಒತ್ತು ನೀಡಿರುವ ಈ ಚಿತ್ರದ ಚಿತ್ರೀಕರಣದ ವೇಳೆ ಗಾಯವಾಗಿರುವುದು ಬೇಸರ ತಂದಿದ್ದರೂ, ಸಂಪೂರ್ಣ ಗುಣಮುಖರಾದ ನಂತರ ಮತ್ತೆ ಚಿತ್ರೀಕರಣಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಾಯದ ನಡುವೆಯೂ ಹಾಸ್ಯಮಯವಾಗಿ ಪ್ರತಿಕ್ರಿಯಿಸಿರುವ ರಶ್ಮಿಕಾ, ನಾನು ಯಾವತ್ತೂ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ದೇವರೇ ನನಗೆ ಬಲವಂತದ ರಜೆ ಕೊಟ್ಟಿರಬೇಕು ಅನಿಸುತ್ತದೆ ಎಂದು ಹೇಳಿದ್ದಾರೆ. ಸದ್ಯ ನೋವು ಸಹಿಸಿಕೊಳ್ಳಬಹುದಾದ ಮಟ್ಟದಲ್ಲಿದೆ. ಆದರೆ ವರ್ಕೌಟ್ ಮತ್ತು ರನ್ನಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಪುಸ್ತಕ ಓದುವುದು, ಪಜಲ್ಸ್ ಬಿಡಿಸುವುದು ಮತ್ತು ಅಭಿಮಾನಿಗಳು ಕಳುಹಿಸಿರುವ ಉಡುಗೊರೆಗಳನ್ನು ಸ್ವೀಕರಿಸುತ್ತಾ ಸಮಯ ಕಳೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹಾಗೆಯೇ ನೀವು ಚಿಂತಿಸಬೇಡಿ, ನಾನು ಬೇಗ ಗುಣಮುಖಳಾಗಿ ಮತ್ತೆ ಕೆಲಸಕ್ಕೆ ಮರಳುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಈ ಚಿತ್ರವು 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ರಶ್ಮಿಕಾ ಅವರ ಅಭಿಮಾನಿಗಳು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Bangalore [Bangalore],Bangalore,Karnataka
Aug 03, 2026 10:41 PM IST














