PM-KISAN: ರೈತರಿಗಾಗಿ 3.15 ಲಕ್ಷ ಕೋಟಿ ಮೀಸಲಿಟ್ಟ ಕೇಂದ್ರ; ಇನ್ನೂ 5 ವರ್ಷ ಅನ್ನದಾತನ ಬ್ಯಾಂಕ್‌ ಖಾತೆಗೆ ನೇರ ಹಣ ಜಮಾ! | | ACTPnews

ಪಿಎಂ ಕಿಸಾನ್


Last Updated:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2030-31ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ₹3.15 ಲಕ್ಷ ಕೋಟಿ ಮಂಜೂರು ಮಾಡಿದೆ. ಅರ್ಹ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ಮುಂದುವರಿಯಲಿದೆ.

ಪಿಎಂ ಕಿಸಾನ್
ಪಿಎಂ ಕಿಸಾನ್

ಬೆಂಗಳೂರು: ದೇಶದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿಯೊಂದನ್ನು (Good News) ನೀಡಿದ್ದು, 2026-27ರಿಂದ 2030-31ರವರೆಗಿನ ಮುಂದಿನ ಐದು ವರ್ಷಗಳ (Five Year) ಕಾಲ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-KISAN) ಯೋಜನೆಯನ್ನು ಮುಂದುವರಿಸಲು ಕೇಂದ್ರ ಸಚಿವ ಸಂಪುಟ (Cabinet) ಐತಿಹಾಸಿಕ ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಗಾಗಿ ಬರೋಬ್ಬರಿ ₹3.15 ಲಕ್ಷ ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಇದರಿಂದ ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ಪ್ರತಿ ವರ್ಷ ₹6,000 ಆರ್ಥಿಕ ನೆರವು ಯಾವುದೇ ಕಡಿತವಿಲ್ಲದೆ ನೇರವಾಗಿ ಜಮೆಯಾಗುವುದು ಖಚಿತವಾಗಿದೆ. ಈ ಮಹತ್ವದ ನಿರ್ಧಾರದಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಭದ್ರತೆ ಮತ್ತಷ್ಟು ಬಲವಾಗಲಿದೆ.

ರೈತರ ಬ್ಯಾಂಕ್‌ ಖಾತೆಗೆ ನೇರ ಹಣ!

ಫೆಬ್ರವರಿ 2019ರಲ್ಲಿ ಶುರುವಾದ ಈ ಮಹತ್ವಾಕಾಂಕ್ಷಿ ಯೋಜನೆಯಡಿ, ಆಧಾರ್ ದೃಢೀಕರಣ ಮತ್ತು ಡಿಜಿಟಲ್ ಪರಿಶೀಲನೆಯೊಂದಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ವ್ಯವಸ್ಥೆಯ ಮೂಲಕ ಯಾವುದೇ ಮಧ್ಯವರ್ತಿಗಳಿಲ್ಲದೆ ಪಾರದರ್ಶಕವಾಗಿ ಮೂರು ಸಮಾನ ಕಂತುಗಳಲ್ಲಿ ರೈತರಿಗೆ ಹಣ ಪಾವತಿಯಾಗುತ್ತಿದೆ. ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 23 ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರಿ ಪ್ರಮಾಣದ ಅಂದರೆ ₹4.47 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಇತ್ತೀಚಿನ 23ನೇ ಕಂತಿನಲ್ಲೇ ದೇಶದ 9.49 ಕೋಟಿಗೂ ಹೆಚ್ಚು ರೈತರು ಬರೋಬ್ಬರಿ ₹18,984 ಕೋಟಿಗೂ ಅಧಿಕ ಮೊತ್ತವನ್ನು ತಮ್ಮ ಖಾತೆಗೆ ಪಡೆದುಕೊಂಡಿರುವುದು ಈ ಯೋಜನೆಯ ಬೃಹತ್ ವ್ಯಾಪ್ತಿಗೆ ಸಾಕ್ಷಿಯಾಗಿದೆ.

ಮಹಿಳಾ ರೈತರಿಗೆ ಅತ್ಯಂತ ಪುಷ್ಟಿದಾಯಕ ಯೋಜನೆ

ಕೇವಲ ಸಾಮಾನ್ಯ ದಿನಗಳಲ್ಲಿ ಮಾತ್ರವಲ್ಲದೆ, ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಮಹಾಮಾರಿಯ ಸಂಕಷ್ಟದ ಸಮಯದಲ್ಲೂ ರೈತರ ಕೈಹಿಡಿದ ಕೇಂದ್ರ ಸರ್ಕಾರ, ₹1.71 ಲಕ್ಷ ಕೋಟಿ ಹಣವನ್ನು ಇದೇ ಯೋಜನೆಯಡಿ ಬಿಡುಗಡೆ ಮಾಡಿ ಜೀವ ತುಂಬಿತ್ತು. ಅಷ್ಟೇ ಅಲ್ಲ, ಮಹಿಳಾ ಸಬಲೀಕರಣಕ್ಕೂ ಈ ಯೋಜನೆ ಅತಿದೊಡ್ಡ ಕೊಡುಗೆ ನೀಡುತ್ತಿದ್ದು, ಇದುವರೆಗೆ ₹1.06 ಲಕ್ಷ ಕೋಟಿಗೂ ಹೆಚ್ಚು ಹಣ ನೇರವಾಗಿ ಮಹಿಳಾ ರೈತರ ಖಾತೆಗೆ ಸೇರಿದೆ. ಆಶ್ಚರ್ಯದ ಸಂಗತಿಯೆಂದರೆ, ಪಿಎಂ-ಕಿಸಾನ್ ಯೋಜನೆಯ ಪ್ರತಿ ನಾಲ್ಕು ಫಲಾನುಭವಿಗಳಲ್ಲಿ ಒಬ್ಬರು ಮಹಿಳಾ ರೈತರು ಎಂಬುದು ಸರ್ಕಾರದ ಅಂಕಿ-ಅಂಶಗಳಿಂದ ದೃಢಪಟ್ಟಿದೆ.
ಶೇ. 85ರಷ್ಟು ಫಲಾನುಭವಿಗಳು ಕೃಷಿ ಆದಾಯ ಹೆಚ್ಚಳ

ರೈತರು ಈ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡದೆ, ಬೀಜ ಖರೀದಿ, ರಸಗೊಬ್ಬರ, ನೀರಾವರಿ, ಕೃಷಿ ಯಂತ್ರೋಪಕರಣ ಹಾಗೂ ಇನ್ನಿತರ ಅಗತ್ಯ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಉಪಯುಕ್ತವಾಗಿ ಬಳಸುತ್ತಿದ್ದಾರೆ. ನೀತಿ ಆಯೋಗದ ಡೆವಲಪ್‌ಮೆಂಟ್ ಮಾನಿಟರಿಂಗ್ ಅಂಡ್ ಇವಾಲ್ಯುಯೇಷನ್ ಆಫೀಸ್ (DMEO) ನಡೆಸಿದ ಸಮೀಕ್ಷೆ ಈ ಸತ್ಯವನ್ನು ಬಯಲು ಮಾಡಿದ್ದು, ಶೇ. 92ಕ್ಕೂ ಹೆಚ್ಚು ರೈತರು ಈ ಹಣವನ್ನು ಕೃಷಿ ಹೂಡಿಕೆಗೆ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಶೇ. 85ರಷ್ಟು ಫಲಾನುಭವಿಗಳು ಕೃಷಿ ಆದಾಯ ಹೆಚ್ಚಾಗಿದ್ದು, ಅನೌಪಚಾರಿಕ ಹಾಗೂ ಖಾಸಗಿ ಸಾಲಗಳ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ₹6,000 ಆರ್ಥಿಕ ನೆರವು

ಇದನ್ನೂ ಓದಿ: Just Clean Bengaluru: ಖಾಲಿ ಸೈಟ್ ಇಟ್ಟಿದ್ದೀರಾ? ದುಪ್ಪಟ್ಟು ತೆರಿಗೆ, ಸೈಟ್ ವಾಪಸ್! ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ

ಈ ಯೋಜನೆಯ ನೇರ ಪರಿಣಾಮವಾಗಿ ದೇಶದ ಕೃಷಿ ವಲಯದಲ್ಲಿ ಅದ್ಭುತ ಬೆಳವಣಿಗೆಯಾಗಿದ್ದು, 2020-21ರಿಂದ 2025-26ರ ಅವಧಿಯಲ್ಲಿ ಕೃಷಿ ವಿಸ್ತೀರ್ಣವು ಸುಮಾರು 9.65% ರಷ್ಟು ಹಾಗೂ ಉತ್ಪಾದಕತೆ 10.53% ರಷ್ಟು ಹೆಚ್ಚಳ ಕಂಡಿದೆ. ಒಟ್ಟಾರೆಯಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ 21.18% ರಷ್ಟು ಭಾರೀ ಏರಿಕೆಯಾಗಿದ್ದು, ಇದಕ್ಕೆ ಪಿಎಂ-ಕಿಸಾನ್ ಸೇರಿದಂತೆ ಸರ್ಕಾರದ ರೈತಪರ ಯೋಜನೆಗಳೇ ಪ್ರಮುಖ ಕಾರಣ ಎಂದು ಕೇಂದ್ರ ತಿಳಿಸಿದೆ. ಇದೀಗ 2030-31ರವರೆಗೆ ಈ ಯೋಜನೆ ವಿಸ್ತರಣೆಯಾಗಿರುವುದರಿಂದ, ಕೃಷಿ ಹೂಡಿಕೆಗೆ ವರ್ಷಕ್ಕೆ ₹6,000 ನಿರಂತರ ಬೆಂಬಲ ಸಿಗಲಿದ್ದು, ಮುಂದಿನ ದಿನಗಳಲ್ಲಿ ರೈತರ ಆರ್ಥಿಕ ಸ್ಥಿರತೆ ಮತ್ತಷ್ಟು ಉತ್ತುಂಗಕ್ಕೇರುವುದು ನಿಸ್ಸಂದೇಹ!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports