Last Updated:
ಕಳ್ಳರ ಗ್ಯಾಂಗ್ವೊಂದು ಬರೋಬ್ಬರಿ 3000 ಸಾವಿರ ಕೆಜಿ ತೂಕದ ಫಿರಂಗಿಯನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಧ್ಯಪ್ರದೇಶ: ಇದು ಕೇವಲ ಕಳ್ಳತನವಲ್ಲ, ಇದೊಂದು ಹೈಟೆಕ್ ದರೋಡೆ (Robbery). ಜುಲೈ 15 ಮತ್ತು 16 ರ ಮಧ್ಯರಾತ್ರಿ ಮಧ್ಯಪ್ರದೇಶ (Madhya pradesh) ಶಿವಪುರಿ ಜಿಲ್ಲೆಯಲ್ಲಿರುವ ಐತಿಹಾಸಿಕ ನರ್ವರ್ ಕೋಟೆಯಲ್ಲಿ (Narwar Fort) ಕಳ್ಳರು ಕೈಚಳಕ ತೋರಿಸಿದ್ದಾರೆ. ಕೋಟೆಯಲ್ಲಿದ್ದ 14 ಐತಿಹಾಸಿಕ ಫಿರಂಗಿಗಳಲ್ಲಿ ಅತ್ಯಂತ ಅಮೂಲ್ಯವಾದ ಒಂದು ಫಿರಂಗಿಯನ್ನೇ (Cannon) ಕದ್ದು ಪರಾರಿಯಾಗಿದ್ದಾರೆ. ಸುಮಾರು 400 ವರ್ಷ ಹಳೆಯದಾದ ಬರೋಬ್ಬರಿ 3,500 ಕೆಜಿ ತೂಕದ ಹಿತ್ತಾಳೆ, ಕಂಚು, ತಾಮ್ರಗಳಿಂದ ಮಾಡಲ್ಪಟ್ಟಿದ್ದ ಫಿರಂಗಿಯನ್ನು ಎಗರಿಸಿದ್ದಾರೆ. ಈ ಫಿರಂಗಿ ಮೇಲಿದ್ದ ಪರ್ಷಿಯನ್ ಮತ್ತು ದೇವನಾಗರಿ ಲಿಪಿಗಳು ಪ್ರವಾಸಿಗರ ಆಕರ್ಷಣೆಯಾಗಿತ್ತು.
ಕಳ್ಳರು ಮೊದಲ ಬಾರಿಗೆ ಜುಲೈ 5 ರಂದು ಈ ಫಿರಂಗಿ ಕದಿಯಲು ಬಂದಾಗ ಅದರ ಭಾರಕ್ಕೆ ಹೆದರಿ ಓಡಿಹೋಗಿದ್ದರಂತೆ. ಆದರೆ, ಎರಡನೇ ಬಾರಿ ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದ ಖದೀಮರ ಗ್ಯಾಂಗ್, ಟ್ರಕ್, ಜೆಸಿಬಿ ಹಾಗೂ ಕ್ರೇನ್‌ಗಳೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಶಬ್ದ ಬಾರದಂತೆ ಫಿರಂಗಿಗೆ ಹಾಸಿಗೆ ಹಾಗೂ ಬಟ್ಟೆಯನ್ನು ಸುತ್ತಿ, ಕಬ್ಬಿಣದ ಪೈಪ್‌ಗಳ ಸಹಾಯದಿಂದ ಭಾರೀ ಗಾತ್ರದ ಫಿರಂಗಿಯನ್ನು ಕದ್ದೊಯ್ದಿದ್ದಾರೆ.
ನರ್ವರ್ ಕೋಟೆಯಲ್ಲಿ ಒಟ್ಟು 14 ಐತಿಹಾಸಿಕ ಫಿರಂಗಿಗಳಿದ್ದವು, ಅದರಲ್ಲಿಗ ಒಂದು ಕಳವಾಗಿದೆ. ಈ ಫಿರಂಗಿಗಳು 17 ನೇ ಶತಮಾನಕ್ಕೆ ಸೇರಿದ ಇದು ಮೊಘಲ್ ಮತ್ತು ಕಚ್ವಾಹ ಯುಗಗಳ ಮುಂದುವರಿದ ಲೋಹಶಾಸ್ತ್ರ ಮತ್ತು ಮಿಲಿಟರಿ ಪರಾಕ್ರಮದ ವಿಶಿಷ್ಟ ಉದಾಹರಣೆಯಾಗಿತ್ತು. ಈ ಫಿರಂಗಿ ಮೇಲೆ ವಿಶಿಷ್ಟ ಕೆತ್ತನೆಗಳು ಮತ್ತು ಐತಿಹಾಸಿಕ ಚಿಹ್ನೆಗಳನ್ನು ಹೊಂದಿವೆ. 400 ವರ್ಷಗಳಷ್ಟು ಹಳೆಯದಾದ ಈ ಫಿರಂಗಿ ಇಂಟರ್ನ್ಯಾಷನಲ್ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.
ಇನ್ನು, ಈ ಘಟನೆ ಬಗ್ಗೆ ಶಿವಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಂಗ್ ಚೆನ್ ಭೂಟಿಯಾ ಡೋಲ್ಕರ್ ಮಾತನಾಡಿದ್ದು, ‘ನರ್ವರ್ ಕೋಟೆಯಲ್ಲಿ ಮಾಹಿತಿ ಪಡೆದ ನಂತರ, ನಮ್ಮ ತಂಡವು ತನಿಖೆ ನಡೆಸಿ ಕಳ್ಳರು ವಸ್ತುಗಳನ್ನು ಹೇಗೆ ಕದ್ದಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದೇವೆ. ಇದು ತುಂಬಾ ಭಾರವಾದ ವಸ್ತು, ಆದ್ದರಿಂದ ಇದನ್ನು ಹೆಚ್ಚು ದೂರ ಸಾಗಿಸುವ ಸಾಧ್ಯತೆಯಿಲ್ಲ. ಇದು ಅಂತರರಾಷ್ಟ್ರೀಯ ಗ್ಯಾಂಗ್‌ನ ಕೆಲಸವೆಂದು ತೋರುತ್ತಿಲ್ಲ. ತನಿಖೆಗಳು ನಡೆಯುತ್ತಿವೆ. ಇದು ಸ್ಥಳೀಯ ಅಪರಾಧಿಗಳು ಮಾಡಿದ ಅಪರಾಧವಾಗಿರಬಹುದು’ ಎಂದು ಮಾಹಿತಿ ನೀಡಿದ್ರು.














