Last Updated:
ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ಪವಿತ್ರಾ ಗೌಡಗೆ ಮನೆಯೂಟವೂ ಬರುತ್ತೆ, ತುಂಬಾ ಐಷಾರಾಮಿಯಾಗಿ ಜೈಲಲ್ಲಿ ಪವಿತ್ರಾ ಗೌಡ ಇದ್ದಾರೆ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿದೆ. ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ (Sandhya Pavitra Nagaraj) ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಕಾಲು ಒತ್ತುತ್ತಾರೆ, ಪವಿತ್ರಾಗೌಡಗೆ ಮನೆಯೂಟವೂ ಬರುತ್ತೆ, ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂದು ಆರೋಪ ಮಾಡಿದ್ದು, ಈ ಹಿನ್ನೆಲೆ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.
ಇನ್ನು ಈ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್ ನ್ಯೂಸ್ 18 ಜೊತೆ ಮಾತನಾಡಿದ್ದು, ಪವಿತ್ರಾ ಗೌಡಗೆ ರಾಜಾತಿಥ್ಯ ಸಿಗ್ತಾ ಇದೆ ಎನ್ನುವ ನನ್ನ ಆರೋಪಕ್ಕೆ ಈಗಲೂ ಬದ್ಧ ಎಂದು ಹೇಳಿದ್ದಾರೆ. ನನ್ನ ಮೇಲೆ NCR ದಾಖಲು ಮಾಡಿದ್ದಾರೆ, ನಾನು ಪ್ರಕರಣ ಎದುರಿಸುತ್ತೇನೆ, ನಾನು ಸತ್ಯವನ್ನ ಹೇಳಿರೋದು, ಮೂರು ತಿಂಗಳು ನಾನು ಜೈಲಲ್ಲಿದ್ದಾಗ ನಡೆದಿರೋದನ್ನ ಹೇಳಿದ್ದೇನೆ. ಅಧಿಕಾರಿಗಳ ಗಮನಕ್ಕಿದ್ದೇ ಪವಿತ್ರಾ ಗೌಡಗೆ ರಾಜಾಥಿತ್ಯ ಸಿಗ್ತಾ ಇತ್ತು, ನನಗೆ ಪೊಲೀಸ್ ಠಾಣೆಯಿಂದ ಇದುವರೆಗೂ ಕರೆ ಬಂದಿಲ್ಲ, ಪೊಲೀಸರು ಕರೆ ಮಾಡಿದ್ರೆ ನಾನು ಎಲ್ಲಾ ಮಾಹಿತಿ ಕೊಡ್ತೇನೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಜೈಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದ್ರೆ ಎಲ್ಲವೂ ಗೊತ್ತಾಗಲಿದೆ, ಜೈಲಿನಲ್ಲಿ ಕ್ಯಾಮೆರಾ ಇರೋದೆ ಹೌದಾದ್ರೆ ಪರಿಶೀಲನೆ ಮಾಡಲಿ, ಈಗಲೂ ನಾನು ಆರೋಪವನ್ನ ಮಾಡ್ತೇನೆ, ಬೇರೆ ಆರೋಪಿಗಳಿಗೆ ಸಿಗದ ಸೌಲಭ್ಯ ಪವಿತ್ರಾಗೌಡಗೆ ಸಿಕ್ತಿದೆ ಎಂದು ಮತ್ತೆ ಆರೋಪ ಮಾಡಿದ್ದಾರೆ.
(ವರದಿ: ಕಾರ್ತಿಕ್ ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka













