NCP-Congress Merger: TMC ಜೊತೆಗೆ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್​ನೊಂದಿಗೆ ವಿಲೀನ? ಏನಿದು ಕೈ ಹೊಸ ಆಟ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

TMC ಜೊತೆಗೆ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್​ನೊಂದಿಗೆ ವಿಲೀನ?


Last Updated:

NCP-Congress Merger: ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವಿಲೀನದ ಸುದ್ದಿ ಇನ್ನೂ ಹಾಟ್ ಆಗಿರುವಾಗಲೇ, ಈಗ ಮತ್ತೊಂದು ರಾಜಕೀಯ ಬಾಂಬ್ ಸಿಡಿದಿದೆ. ಕಾಂಗ್ರೆಸ್-ಎನ್‌ಸಿಪಿ ವಿಲೀನದ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷಗಳ ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ಎರಡೂ ಹಳೆಯ ಮಿತ್ರ ಪಕ್ಷಗಳು ಮತ್ತೆ ಒಂದಾಗುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. TMC-ಕಾಂಗ್ರೆಸ್ ಬೆಳವಣಿಗೆಯ ಬೆನ್ನಲ್ಲೇ NCP ವಿಲೀನದ ಸುದ್ದಿ ರಾಷ್ಟ್ರೀಯ ರಾಜಕಾರಣದ ಲೆಕ್ಕಾಚಾರವನ್ನೇ ಬದಲಿಸಬಹುದಾ? ಆ ಕುರಿತ ವರದಿ ಇಲ್ಲಿದೆ.

 TMC ಜೊತೆಗೆ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್​ನೊಂದಿಗೆ ವಿಲೀನ?
TMC ಜೊತೆಗೆ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್​ನೊಂದಿಗೆ ವಿಲೀನ?

ನವದೆಹಲಿ: ರಾಷ್ಟ್ರೀಯ ರಾಜಕಾರಣ ಹಾಗೂ ಇಂಡಿಯಾ (India) ಒಕ್ಕೂಟದ ಪಾಳಯದಲ್ಲಿ ಮಹತ್ವದ ರಾಜಕೀಯ ಧ್ರುವೀಕರಣದ ಮುನ್ಸೂಚನೆಗಳು ಕಾಣುತ್ತಿವೆ. ಅದರಲ್ಲೂ, ಇಂಡಿಯಾ ಒಕ್ಕೂಟದ ಸಭೆಯ ನಂತರ ಕಾಂಗ್ರೆಸ್ ಪಕ್ಷದೊಳಗೆ ತೃಣಮೂಲ ಕಾಂಗ್ರೆಸ್ (Trinamool Congress) ವಿಲೀನವಾಗುತ್ತದೆ ಎನ್ನುವ ಸುದ್ದಿಯ ನಡುವೆಯೇ, ಇದೀಗ ಮತ್ತೊಂದು ಪಕ್ಷ ಕೂಡ ಕಾಂಗ್ರೆಸ್​ನಲ್ಲಿ ವಿಲೀನವಾಗುತ್ತದೆ ಎನ್ನುವ ಸುದ್ದಿ ರಾಷ್ಟ್ರ ರಾಜಧಾನಿಯ ರಾಜಕೀಯ ಪಡಸಾಲೆಯಿಂದ ಹೊರಬರುತ್ತಿದೆ. ಹಾಗಾದ್ರೆ, ಆ ಸುದ್ದಿ ನಿಜಾನಾ? ನಿಜವಾದ್ರೆ, ಕಾಂಗ್ರೆಸ್​ (Congress) ನೊಂದಿಗೆ ವಿಲೀನವಾಗುತ್ತಿರುವ ಆ ಮತ್ತೊಂದು ಪಕ್ಷ ಯಾವುದು ಗೊತ್ತಾ?

ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ತೃಣಮೂಲ ಕಾಂಗ್ರೆಸ್ ನಾಯಕರು ಸರಣಿ ಸಭೆ ನಡೆಸಿದ ಬೆನ್ನಲ್ಲೇ, ಇದೀಗ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP-SP) ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಮುಂಚೂಣಿಗೆ ಬಂದಿದೆ. ಹೌದು, ವಿರೋಧ ಪಕ್ಷಗಳ ಬಲವರ್ಧನೆ ಹಾಗೂ ಪ್ರಾದೇಶಿಕ ಶಕ್ತಿಗಳ ರಕ್ಷಣೆಗಾಗಿ ಕಾಂಗ್ರೆಸ್‌ನಿಂದಲೇ ಹುಟ್ಟಿಬಂದ ಸಣ್ಣ ಪಕ್ಷಗಳನ್ನು ಮರಳಿ ಮಹಾಘಟಬಂಧನದ ‘ಕೈ’ ಪಾಳಯಕ್ಕೆ ಸೇರಿಸಿಕೊಳ್ಳುವ ಮಾತುಕತೆಗಳು ತೆರೆಮರೆಯಲ್ಲಿ ಚುರುಕುಗೊಂಡಿದ್ದು, ದೇಶದ ರಾಜಕೀಯ ನಕಾಶೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಕಾಂಗ್ರೆಸ್ ಹೈಕಮಾಂಡ್ ನೀಡಿದ ವಿಲೀನದ ಆಫರ್!

ಮೂಲಗಳ ಪ್ರಕಾರ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ಅಧಿಕೃತವಾಗಿ ವಿಲೀನಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಗಂಭೀರ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಪ್ರಸ್ತಾಪದ ಕುರಿತು ಶರದ್ ಪವಾರ್ ಅವರ ಬಣವು ಆಂತರಿಕವಾಗಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಶರದ್ ಪವಾರ್ ಅವರ ಪುತ್ರಿ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರು ನೀಡಿರುವ ಕೆಲವು ಹೇಳಿಕೆಗಳು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ. ಈ ಹಿಂದೆ ಉದ್ಧವ್ ಠಾಕ್ರೆ ಬಣದ ಹಿರಿಯ ನಾಯಕ ಸಂಜಯ್ ರಾವತ್ ಅವರು ಕೂಡ ಕಾಂಗ್ರೆಸ್ ನಿಂದ ಬೇರ್ಪಟ್ಟ ಎಲ್ಲಾ ಪ್ರಾದೇಶಿಕ ಪಕ್ಷಗಳು ಮರಳಿ ತಾಯಿ ಪಕ್ಷ ಸೇರಬೇಕು ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ: The Return of Congress: ಮಮತಾ, ತೇಜಸ್ವಿ, ಸ್ಟಾಲಿನ್ ಸೋಲಿನಿಂದ ಕಾಂಗ್ರೆಸ್‌ಗೆ ಖುಷಿಯೋ ಖುಷಿ! ಪ್ರಾದೇಶಿಕ ದೈತ್ಯರ ಸೋಲಿನಿಂದ ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ

ಮುಂದುವರೆದು, ನ್ಯೂಸ್​ 18 ಹಿಂದಿ ವರದಿ ಮಾಡಿರುವಂತೆ, ಸಂಜಯ್ ರಾವತ್ ಅವರ ಸಲಹೆಯ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರಿಯಾ ಸುಳೆ, ರಾವತ್ ಅವರು ತಮಗೆ ಅಣ್ಣನಿದ್ದಂತೆ ಮತ್ತು ಅವರ ಸಲಹೆ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎನ್ನುವ ಮೂಲಕ ಅವರು ವಿಲೀನದ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಇದೇ ಧ್ವನಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹೈಕಮಾಂಡ್​ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ಈ ಹಿಂದೆ ಕಾಂಗ್ರೆಸ್ ಸಿದ್ಧಾಂತದಿಂದ ಹೊರಬಂದ ಎಲ್ಲಾ ನಾಯಕರು ಮತ್ತು ಪಕ್ಷಗಳು ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ತೆ ಒಂದಾಗಬೇಕು ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: TMC: ಕಾಂಗ್ರೆಸ್‌ ಜೊತೆ ಟಿಎಂಸಿ ವಿಲೀನ? ಸೋಲಿನ ಬೆನ್ನಲ್ಲೇ ಅತಿದೊಡ್ಡ ನಿರ್ಧಾರ ತೆಗೆದುಕೊಳ್ತಾರಾ ಮಮತಾ ಬ್ಯಾನರ್ಜಿ?

ಏತನ್ಮಧ್ಯೆ, ಕಾಂಗ್ರೆಸ್ ಜೊತೆಗಿನ ವಿಲೀನದ ಸುದ್ದಿಗಳು ಹೊರಬೀಳುತ್ತಿದ್ದಂತೆಯೇ ಶರದ್ ಪವಾರ್ ಬಣದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಮಹಾರಾಷ್ಟ್ರದ ಸೋಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ರಾಜಕಾರಣದ ಮಧ್ಯೆಯೇ ಪಕ್ಷದ ಮೂವರು ಪ್ರಮುಖ ಶಾಸಕರು ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ವಸಂತರಾವ್ ದೇಶಮುಖ್ ಅವರಿಗೆ ಪಕ್ಷದ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಶಾಸಕರಾದ ಉತ್ತಮರಾವ್ ಜಂಕರ್, ಅಭಿಜಿತ್ ಪಾಟೀಲ್ ಮತ್ತು ನಾರಾಯಣ್ ಪಾಟೀಲ್ ಅವರು ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಚವಾಣ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಮುಂದೇನು?

ಕಾಂಗ್ರೆಸ್ ವಿಲೀನ ಪ್ರಸ್ತಾಪ, ಸುಪ್ರಿಯಾ ಸುಳೆ ಅವರ ಮೃದು ಪ್ರತಿಕ್ರಿಯೆ ಮತ್ತು ಶಾಸಕರ ಬಂಡಾಯದಿಂದ ಎನ್ಸಿಪಿ ಎಸ್‌ಪಿ ಇಕ್ಕಟ್ಟಿಗೆ ಸಿಲುಕಿದೆ. ಒಂದು ಕಡೆ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಆಪರೇಷನ್ ಮೂಲಕ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಶರದ್ ಪವಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಮಹಾರಾಷ್ಟ್ರ ರಾಜಕೀಯದ ದಿಕ್ಕು ನಿರ್ಧಾರವಾಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed