Last Updated:
Monsoon 2020: ಗುರುವಾರ ಮುಂಜಾನೆವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಲೇ ಇದೆ. ರಸ್ತೆಗಳು ನದಿಗಳಂತಾಗಿವೆ. ಮಳೆಗೆ ಸಾಕಷ್ಟು ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಮಳೆ ಇಂದು ಸಂಜೆಯವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂಬೈ (ಆಗಸ್ಟ್ 6): ಅದು 2005ರ ಸಮಯ. ವ್ಯಾಪಾರ-ವಹಿವಾಟಿನ ರಾಜಧಾನಿ ಎಂದೇ ಕರೆಯಲ್ಪಡುವ ಮುಂಬೈ ಅಕ್ಷರಶಃ ಮುಳುಗಿತ್ತು. ಅಂದು ಸುರಿದ ಭಾರೀ ಮಳೆಗೆ ಪ್ರವಾಹವೇ ಉಂಟಾಗಿಬಿಟ್ಟಿತ್ತು. ಈಗ ಅದೇ ಘಟನೆ ಮರುಕಳಿಸುವ ಭಯ ಮುಂಬೈ ಜನರನ್ನು ಕಾಡಿದೆ. ಕಳೆದ ನಾಲ್ಕೈದು ದಿನಗಳಿಂದ ಮುಂಬೈನಲ್ಲಿ ಬಿಟ್ಟು ಬಿಡದೆ ಭಾರೀ ಮಳೆ ಆಗುತ್ತಿದೆ. ಈ ಮಳೆಗೆ ಅಲ್ಲಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕೊರೋನಾ ವೈರಸ್ನಿಂದಾಗಿ ಸಿಟಿ ಬಸ್ಗಳ ಓಡಾಟ ಕಡಿಮೆ ಆಗಿದೆ. ಆದರೆ, ಈಗ ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಬಸ್ಗಳ ಓಡಾಟ ಮತ್ತಷ್ಟು ವಿರಳವಾಗಿದೆ. ಇನ್ನು, ಬೈಕ್ ಸವಾರರು, ಕಾರು ಚಾಲಕರು ರಸ್ತೆಯಮೇಲೆ ಸಂಚರಿಸಲು ಹರಸಾಹಸ ಪಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಗುರುವಾರ ಮುಂಜಾನೆವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಲೇ ಇದೆ. ರಸ್ತೆಗಳು ನದಿಗಳಂತಾಗಿವೆ. ಮಳೆಗೆ ಸಾಕಷ್ಟು ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಮಳೆ ಇಂದು ಸಂಜೆಯವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆಯ ಜೊತೆಗೆ ಮುಂಬೈನಲ್ಲಿ ವೇಗವಾಗಿ ಗಾಳಿ ಕೂಡ ಬೀಸುತ್ತಿದೆ. ಗಂಟೆಗೆ ಸುಮಾರು 70 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರಿಂದ ಮರಗಳು ನೆಲಕ್ಕೆ ಉರುಳುತ್ತಿವೆ. ಈ ಗಾಳಿ ಬೀಸುವ ಪ್ರಕ್ರಿಯೆ ಇನ್ನೂ ಕೆಲ ದಿನ ಮುಂದುವರಿಯಲಿದೆ ಎನ್ನಲಾಗಿದೆ.
ಕೇವಲ ಮುಂಬೈ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ಉಳಿದ ಭಾಗಗಳಲ್ಲೂ ವೇಗವಾಗಿ ಗಾಳಿ ಬೀಸುತ್ತಲೇ ಇದೆ. ಇನ್ನು, ಗುಜರಾತ್ ಹಾಗೂ ಕರ್ನಾಟಕದಲ್ಲೂ ಗಾಳಿ ಸಹಿತ ಮಳೆ ಆಗುತ್ತಿದೆ.
ಇಂದು ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿದ್ದರೂ, ನಾಳೆ ಮಳೆ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರಿಂದ ಮುಂಬೈ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮುಂಬೈನಲ್ಲಿ ಈಗಾಗಲೇ ಕೊರೋನಾ ಹಾವಳಿ ಹೆಚ್ಚಿದೆ. ಈಗ ಅದರ ಜೊತೆ ಮಳೆ ಕೂಡ ಅಬ್ಬರಿಸುತ್ತಿದ್ದು, ಜನರು ಕಂಗಾಲಾಗಿದ್ದಾರೆ.













