Last Updated:
ಟಿಟಿಪಿಯಿಂದಾಗಿ, ಪಾಕಿಸ್ತಾನ ಮತ್ತು ನೆರೆಯ ಅಫ್ಘಾನಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದ್ದು, ಇಸ್ಲಾಮಾಬಾದ್ ಕಾಬೂಲ್ ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದೆ.
ಇಸ್ಲಾಮಾಬಾದ್: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪೊಲೀಸ್ ಠಾಣೆ ಬಳಿ ಭಾನುವಾರ ನಡೆಯುತ್ತಿದ್ದ (Pakistan Blast) ಶಾಂತಿ ರ್ಯಾಲಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ನಡೆಸಿದ (Suicide Bomber) ದಾಳಿಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾತ್ ಜಿಲ್ಲೆಯ ಕಬಲ್ ಪಟ್ಟಣದಲ್ಲಿ ಸ್ವಾತ್ ಶಾಂತಿ ರ್ಯಾಲಿ ನಡೆಯುತ್ತಿದ್ದಾಗ ದಾಳಿಕೋರನು ತನ್ನ ಸ್ಫೋಟಕ ಉಡುಪನ್ನು ಸ್ಫೋಟಿಸಿಕೊಂಡಿದ್ದು, ಇದು ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿ ಗೊಂದಲಕ್ಕೆ ಕಾರಣವಾಯಿತು. ಸ್ಫೋಟ ಸಂಭವಿಸಿದ ಕೂಡಲೇ, ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು.
ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ಸ್ವಾತ್ ಅಮಾನ್ ಜಿರ್ಗಾ (ಸ್ಥಳೀಯ ಬುಡಕಟ್ಟು ಮಂಡಳಿ) ಈ ರ್ಯಾಲಿಯನ್ನು ಆಯೋಜಿಸಿತ್ತು. ಈ ಪ್ರತಿಭಟನೆಯಲ್ಲಿ ಉಗ್ರರು ಗುರಿಯಿಟ್ಟುಕೊಂಡ ದಾಳಿಗಳು ಮತ್ತು ಆತ್ಮಹತ್ಯಾ ಬಾಂಬ್ ದಾಳಿಗಳಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶದಲ್ಲಿ ಶಾಂತಿ ನೆಲೆಸಬೇಕೆಂದು ಒತ್ತಾಯಿಸಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು ಎಂದು ತಿಳಿದು ಬಂದಿದೆ.
ಇಲ್ಲಿಯವರೆಗೆ ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಆತ್ಮಾಹುತಿ ಬಾಂಬ್ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ. ಪಾಕಿಸ್ತಾನಿ ಮಿಲಿಟರಿ ಅಧಿಕಾರಿಯೊಬ್ಬರ ಪ್ರಕಾರ, ಉಗ್ರಗಾಮಿಗಳಿಂದಾಗಿ ಖೈಬರ್ ಪಖ್ತುಂಖ್ವಾದಲ್ಲಿ 819 ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಟಿಟಿಪಿಯಿಂದಾಗಿ, ಪಾಕಿಸ್ತಾನ ಮತ್ತು ನೆರೆಯ ಅಫ್ಘಾನಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದ್ದು, ಇಸ್ಲಾಮಾಬಾದ್ ಕಾಬೂಲ್ ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದೆ.
‘ಪಾಕಿಸ್ತಾನದ ನೀತಿಗಳು ಮಾರ್ಗಗಳನ್ನು ಮುಚ್ಚುವುದು ಮತ್ತು ಅಫಘಾನ್ ವ್ಯಾಪಾರಿಗಳಿಗೆ ಅಡೆತಡೆಗಳನ್ನು ಸೃಷ್ಟಿಸುವುದು, ಇದು ನಮ್ಮ ಸಂಬಂಧಗಳಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಆದರೆ ನಾವು ಈ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತೇವೆ. ಅವು ಯಾವುದೇ ಕಡೆಯವರಿಗೆ ಪ್ರಯೋಜನವನ್ನು ನೀಡುವುದಿಲ್ಲ ಎಂಬ ಕಾರಣಕ್ಕೆ ಅವು ಮುಂದುವರಿಯಬೇಕೆಂದು ನಾವು ಬಯಸುವುದಿಲ್ಲ’ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಭಾನುವಾರ ಹೇಳಿರುವುದಾಗಿ ಅಮು ಟಿವಿ ವರದಿ ಮಾಡಿದೆ.














