Last Updated:
ಐಸಿಸಿ 2021ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಪಾಕಿಸ್ತಾನದ ಕನಸು ಭಗ್ನಗೊಳಿಸಿದ ಆಸ್ಟ್ರೇಲಿಯಾದ ಸ್ಟಾರ್ ಫಿನಿಶರ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಕ್ರಿಕೆಟ್ (Cricket) ಇತಿಹಾಸದಲ್ಲಿ ಕೆಲವು ಕ್ಷಣಗಳು ಸ್ಕೋರ್ಬುಕ್(Scorebook)ನಲ್ಲಿ ಮಾತ್ರ ಉಳಿಯುವುದಿಲ್ಲ. ಅವು ಒಂದು ತಂಡದ ಕನಸು (Dream) ಮುರಿಯುತ್ತವೆ, ಇನ್ನೊಂದು ತಂಡಕ್ಕೆ ಚರಿತ್ರೆ ಸೃಷ್ಟಿಸಲು ದಾರಿ ಮಾಡಿಕೊಡುತ್ತವೆ. 2021ರ ಟಿ20 ವಿಶ್ವಕಪ್ (World Cup) ಸೆಮಿಫೈನಲ್ನಲ್ಲಿ ದುಬೈ(Dubai)ನಲ್ಲಿ ಅಂತಹ ಒಂದು ರಾತ್ರಿ ನಡೆಯಿತು. ಪಾಕಿಸ್ತಾನದ ಕನಸುಗಳನ್ನು ಮೂರು ಸತತ ಸಿಕ್ಸರ್ಗಳಿಂದ ಮುರಿದ ಆಸ್ಟ್ರೇಲಿಯಾ(Australia)ದ ವಿಕೆಟ್ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ (Matthew Wade) ಇಂದು ತನ್ನ 20 ವರ್ಷಗಳ ಕ್ರಿಕೆಟ್ ಜರ್ನಿಗೆ ವಿದಾಯ ಹೇಳಿದ್ದಾರೆ.
ಹೌದು, ಸ್ಟಾರ್ ಕ್ರಿಕೆಟಿಗ ಮ್ಯಾಥ್ಯೂ ವೇಡ್ ಎರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಈಗ ಅವರು ದೇಶೀಯ ಕ್ರಿಕೆಟ್ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಅಕ್ಟೋಬರ್ 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಬಂದಿದ್ದ ಅವರು, ಇಂದು (ಸೆಪ್ಟೆಂಬರ್ 17, ಗುರುವಾರ) ಬಿಗ್ ಬ್ಯಾಷ್ ಲೀಗ್ ಸೇರಿದಂತೆ ಎಲ್ಲಾ ದೇಶೀಯ ಕ್ರಿಕೆಟ್ನಿಂದಲೂ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯನ್ ಕ್ರಿಕೆಟ್ನಲ್ಲಿ ಅವರ ಸುಮಾರು 20 ವರ್ಷಗಳ ಆಟಗಾರಿಕೆ ಮುಗಿಯಿತು.
ಮ್ಯಾಥ್ಯೂ ವೇಡ್ 1987ರಲ್ಲಿ ಹೋಬಾರ್ಟ್ನಲ್ಲಿ ಜನಿಸಿದರು. ಅವರ ಜೀವನ ಸುಲಭವಾಗಿರಲಿಲ್ಲ. 16 ವರ್ಷದವರಾಗಿದ್ದಾಗ ಅಂಡಕೋಶದ ಕ್ಯಾನ್ಸರ್ ಬಂದಿತ್ತು. ಅದನ್ನು ಗೆದ್ದ ನಂತರ ಕ್ರಿಕೆಟ್ ಆಡಲು ಶುರು ಮಾಡಿದರು. ತಾಸ್ಮೇನಿಯಾದಲ್ಲಿ ಟಿಮ್ ಪೇನ್ ಇದ್ದ ಕಾರಣ ಅವಕಾಶ ಸಿಗಲಿಲ್ಲ. ಆದ್ದರಿಂದ ವಿಕ್ಟೋರಿಯಾ ತಂಡಕ್ಕೆ ಹೋದರು.
2011ರಿಂದ 2024ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 36 ಟೆಸ್ಟ್, 97 ಏಕದಿನ ಮತ್ತು 92 ಟಿ20 ಪಂದ್ಯಗಳನ್ನು ಆಡಿ ಒಟ್ಟು 225 ಪಂದ್ಯಗಳಲ್ಲಿ ವೇಡ್ ಭಾಗವಹಿಸಿದರು. ಟೆಸ್ಟ್ನಲ್ಲಿ 4 ಶತಕ ಮತ್ತು ಏಕದಿನದಲ್ಲಿ 1 ಶತಕ ಹೊಡೆದರು. ಟಿ20ಯಲ್ಲಿ ಆಕ್ರಮಣಕಾರಿ ಫಿನಿಶರ್ ಎಂದು ಹೆಸರು ಮಾಡಿದರು. ಅವರ ವೃತ್ತಿಜೀವನದ ಅತ್ಯುತ್ತಮ ಕ್ಷಣ 2021ರ ಟಿ20 ವಿಶ್ವಕಪ್ ಸೆಮಿಫೈನಲ್.
ಪಾಕಿಸ್ತಾನ 176/4 ರನ್ ಗಳಿಸಿ ಆಸ್ಟ್ರೇಲಿಯಾವನ್ನು ಕಷ್ಟಕ್ಕೆ ಸಿಲುಕಿಸಿತ್ತು. ಆಸ್ಟ್ರೇಲಿಯಾ 96/5ಕ್ಕೆ ಕುಸಿದಾಗ ಪಾಕಿಸ್ತಾನ ವಿಶ್ವಕಪ್ ಗೆಲ್ಲುವಂತೆ ಕಾಣುತ್ತಿತ್ತು. ಆಗ ವೇಡ್ ಮತ್ತು ಮಾರ್ಕಸ್ ಸ್ಟೊಯ್ನಿಸ್ ಸೇರಿ 81 ರನ್ ಜೊತೆಯಾಟವಾಡಿದರು. ಕೊನೆಯಲ್ಲಿ 22 ರನ್ ಬೇಕಿದ್ದಾಗ ವೇಡ್ ಕ್ಯಾಚ್ ಅನ್ನು ಹಸನ್ ಅಲಿ ಬಿಟ್ಟರು.
ನಂತರ ಶಾಹೀನ್ ಅಫ್ರಿದಿ ಬೌಲ್ ಮಾಡುತ್ತಿದ್ದ 19ನೇ ಓವರ್ನಲ್ಲಿ ವೇಡ್ ಮೂರು ಸತತ ಸಿಕ್ಸ್ ಹೊಡೆದು ಪಂದ್ಯ ಮುಗಿಸಿದರು. ವೇಡ್ ಕೇವಲ 17 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರು. ಇಲ್ಲಿ ಪಾಕಿಸ್ತಾನದ ಕನಸು ಮುರಿಯಿತು. ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಟ್ರೋಫಿ ಎತ್ತಿತು. ಆ ಇನ್ನಿಂಗ್ಸ್ ವೇಡ್ ಅವರನ್ನು ಎಂದಿಗೂ ನೆನಪಿನಲ್ಲಿ ಉಳಿಸಿತು.
ಇಂದು 38 ವರ್ಷದ ವೇಡ್ ಆಟಗಾರನಾಗಿ ನಿವೃತ್ತರಾಗಿ ಕೋಚಿಂಗ್ ಕಡೆಗೆ ತಿರುಗುತ್ತಿದ್ದಾರೆ. ಅವರು ಈಗಾಗಲೇ ಆಸ್ಟ್ರೇಲಿಯಾದ ವೈಟ್-ಬಾಲ್ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಎರಡು ದಶಕಗಳ ಕಾಲ ಕ್ರಿಕೆಟ್ ಆಡಿದ ಈ ಆಟಗಾರ ಒಂದು ರಾತ್ರಿಯಲ್ಲಿ ಒಂದು ದೇಶದ ಕನಸು ಮುರಿದು ಇನ್ನೊಂದು ದೇಶಕ್ಕೆ ವಿಶ್ವಕಪ್ ತಂದುಕೊಟ್ಟರು. ಅವರ ನಿವೃತ್ತಿ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿದೆ.














