Last Updated:
Rajnath Singhs Stern Warning to Pakistan: ಶಾಂತಿ ಮತ್ತು ಸೌಹಾರ್ದತೆಯ ಭಾಷೆ ಅರ್ಥವಾಗದವರಿಗೆ ಅವರದ್ದೇ ಶೈಲಿಯಲ್ಲಿ ಹೇಗೆ ಉತ್ತರ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಚೆನ್ನಾಗಿ ಗೊತ್ತು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು.
ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ (Pahalgam Attack) ದಾಳಿಯ ನಂತರ ಕೇಂದ್ರ ಸರ್ಕಾರದ ಅಚಲ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಅವರು, ಭಾರತ ಸರ್ಕಾರವು ಸಿಂಧೂ ನದಿಯ ನೀರನ್ನು ಭಯೋತ್ಪಾದನೆಯನ್ನು ಪ್ರಾಯೋಜಿಸುವವರಿಗೆ ತಲುಪಲು ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ತೆಲಂಗಾಣ ಬಿಜೆಪಿ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ‘ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಜೊತೆ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ್ದೇವೆ. ಕಣ್ಣೀರು ಬತ್ತಿಹೋದವರು ನಮ್ಮಿಂದ ನೀರನ್ನು ನಿರೀಕ್ಷಿಸಬಾರದು ಎಂದು ನಾವು ಹೇಳಿದ್ದೇವೆ. ಸಿಂಧೂ ನದಿಯ ನೀರು ಭಯೋತ್ಪಾದಕರ ಪೋಷಕರಿಗೆ ಮತ್ತು ಮಾನವೀಯತೆಯ ಶತ್ರುಗಳಿಗೆ ತಲುಪಲು ನಾವು ಬಿಡುವುದಿಲ್ಲ’ ಎಂದು ಹೇಳಿದರು.
ಶಾಂತಿ ಮತ್ತು ಸೌಹಾರ್ದತೆಯ ಭಾಷೆ ಅರ್ಥವಾಗದವರಿಗೆ ಅವರದ್ದೇ ಶೈಲಿಯಲ್ಲಿ ಹೇಗೆ ಉತ್ತರ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಚೆನ್ನಾಗಿ ಗೊತ್ತು ಎಂದು ಎಚ್ಚರಿಸಿದ ರಾಜನಾಥ್ ಸಿಂಗ್, ‘ತಮ್ಮದೇ ಭಾಷೆಯಲ್ಲಿ’ ಶಾಂತಿ ಮತ್ತು ಸೌಹಾರ್ದತೆಯ ಭಾಷೆಯನ್ನು ಅರ್ಥಮಾಡಿಕೊಳ್ಳದವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ ಎಂಬುದನ್ನು ಆಪರೇಷನ್ ಸಿಂಧೂರ್ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.
ಇಂದು ಜಾಗತಿಕ ಮಟ್ಟದಲ್ಲಿ ಭಾರತ ಒಂದು ಅತ್ಯಂತ ನಂಬಿಕಸ್ಥ ದೇಶವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜಗತ್ತಿಗೆ ಸಹಾಯ ಮಾಡಿದ ಭಾರತವನ್ನು ವಿಶ್ವಬಂಧು ಎಂದು ಕರೆಯುತ್ತಾರೆ ಎಂದ ಕೇಂದ್ರ ರಕ್ಷಣಾ ಸಚಿವರು, ಭಾರತದ ಬಳಿ ಕೇವಲ ಕೋವಿಡ್ ವ್ಯಾಕ್ಸಿನ್‌ಗಳು ಮಾತ್ರವಿಲ್ಲ, ಶತ್ರುಗಳ ಹೆಡೆಮುರಿ ಕಟ್ಟಲು ಬ್ರಹ್ಮೋಸ್ ಕ್ಷಿಪಣಿ ಕೂಡ ಇದೆ ಎಂಬುದನ್ನು ಶತ್ರುಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಳೆದ 12 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಡಿಫೆನ್ಸ್ ಸೆಕ್ಟರ್‌ನ (Defence Sector) ಸಾಧನೆಗಳನ್ನು ವಿವರಿಸಿದ ರಾಜನಾಥ್ ಸಿಂಗ್, ನಾನು ಹೋಮ್ ಮಿನಿಸ್ಟರ್ ಆಗಿದ್ದಾಗ (2014-2019) 2.5 ಲಕ್ಷ ಕೋಟಿ ರೂ. ಇದ್ದ ರಕ್ಷಣಾ ಬಜೆಟ್ ಈಗ 8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಸ್ತುತ ಭಾರತದ ಡಿಫೆನ್ಸ್ ಪ್ರೊಡಕ್ಷನ್ 1.50 ಲಕ್ಷ ಕೋಟಿ ರೂ. ತಲುಪಿದ್ದು, ಶೀಘ್ರದಲ್ಲೇ 1.7 ಲಕ್ಷ ಕೋಟಿ ರೂ. ದಾಟಲಿದೆ. ನಾವು ಜಗತ್ತಿನ ಸುಮಾರು 100 ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ಎಕ್ಸ್‌ಪೋರ್ಟ್ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶವನ್ನು ನಕ್ಸಲ್‌ನಿಂದ ಮುಕ್ತಗೊಳಿಸಲಾಗುತ್ತಿದೆ. ಉತ್ತರಾಖಂಡದಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ (UCC) ಜಾರಿಗೆ ತರಲಾಗಿದ್ದು, ವಕ್ಫ್ ಕಾನೂನುಗಳಿಗೂ ಸುಧಾರಣೆ ತರಲಾಗಿದೆ. ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಅಕ್ರಮ ನುಸುಳುಕೋರರನ್ನು ಹೊರಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
(ವರದಿ: ದಿವ್ಯಶ್ರೀ ಬೇಡರ್)
Hyderabad,Telangana














