Last Updated:
NEET Re-Exam 2026: ಸಾವನ್ನು ಗೆದ್ದು ನೀಟ್ ಮರು ಪರೀಕ್ಷೆ ಬರೆದ ಸೃಷ್ಟಿ; 9 ಪಕ್ಕೆಲುಬು ಮುರಿದ ವಿದ್ಯಾರ್ಥಿನಿಗಾಗಿ ಪರೀಕ್ಷಾಕೇಂದ್ರವ್ನೇ ಮಿನಿ ಆಸ್ಪತ್ರೆ ಮಾಡಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಕೋಲ್ಕತ್ತಾ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದ್ದರೆ ಎಂತಹ ಕಷ್ಟಗಳನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಕೋಲ್ಕತ್ತಾದ (Kolkata) 18 ವರ್ಷದ ಯುವತಿಯೇ ಜೀವಂತ ಉದಾಹರಣೆ. ಹೌದು, ವೈದ್ಯೆಯಾಗಬೇಕು ಎಂಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು, ಸಾವು ಬಂದು ಎದುರು ನಿಂತರೂ ಅದಕ್ಕೆ ಸೆಡ್ಡು ಹೊಡೆದು, ತನ್ನ ನೋವನ್ನು ಮರೆತು ನೀಟ್ ಮರು ಪರೀಕ್ಷೆ (NEET Re-Examination) ಬರೆಯುವ ಮೂಲಕ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾಳೆ. ಆ ಕುರಿತ ವರದಿ ಇಲ್ಲಿದೆ.
ಜೂನ್ 14 ರಂದು, ಕೋಲ್ಕತ್ತಾದ 18 ವರ್ಷದ ವೈದ್ಯಕೀಯ ಆಕಾಂಕ್ಷಿ ಸೃಷ್ಟಿ ದುಬೆ ಪ್ರಯಾಣಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೀಡಾಗಿತ್ತು. ಅಪಘಾತದ ತೀವ್ರತೆಗೆ ಅವರ ಎದೆಗೂಡಿನ 9 ಪಕ್ಕೆಲುಬುಗಳು ಸಂಪೂರ್ಣವಾಗಿ ಮುರಿದುಹೋಗಿದ್ದವು ಹಾಗೂ ಶ್ವಾಸಕೋಶಕ್ಕೂ ತೀವ್ರ ಗಾಯಗಳಾಗಿದ್ದವು. ಇನ್ನು, ಅಪಘಾತವಾದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಮುಖ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಜೊತೆಗೆ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆ ಮತ್ತು ಎದೆಯ ಭಾಗದಲ್ಲಿ ದ್ರವ ಹೊರಹಾಕುವ ಡ್ರೈನ್ ಪೈಪ್‌ಗಳ ಕಠಿಣ ನಿಗಾದಲ್ಲಿ ಇರಿಸಲಾಗಿತ್ತು.
ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿರುವ ರೋಗಿಗಳು ಹಾಸಿಗೆಯಿಂದ ಎದ್ದೇಳಲು ವಾರಗಳೇ ಬೇಕಾಗುತ್ತದೆ. ಆದರೆ ಸೃಷ್ಟಿ ದುಬೆ ಅವರ ಮನಸ್ಸಿನಲ್ಲಿ ನೋವಿಗಿಂತ ಹೆಚ್ಚಾಗಿ ವೈದ್ಯೆಯಾಗಬೇಕೆಂಬ ಕನಸು ಜೀವಂತವಾಗಿತ್ತು. “ನನ್ನ ದೇಹಕ್ಕೆ ಮಾತ್ರ ಪೆಟ್ಟಾಗಿದೆ, ನನ್ನ ಮನಸ್ಸಿಗಲ್ಲ. ನಾನು ಈ ವರ್ಷದ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ” ಎಂದು ಆಸ್ಪತ್ರೆಯ ಹಾಸಿಗೆಯಲ್ಲೇ ಮಲಗಿ ಪಟ್ಟು ಹಿಡಿದರು. ಮಗಳ ಈ ಅಚಲ ನಿರ್ಧಾರವನ್ನು ಕಂಡ ಪೋಷಕರು ಆರಂಭದಲ್ಲಿ ಆತಂಕಗೊಂಡರೂ, ಕೊನೆಗೆ ಅವಳ ಧೈರ್ಯಕ್ಕೆ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದರು.
Kolkata: A NEET aspirant, Shrishti Dubey, who suffered severe injuries in a road accident on June 14 and underwent major vascular surgery, was allowed to appear for the NEET examination with special medical arrangements after intervention by Union Education Minister Dharmendra… pic.twitter.com/5t6LQByjTb
— IANS (@ians_india) June 21, 2026
ಅದರಂತೆ, ಸೃಷ್ಟಿಯ ಪೋಷಕರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪರ್ಕಿಸಿ, ಆಸ್ಪತ್ರೆಯಿಂದಲೇ ಪರೀಕ್ಷೆ ಬರೆಯಲು ಅಥವಾ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಮನವಿ ಮಾಡಿದರು. ಇದನ್ನ ತಿಳದ ತಕ್ಷಣವೇ ಪ್ರಧಾನ್ ಅವರು, ಸ್ವತಃ ಸೃಷ್ಟಿ ಅವರ ತಂದೆಗೆ ಕರೆ ಮಾಡಿ ಧೈರ್ಯ ತುಂಬಿದರು. ಅಲ್ಲದೆ, ವಿದ್ಯಾರ್ಥಿನಿಯ ವೈದ್ಯಕೀಯ ಸುರಕ್ಷತೆಗೆ ಧಕ್ಕೆ ಬಾರದಂತೆ ಪರೀಕ್ಷೆ ಬರೆಯಲು ಅಗತ್ಯವಿರುವ ಎಲ್ಲಾ ವಿಶೇಷ ವ್ಯವಸ್ಥೆಗಳನ್ನು ತಕ್ಷಣವೇ ಕಲ್ಪಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಿಕ್ಷಣ ಸಚಿವರ ನಿರ್ದೇಶನದ ಮೇರೆಗೆ ಕೋಲ್ಕತ್ತಾದ ಬಿನೋದಿನಿ ಗರ್ಲ್ಸ್ ಹೈಸ್ಕೂಲ್ ಪರೀಕ್ಷಾ ಕೇಂದ್ರವನ್ನ ಮಿನಿ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಯಿತು. ಇದರೊಂದಿಗೆ, ಸೃಷ್ಟಿ ಅವರಿಗೆ ಯಾವುದೇ ಸೋಂಕು ತಗಲದಂತೆ ಸಂಪೂರ್ಣ ಸ್ಯಾನಿಟೈಸ್ ಮಾಡಿದ ಪ್ರತ್ಯೇಕ ಕೊಠಡಿಯನ್ನು ನಿಗದಿಪಡಿಸಲಾಯಿತು. ಜೊತೆಗೆ ಪರೀಕ್ಷೆ ಬರೆಯುವ ಮೂರು ಗಂಟೆಗಳ ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯ ತಂಡವನ್ನು ಕೊಠಡಿಯ ಹೊರಗೇ ನಿಯೋಜಿಸಲಾಗಿತ್ತು. ಜೊತೆಗೆ, ಆಮ್ಲಜನಕದ ಸಿಲಿಂಡರ್‌ಗಳು ಹಾಗೂ ಸುಸಜ್ಜಿತ ತುರ್ತು ಆಂಬ್ಯುಲೆನ್ಸ್ ಅನ್ನು ಸಹ ಸಿದ್ಧವಾಗಿಡಲಾಗಿತ್ತು.
ಮುಂದುವರೆದು, ಆಸ್ಪತ್ರೆಯ ಉಡುಪಿನಲ್ಲೇ, ದೇಹಕ್ಕೆ ವೈದ್ಯಕೀಯ ಪೈಪ್‌ಗಳನ್ನು ಅಳವಡಿಸಿಕೊಂಡ ಸ್ಥಿತಿಯಲ್ಲೇ ಸೃಷ್ಟಿ ದುಬೆ ಪರೀಕ್ಷಾ ಕೊಠಡಿ ಪ್ರವೇಶಿಸಿ ಯಶಸ್ವಿಯಾಗಿ ಪರೀಕ್ಷೆ ಬರೆದು ಮುಗಿಸಿದ್ದಾರೆ. ಇವರ ಈ ಅಪ್ರತಿಮ ಧೈರ್ಯ ಮತ್ತು ಶಿಕ್ಷಣ ಸಚಿವರ ಸಕಾಲಿಕ ನೆರವು ಇಂದು ದೇಶದ ಲಕ್ಷಾಂತರ ಯುವ ಜನತೆಗೆ ಮತ್ತು ಕಷ್ಟದ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಅತ್ಯಂತ ದೊಡ್ಡ ಸ್ಪೂರ್ತಿಯಾಗಿದೆ ಎನ್ನಬಹುದು.
Kolkata,West Bengal













