Last Updated:
Operation Ghadi: ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಬೆನ್ನಲ್ಲೇ, ‘ಆಪರೇಷನ್ ಘಡಿ’ ಸದ್ದು ಮಾಡುತ್ತಿದೆ. ಅದರಂತೆ, ಎನ್ಸಿಪಿ ಶರದ್ ಪವಾರ್ ಬಣದ ನಾಲ್ವರು ಪ್ರಭಾವಿ ಶಾಸಕರು ಮಹಾಯುತಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ.
ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಆಪರೇಷನ್ ಟೈಗರ್ (Operation Tiger) ಬೆನ್ನಲ್ಲೇ, ‘ಆಪರೇಷನ್ ಘಡಿ’ (Operation Ghadi) ಸದ್ದು ಮಾಡುತ್ತಿದೆ. ಅದರಂತೆ, ಎನ್ಸಿಪಿ ಶರದ್ ಪವಾರ್ ಬಣದ (NCP Sharad Pawar faction) ನಾಲ್ವರು ಪ್ರಭಾವಿ ಶಾಸಕರು ಮಹಾಯುತಿ (Mahayuti) ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ.
ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನವೇ ರಾಜಕೀಯ ಚದುರಂಗದಾಟ ಬಿರುಸುಗೊಂಡಿದೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷದ ಸೋಲಾಪುರ ಜಿಲ್ಲೆಯ ನಾಲ್ವರು ಶಾಸಕರು ಮಹಾಯುತಿ ಮೈತ್ರಿಕೂಟದ ಸಂಪರ್ಕದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಎನ್ಸಿಪಿ ವಕ್ತಾರ ಉಮೇಶ್ ಪಾಟೀಲ್ ನೀಡಿದ ಹೇಳಿಕೆ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಎನ್ಸಿಪಿ ಶರದ್ ಚಂದ್ರ ಪವಾರ್ ಪಕ್ಷವು ತಕ್ಷಣವೇ ಎಚ್ಚೆತ್ತುಕೊಂಡಿದ್ದು, ತನ್ನ ಎಲ್ಲಾ ಶಾಸಕರು ಹಾಗೂ ಸಂಸದರೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ. ಮುಂದಿನ ಒಂದೆರಡು ದಿನಗಳಲ್ಲಿ ಪಕ್ಷದ ಸಂಸದರ ತುರ್ತು ಸಭೆಯನ್ನೂ ಕರೆಯಲಾಗಿದೆ.
ಉಮೇಶ್ ಪಾಟೀಲ್ ಅವರ ಹೇಳಿಕೆಯ ಪ್ರಕಾರ, ಮಹಾಯುತಿ ಮೈತ್ರಿಕೂಟದ ಸಂಪರ್ಕದಲ್ಲಿರುವ ಆ ನಾಲ್ವರು ಶಾಸಕರು ಸೋಲಾಪುರ ಜಿಲ್ಲೆಗೆ ಸೇರಿದವರಾಗಿದ್ದಾರೆ. ಮಲ್ಶಿರಾಸ್ ಕ್ಷೇತ್ರದ ಶಾಸಕ ಉತ್ತಮ್ ಜಂಕರ್, ಮಾಧಾ ಕ್ಷೇತ್ರದ ಶಾಸಕ ಅಭಿಜಿತ್ ಪಾಟೀಲ್, ಕರ್ಮಲಾ ಕ್ಷೇತ್ರದ ಶಾಸಕ ನಾರಾಯಣ್ ಪಾಟೀಲ್ ಮತ್ತು ಮೊಹೋಲ್ ಕ್ಷೇತ್ರದ ಶಾಸಕ ರಾಜು ಖರೆ ಅವರು ಮಹಾಯುತಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಈ ನಾಲ್ವರು ಶಾಸಕರು ಮಹಾಯುತಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದಾರೆ ಹಾಗೂ ತಮ್ಮ ಕ್ಷೇತ್ರಗಳ ಜನರ ಹಿತದೃಷ್ಟಿಯಿಂದ ಮಹಾಯುತಿಯನ್ನು ಬೆಂಬಲಿಸಲು ಬದ್ಧರಾಗಿದ್ದಾರೆ ಎಂದು ಉಮೇಶ್ ಪಾಟೀಲ್ ತಿಳಿಸಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದ ರಾಜಕೀಯ ವಾತಾವರಣದಲ್ಲಿ ಯಾರು ಯಾವ ಪಕ್ಷಕ್ಕೆ ಜಿಗಿಯುತ್ತಾರೆ ಎಂಬುದನ್ನು ಊಹಿಸುವುದು ಅಸಾಧ್ಯವಾಗಿದೆ. ಯಾಕಂದ್ರೆ, 2024ರ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್ ಅವರ ಪಕ್ಷವು ಎಂಟು ಸ್ಥಾನಗಳನ್ನು ಗೆದ್ದು ಬೀಗಿತ್ತು. ಆದರೆ ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನ ಕಳಪೆಯಾಗಿತ್ತು. ಕೇವಲ ಹತ್ತು ಶಾಸಕರು ಮಾತ್ರ ಆಯ್ಕೆಯಾಗಿದ್ದರು. ಅದೇ ಸಮಯದಲ್ಲಿ ಅಜಿತ್ ಪವಾರ್ ಅವರ ಬಣವು ತನ್ನ 42 ಶಾಸಕರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಒಟ್ಟಾರೆಯಾಗಿ, ಉದ್ಧವ್ ಠಾಕ್ರೆ ಅವರು ತಮ್ಮ ಒಂಬತ್ತು ಸಂಸದರನ್ನು ಒಗ್ಗಟ್ಟಾಗಿ ಇಡುವಲ್ಲಿ ವಿಫಲರಾಗಿದ್ದನ್ನು ಕಂಡಿರುವ ಶರದ್ ಪವಾರ್ ಅವರಿಗೆ ಈಗ ತಮ್ಮದೇ ಪಕ್ಷದ ಶಾಸಕರು ಕೈಕೊಡುವ ಭೀತಿ ಎದುರಾಗಿದೆ.
Mumbai,Maharashtra
Jun 17, 2026 10:35 PM IST













