Last Updated:
ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಸಾರಿಗೆ ಇಲಾಖೆಗೆ ಹೊಸ ನೀತಿ, ಮುಂದಿನ ಎಲ್ಲಾ ಹೊಸ ಬಸ್ ಗಳು ಎಸಿ ಆಗಿರಬೇಕು, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೂ ಸಮೀಕ್ಷೆ ನಡೆಯುತ್ತಿದೆ.
ತಮಿಳುನಾಡು ಸಿಎಂ ಆಗಿ ನಟ ಜೋಸೆಫ್ ವಿಜಯ್ (CM Joseph Vijay) ಅವರು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ವಿಜಯ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದರು. ಉಚಿತ ವಿದ್ಯುತ್ (Free Electricity), ರೈತರ ಸಾಲ ಮನ್ನಾ, ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದರು. ಸದ್ಯ ಸಾರಿಗೆ ಇಲಾಖೆ (Transport Department) ಕುರಿತಂತೆ ಸಿಎಂ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಜನರಿಗೆ ಉತ್ತಮ ಪ್ರಯಾಣ ಸೇವೆಯನ್ನು ನೀಡುವ ಗುರಿಯೊಂದಿಗೆ ಮುಂದಿನ ದಿನಗಳಲ್ಲಿ ಖರೀದಿ ಮಾಡುವ ಎಲ್ಲಾ ಬಸ್ ಗಳು ಎಸಿ ಬಸ್ ಗಳು (AC Bus) ಇರಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ.
ಹೌದು, ತಮಿಳುನಾಡು ಸರ್ಕಾರ ಮುಂದಿನ ದಿನಗಳಲ್ಲಿ ಖರೀದಿ ಮಾಡುವ ಎಲ್ಲಾ ಬಸ್ ಗಳು ಎಸಿ ಸೌಕರ್ಯವನ್ನು ಹೊಂದಿರಲಿದೆ. ಈ ಬಗ್ಗೆ ಸಿಎಂ ಸ್ಪಷ್ಟ ಆದೇಶವನ್ನು ನೀಡಿದ್ದಾರೆ. ಈ ಕುರಿತಂತೆ ತಮಿಳುನಾಡು ಸಾರಿಗೆ ಸಚಿವ ಪಾರ್ಥಿಮನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಪಾರ್ಥಿಮನ್, ಜನರಿಗೆ ಉತ್ತಮ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣವನ್ನು ಒದಗಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸಲು ಟಿವಿಕೆ ಸರ್ಕಾರ ವಿಶೇಷ ಗಮನ ಹರಿಸಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಪ್ರತಿಯೊಂದು ದೂರದ ಹಳ್ಳಿಗೂ ಬಸ್ ಸೌಲಭ್ಯವನ್ನು ತಲುಪುವುದು ಸಿಎಂ ಅವರ ಗುರಿಯಾಗಿದೆ. ಹೊಸದಾಗಿ ಖರೀದಿಸುವ ಪ್ರತಿಯೊಂದು ಬಸ್‌ನಲ್ಲಿ ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಹೊಂದಿರಬೇಕು ಮತ್ತು ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಲು ಅವಕಾಶವನ್ನು ಒದಗಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾಗಿ ಸಚಿವರು ತಿಳಿಸಿದ್ದಾರೆ.
ಹೊಸ ಬಸ್ಗಳಿಗೆ ಚಾಲನೆ
ತಮಿಳುನಾಡಿನಲ್ಲಿ ಬಿಸಿ, ಶುಷ್ಕ ವಾತಾವರಣ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಒಂದು ಸಮೀಕ್ಷೆ ಮಾಡಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಒಂದು ಘೋಷಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದು ಅಧಿಕಾರ ಪಡೆದುಕೊಂಡ ಬಳಿಕ ಸಿಎಂ ವಿಜಯ್, ಪ್ರಜಾ ಕಲ್ಯಾಣ ಕಾರ್ಯಕ್ರಮಗಳಿಗೆ ಮಹತ್ವ ನೀಡುತ್ತಿದ್ದು, ಉಚಿತ ವಿದ್ಯುತ್ ಯೋಜನೆ, ಜನಿಸಿದ ಪ್ರತಿ ಮಗುವಿಗೆ ಚಿನ್ನದ ಉಂಗುರ ಸೇರಿದಂತೆ ಹಲವು ಜನರ ಪರ ಯೋಜನೆಗಳನ್ನು ಜಾರಿ ಮಾಡಿದ್ದರು. ಕಳೆದ ವಾರ ಸಿಎಂ ವಿಜಯ್ 127.31 ಕೋಟಿ ರೂಪಾಯಿಯೊಂದಿಗೆ 300 ಹೊಸ ಬಸ್ ಗಳನ್ನು ಪ್ರಾರಂಭಿಸಿದ್ದರು. ಇದರಲ್ಲಿ 164 ಡೀಸೆಲ್ ಬಸ್, 136 ಬಿಎಸ್-6 ಗಳು ಸೇರಿತ್ತು.
Chennai [Madras],Chennai,Tamil Nadu













