Last Updated:
MS Dhoni Ear Device: ಮೈದಾನದಲ್ಲಿ ಇದ್ದರೂ, ಇಲ್ಲದಿದ್ದರೂ ಧೋನಿ ಯಾವಾಗಲೂ ವಿಶೇಷವಾಗಿ ಕಾಣುತ್ತಾರೆ. ಈಗ ರೇಡಿಯೋ ಇಯರ್ವಿಗ್ ಹಾಕಿಕೊಂಡು ಕ್ರೀಡಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಭರ್ಜರಿ ಗೆಲುವು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ (MS Dhoni) ಮ್ಯಾಚ್ ವೀಕ್ಷಣೆಗೆ ಆಗಮಿಸಿ ಅಭಿಮಾನಿಗಳ ಗಮನ ಸೆಳೆದರು. ವಿಐಪಿ ಸ್ಟಾಂಡ್ಸ್ನಲ್ಲಿ (VIP Stand) ಕುಳಿತುಕೊಂಡು ಕಾಣಿಸಿದ ಧೋನಿ, ಕಿವಿಯಲ್ಲಿ ಧರಿಸಿದ್ದ ಸಾಧನ ಎಲ್ಲರ ಗಮನ ಸೆಳೆಯಿತು. ಅಸಲಿಗೆ ಈ ಪರಿಕರ ಏನು? (Radio Earwig) ಇದರ ವಿಶೇಷತೆ ಏನು ಅಂತ ತಿಳಿದುಕೊಳ್ಳಲು ಈ ಸ್ಟೋರಿ ಓದಿ.
ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಪಡೆದುಕೊಂಡಿದೆ. ಅಕ್ಷರ್ ಪಟೇಲ್, ಶುಭ್ ಮನ್ ಗಿಲ್, ಸುಂದರ್ ಅವರು ಉತ್ತಮ ಆಟದೊಂದಿಗೆ ಗಮನ ಸೆಳೆದರು. ಆದರೆ ಮೈದಾನದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ವಿಐಪಿ ಸ್ಟಾಂಡ್ಸ್ನಲ್ಲಿ ಕುಳಿತಿದ್ದ ಮಹೇಂದ್ರ ಸಿಂಗ್ ಧೋನಿ ಗಮನ ಸೆಳೆದರು. ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಮ್ಯಾಚ್ ವೀಕ್ಷಿಸಿದ ಧೋನಿ ಅವರನ್ನು, ಕ್ಯಾಮೆರಾಗಳು ಪದೇ ಪದೇ ತೋರಿಸಿದ್ದವು.
ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಧೋನಿ ತಮ್ಮ ಬಲ ಕಿವಿಗೆ ಒಂದು ಚಿಕ್ಕ ಸಾಧನ ಧರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಬ್ಲೂಟೂತ್ ಅಥವಾ ಇಯರ್ ಬಡ್ಸ್ ಅಂದುಕೊಂಡಿದ್ದರು. ಆದರೆ ಭಾರತ ಅಭಿಮಾನಿಗಳಿಗೆ ಇದರ ಪರಿಚಯ ಕಡಿಮೆ ಇರುವ ರೇಡಿಯೋ ಇಯರ್ಪಿನ್. ಇದನ್ನು ರೇಡಿಯೋ ಇಯರ್ವಿಗ್ (Radio Earwig) ಅಂತಲೂ ಕರೆಯುತ್ತಾರೆ. ಸ್ಟೇಡಿಯಂನಲ್ಲಿ ಕುಳಿತುಕೊಂಡು ಮ್ಯಾಚ್ ನೋಡುತ್ತಲೇ, ಲೈವ್ ಕಾಮೆಂಟರಿಯನ್ನು ಈ ಸಾಧನದ ಮೂಲಕ ಸುಲಭವಾಗಿ ಕೇಳಬಹುದು. ಇದನ್ನು ಸಣ್ಣ ರೇಡಿಯೋ ಅಂತ ಕರೆಯಬಹುದು. ಧೋನಿ ಕೂಡ ಮ್ಯಾಚ್ ನೋಡುತ್ತಾ, ಈ ಸಾಧನ ಮೂಲಕ ಕಾಮೆಂಟರಿ ಕೇಳುತ್ತಾ ಎಂಜಾಯ್ ಮಾಡಿದ್ದರು.
ಇಂಗ್ಲೆಂಡ್ನಂತಹ ದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ರೇಡಿಯೋ ಇಯರ್ಪಿನ್ ಬಳಕೆ ಸಾಮಾನ್ಯ ಸಂಗತಿ. ಇದು ಕೇವಲ ಸ್ಟೇಡಿಯಂ ಆವರಣದಲ್ಲಿ ಮಾತ್ರ ಸಿಗ್ನಲ್ ಸ್ವೀಕರಿಸುವಂತೆ ರೂಪಿಸಿದ್ದಾರೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 20 ಗಂಟೆ ನಿರಂತರವಾಗಿ ಬಳಕೆ ಮಾಡಬಹುದು. ಲಾರ್ಡ್ಸ್ನಂತಹ ಐತಿಹಾಸಿಕ ಸ್ಟೇಡಿಯಂನಲ್ಲಿ ಮ್ಯಾಚ್ ನೋಡುವ ಸಂದರ್ಭದಲ್ಲಿ ಮತ್ತಷ್ಟು ಲೈವ್ ಅನುಭವ ಪಡೆದುಕೊಳ್ಳಲು ಪ್ರೇಕ್ಷಕರು ಇದನ್ನು ಬಳಕೆ ಮಾಡುತ್ತಾರೆ. ಇಂಗ್ಲೆಂಡ್ನಲ್ಲಿ ಇದರ ಬೆಲೆ ಸುಮಾರು 20 ಪೌಂಡ್, ನಮ್ಮ ರೂಪಾಯಿಯಲ್ಲಿ ಎರಡು ಸಾವಿರ ರೂಪಾಯಿ. ಕ್ರಿಕೆಟ್ ಮಾತ್ರವಲ್ಲದೇ, ರೇಸ್, ರಗ್ಬಿ, ಫಾರ್ಮುಲಾ 1 ನಂತರ ಕ್ರೀಡೆಯಲ್ಲೂ ಇದನ್ನು ಬಳಕೆ ಮಾಡುತ್ತಾರೆ.
ಈ ಹಿಂದೆ ಇಂಗ್ಲೆಂಡ್ ಟೂರ್ನಿಗೆ ತೆರಳಿದ್ದ ಭಾರತದ ಹಲವು ಆಟಗಾರರು ಈ ರೇಡಿಯೋ ಇಯರ್ವಿಗ್ ಅನ್ನು ಬಳಕೆ ಮಾಡುತ್ತಾರೆ. ಬುಮ್ರಾ, ಸಿರಾಜ್ ಕೂಡ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತುಕೊಂಡು ಕಾಮೆಂಟರಿ ಕೇಳುತ್ತಾ ಕಾಣಿಸಿದ್ದರು. ರವಿಚಂದ್ರನ್ ಅಶ್ವಿನ್, ಕೆಎಲ್ ರಾಹುಲ್, ಕುಲ್ದೀಪ್ ಯಾದವ್ ಸ್ಟಾರ್ ಆಟಗಾರರು ಕೂಡ ವೈರ್ ಲೆಸ್ ರೇಡಿಯೋವನ್ನು ಬಳಕೆ ಮಾಡಿದ್ದರು. ನಮ್ಮ ದೇಶದಲ್ಲಿ ಸ್ಟೇಡಿಯಂನಲ್ಲಿ ರೇಡಿಯೋ ಪ್ರಸಾರಕ್ಕೆ ಅಷ್ಟು ಪ್ರಾಮುಖ್ಯತೆ ನೀಡುವುದಿಲ್ಲ, ಈ ಕಾರಣಕ್ಕೆ ಅಭಿಮಾನಿಗಳಿಗೆ ಇದರ ಬಗ್ಗೆ ಅಷ್ಟು ಮಾಹಿತಿ ಇಲ್ಲ ಎಂದು ಹೇಳಬಹುದು. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನಕ್ಕೆ ಹೆಚ್ಚು ಬೇಡಿಕೆ ಇದೆ.














