Last Updated:
ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಪಂಜಾಬ್ ಕಿಂಗ್ಸ್ 12 ಎಸೆತಗಳಿರುವಂತೆ ತಲುಪಿ ಗೆಲುವು ಸಾಧಿಸಿತು.
IPL 2026ರ 68ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿದೆ. ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಾದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂಜಾಬ್ ತಂಡ ದಿಟ್ಟ ಪ್ರದರ್ಶನ ತೋರಿ ಇನ್ನೂ 12 ಎಸೆತಗಳಿರುವಂತೆ ಗೆಲುವು ಸಾಧಿಸಿತು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 101 ರನ್ಗಳಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ ಪ್ಲೇಆಫ್ ಸ್ಥಾನವನ್ನ ಜೀವಂತವಾಗಿರಿಸಿಕೊಂಡಿದೆ.
197 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟರ್ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದುಕೊಂಡಿತು. ಆರ್ಯ ಶಮಿ ಬೌಲಿಂಗ್ನಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕೊನೊಲಿ 10 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 18 ರನ್ಗಳಿಸಿ ಶಮಿಗೆ 2ನೇ ಬಲಿಯಾದರು. ಪಂಜಾಬ್ ತಂಡ ಕೇವಲ 22 ರನ್ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು.
ಈ ಹಂತದಲ್ಲಿ ಪ್ರಭಸಿಮ್ರನ್ ಸಿಂಗ್ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 76 ಎಸೆತಗಳಲ್ಲಿ 140 ರನ್ಗಳ ಬೃಹತ್ ಜೊತೆಯಾಟ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಪ್ರಭಸಿಮ್ರನ್ ಸಿಂಗ್ 39 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ಗಳ ಸಹಿತ 69 ರನ್ಗಳಿಸಿ ಅರ್ಜುನ್ ತೆಂಡೂಲ್ಕರ್ಗೆ ವಿಕೆಟ್ ಒಪ್ಪಿಸಿದರು. ಆದರೆ ಶ್ರೇಯಸ್ ಅಯ್ಯರ್ ಕೊನೆಯವರೆಗೂ ಅಬ್ಬರಿಸಿ ಚೊಚ್ಚಲ ಶತಕ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಅಯ್ಯರ್ 51 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ಗಳ ಸಹಿತ ಅಜೇಯ 101 ರನ್ಗಳಿಸಿದರು. ಸೂರ್ಯಾಂಶ್ ಶೆಡ್ಗೆ ಅಜೇಯ 9 ರನ್ಗಳಿಸಿದರು.
ಲಖನೌ ಸೂಪರ್ ಜೈಂಟ್ಸ್ ಪರ ಮೊಹಮ್ಮದ್ ಶಮಿ 45ಕ್ಕೆ2, ಅರ್ಜುನ್ ತೆಂಡೂಲ್ಕರ್ 36ಕ್ಕೆ1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ಗಳಿಸಿತ್ತು. ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಲಖನೌ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮಿಚೆಲ್ ಮಾರ್ಷ್ ಬದಲಿಗೆ ಆರಂಭಿಕನಾಗಿ ಅವಕಾಶ ಪಡೆದಿದ್ದ ಅರ್ಶಿನ್ ಕುಲಕರ್ಣಿ ಗೋಲ್ಡನ್ ಡಕ್ ಆದರು. ಒಮರ್ಝೈ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಿಕೋಲಸ್ ಪೂರನ್ 7 ಎಸೆತಗಳಲ್ಲಿ 2 ರನ್ಗಳಿಸಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಕೇವಲ 20 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಲಖನೌ ತಂಡಕ್ಕೆ ಬದೋನಿ ಹಾಗೂ ಇಂಗ್ಲಿಸ್ 49 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಬದೋನಿ ಒಬ್ಬರೆ ಕೇವಲ 18 ಎಸೆತಗಳಲ್ಲಿ 43 ರನ್ಗಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 3 ಸಿಕ್ಸರ್ಗಳಿದ್ದವು. ಬದೋನಿ ನಂತರ ಬಂದ ನಾಯಕ ರಿಷಭ್ ಪಂತ್ 4ನೇ ವಿಕೆಟ್ಗೆ ಇಂಗ್ಲಿಸ್ ಜೊತೆಗೂಡಿ 65 ರನ್ ಸೇರಿಸಿದರು. ಪಂತ್ ಇಂದೂ ಕೂಡ ನಿಧಾನಗತಿಯ ಆಟವಾಡಿದರು. 22 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 26 ರನ್ಗಳಿಸಿ ನಿರ್ಗಮಿಸಿದರು.
ಆರಂಭಿಕನಾಗಿ ಬಂದು 17ನೇ ಓವರ್ನಲ್ಲಿ ಔಟ್ ಆದ ಇಂಗ್ಲಿಸ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ಗಳ ಸಹಿತ 72 ರನ್ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಅಬ್ದುಲ್ ಸಮದ್ 20 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 37 ರನ್ಗಳಿಸಿ ತಂಡದ ಮೊತ್ತವನ್ನ 190ರ ಗಡಿದಾಟಿಸಿದರು. ಅರ್ಜುನ್ ತೆಂಡೂಲ್ಕರ್ ಅಜೇಯ 5 ರನ್ಗಳಿಸಿದರು.
ಪಂಜಾಬ್ ತಂಡ 15 ಅಂಕಗಳೊಂದಿಗೆ ಲೀಗ್ ಅಂತ್ಯಗೊಳಿಸಿದೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ. ಈಗಾಗಲೇ 14 ಅಂಕಗಳಿಸಿರುವ ರಾಜಸ್ಥಾನ್ ತಂಡಕ್ಕೆ ಇನ್ನೂ ಒಂದು ಪಂದ್ಯ ಬಾಕಿಯಿದ್ದು, ನಾಳೆ ರಾಜಸ್ಥಾನ್ ತಂಡ ಮುಂಬೈ ವಿರುದ್ಧ ಗೆದ್ದರೆ ಪಂಜಾಬ್ ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ ಗೆದ್ದರೆ ಪಂಜಾಬ್ ಪ್ಲೇಆಫ್ ಪ್ರವೇಶಿಸಲಿದೆ.
May 23, 2026 11:17 PM IST













