Last Updated:
ರಾಜ್ಯದಲ್ಲಿ ಇಂದಿನಿಂದ ಮಳೆಯ ಆರ್ಭಟ ಮುಂದುವರಿಯಲಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅಕ್ಟೋಬರ್ 15ರಿಂದ ರಾಜ್ಯದಲ್ಲಿ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಇಂದಿನಿಂದ ಮಳೆಯ ಆರ್ಭಟ ಜೋರಾಗಲಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ಹಲವು ಕಡೆಗಳಲ್ಲಿ ವರುಣ ದೇವ ಕೃಪೆ ತೋರಲಿದ್ದು, ಕೆಲವೆಡೆ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ.
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದರೊಂದಿಗೆ ತುಮಕೂರು, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಕ್ಟೊಬರ್ 11ರಿಂದ ಮಳೆ ಕಡಿಮೆಯಾಗಲಿದ್ದರೂ, ಅಕ್ಟೊಬರ್ 15, 16ರಿಂದ ಹಿಂಗಾರು ಆರಂಭವಾಗುವ ಲಕ್ಷಣಗಳಿವೆ.
ಕೊಡಗು ಜಿಲ್ಲೆಯ ಅಲ್ಲಲ್ಲಿ, ಹಾಸನದ ಸಕ್ಲೇಶಪುರ ಸುತ್ತಮುತ್ತ ಮಧ್ಯಾಹ್ನ ನಂತರ, ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಭಾಗಗಳಲ್ಲಿ ಮಧ್ಯಾಹ್ನ ನಂತರ, ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಅಥವಾ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಉತ್ತರ ಕಡೆಯಿಂದ ಶುಷ್ಕ ಗಾಳಿ ಬೀಸುತ್ತಿರುವ ಕಾರಣದಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಗಳು ಕಡಿಮೆಯಾಗಿದೆ. ಈಗಿನ ಪರಿಸ್ಥಿತಿ ಬದಲಾಗಿ, ಅಕ್ಟೊಬರ್ 15ರಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲೂ ಹಿಂಗಾರು ಮಳೆ ಆರಂಭವಾಗುವ ಸೂಚನೆಗಳಿವೆ.
ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇವತ್ತು ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದರೂ ಗಾಳಿಯ ಒತ್ತಡ ಹೆಚ್ಚಿದ್ದರೆ ಸಂಜೆ ಹಾಗೂ ರಾತ್ರಿ ಮೈಸೂರು, ಹಾಸನ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳ ಅಲ್ಲಲ್ಲಿ ಅನಿರೀಕ್ಷಿತ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಕ್ಟೊಬರ್ 11ರಿಂದ ಮಳೆ ಕ್ಷೀಣಿಸವ ಸಾಧ್ಯತೆಗಳಿದ್ದರೂ, ಅಕ್ಟೊಬರ್ 15ರಿಂದ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ.













