Last Updated:
Modi-Trump: G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರು. ಸುಮಾರು 16 ತಿಂಗಳ ನಂತರ ನಡೆದ ಈ ಭೇಟಿ ವೇಳೆ, ಇಬ್ಬರೂ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ, ನಗುಮುಖದಿಂದ ಮಾತುಕತೆ ನಡೆಸಿದರು. ಆದರೆ ಮೋದಿ ಸಾಮಾನ್ಯವಾಗಿ ವಿದೇಶಿ ನಾಯಕರಿಗೆ ನೀಡುವ ತಮ್ಮ ಸಿಗ್ನೇಚರ್ ಅಪ್ಪುಗೆ ಈ ಬಾರಿ ಕಾಣಲಿಲ್ಲ. ಆ ಕುರಿತ ವರದಿ ಇಲ್ಲಿದೆ.
ಏವಿಯನ್-ಲೆಸ್-ಬೈನ್ಸ್ (ಫ್ರಾನ್ಸ್): G7 ಶೃಂಗಸಭೆಯಲ್ಲಿ (G7 Summit) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರು. ಸುಮಾರು 16 ತಿಂಗಳ ನಂತರ ನಡೆದ ಈ ಭೇಟಿ ವೇಳೆ, ಇಬ್ಬರೂ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ, ನಗುಮುಖದಿಂದ ಮಾತುಕತೆ ನಡೆಸಿದರು. ಆದರೆ ಮೋದಿ ಸಾಮಾನ್ಯವಾಗಿ ವಿದೇಶಿ ನಾಯಕರಿಗೆ ನೀಡುವ ತಮ್ಮ ಸಿಗ್ನೇಚರ್ ಅಪ್ಪುಗೆ ಈ ಬಾರಿ ಕಾಣಲಿಲ್ಲ. ಆ ಕುರಿತ ವರದಿ ಇಲ್ಲಿದೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆತಿಥ್ಯದಲ್ಲಿ ಜೂನ್ 16 ರಿಂದ ಆರಂಭವಾಗಿರುವ G7 ಶೃಂಗಸಭೆಗೆ ಭಾರತವನ್ನು 8ನೇ ಬಾರಿಗೆ ವಿಶೇಷ ಆಹ್ವಾನಿತ ರಾಷ್ಟ್ರವಾಗಿ ಕರೆಯಲಾಗಿದೆ. ಅದರಂತೆ, ಪ್ರಧಾನಿ ನರೇಂದ್ರ ಮೋದಿಯವರು, ಬಿಳಿ ಕುರ್ತಾ-ಪೈಜಾಮ ಮತ್ತು ನೀಲಿ ಬಣ್ಣದ ತೋಳಿಲ್ಲದ ಜಾಕೆಟ್ ಧರಿಸಿ ತಮ್ಮ ಆಸನದ ಕಡೆಗೆ ಆಗಮಿಸುತ್ತಿದ್ದಂತೆ, ನೀಲಿ ಸೂಟ್ ಮತ್ತು ಕೆಂಪು ಟೈ ಧರಿಸಿದ್ದ ಡೊನಾಲ್ಡ್ ಟ್ರಂಪ್ ಅವರು, ಪ್ರಧಾನಿಯತ್ತ ತಿರುಗಿ ಆತ್ಮೀಯವಾಗಿ ಹಸ್ತಲಾಘವ ಮಾಡಿದರು. ಈ ಸಂದರ್ಭದಲ್ಲಿ ಟ್ರಂಪ್ ಅವರು ಪ್ರಧಾನಿ ಮೋದಿಯವರ ತೋಳಿನ ಮೇಲೆ ಲಘುವಾಗಿ ತಟ್ಟಿ, ವರ್ಷಗಳಿಂದ ಇಬ್ಬರ ನಡುವೆ ಬೆಳೆದಿರುವ ವೈಯಕ್ತಿಕ ಬಾಂಧವ್ಯವನ್ನು ಮೆಲುಕು ಹಾಕಿದರು. ಆದರೆ, ಈ ಹಿಂದಿನ ಭೇಟಿಗಳಲ್ಲಿದ್ದ ಆತ್ಮೀಯ ಗೆಳೆತನ ಈ ಬಾರಿ ಕಾಣಿಸಲಿಲ್ಲ.
ಭಾರತ ಮತ್ತು ಅಮೆರಿಕ ನಡುವೆ ದೀರ್ಘಕಾಲದಿಂದ ನಡೆಯುತ್ತಿರುವ ವ್ಯಾಪಾರ ಒಪ್ಪಂದವು ಶೇ. 99ರಷ್ಟು ಪೂರ್ಣಗೊಂಡಿದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಇತ್ತೀಚೆಗೆ ತಿಳಿಸಿದ್ದರು. ಆದರೆ ಈ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಅಧಿಕೃತ ಸಹಿ ಬೀಳುವ ಸಾಧ್ಯತೆ ಇಲ್ಲ ಎಂದು ಶ್ವೇತಭವನದ ಮೂಲಗಳು ಸ್ಪಷ್ಟಪಡಿಸಿವೆ. ಅಮೆರಿಕವು ವ್ಯಾಪಾರ ಒಪ್ಪಂದದಲ್ಲಿ ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನ ನವದೆಹಲಿಯಲ್ಲಿದೆ. ಇದರೊಂದಿಗೆ ಹಾರ್ಮುಜ್ ಜಲಸಂಧಿಯಲ್ಲಿ ನಡೆದ ಇತ್ತೀಚಿನ ಅಹಿತಕರ ಘಟನೆಗಳು, ಭಾರತೀಯ ನಾವಿಕರ ಸಾವು ಮತ್ತು ಉಭಯ ದೇಶಗಳ ನಡುವಿನ ಸುಂಕ ವಿವಾದಗಳು ಸಂಬಂಧದ ಮೇಲೆ ತಣ್ಣೀರೆರಚಿವೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಕೂಡ ಈ ಬಾರಿ ಟ್ರಂಪ್ ಅವರೊಂದಿಗೆ ಕಠಿಣ ನಿಲುವನ್ನು ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ.
ಜಿ7 ಶೃಂಗಸಭೆಗೆ ಆಗಮಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸ್ಲೋವಾಕಿಯಾ ದೇಶಕ್ಕೆ ಐತಿಹಾಸಿಕ ಭೇಟಿ ನೀಡಿದ್ದರು. 1993 ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ. ಬ್ರಾಟಿಸ್ಲಾವಾದಲ್ಲಿ ನಡೆದ ಸಭೆಯಲ್ಲಿ ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಮತ್ತು ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಅವರೊಂದಿಗೆ ಮೋದಿ ಮಾತುಕತೆ ನಡೆಸಿದರು.
ಈ ವೇಳೆ, ರಕ್ಷಣೆ, ಹಸಿರು ತಂತ್ರಜ್ಞಾನ, ಆಟೋಮೊಬೈಲ್ ಮತ್ತು ರೈಲ್ವೆ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದೇ ವೇಳೆ ಸ್ಲೋವಾಕಿಯಾ ಸರ್ಕಾರವು ತನ್ನ ದೇಶದ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್ ಪ್ರಶಸ್ತಿಯನ್ನು ಮೋದಿಯವರಿಗೆ ಪ್ರದಾನ ಮಾಡಿ ಗೌರವಿಸಿದೆ.













