ಅಪಘಾತದ ನಂತರ ಲವ್ & ವಾರ್ ಸಿನಿಮಾ ದೊಡ್ಡ ವಿವಾದಕ್ಕೆ ಸಿಲುಕಿದೆ. 42 ವರ್ಷದ ಬಡಗಿ ಚಂದ್ರಧಾರಿ ಸಿಂಗ್ ಯಾದವ್ ಜೂನ್ 17 ರ ಮುಂಜಾನೆ ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಮುಂಬೈನ ಫಿಲ್ಮ್ ಸಿಟಿಯ ರಾಯಲ್ ಪಂಪ್ ಸ್ಟುಡಿಯೋದಲ್ಲಿ ನಟಿ ಆಲಿಯಾ ಭಟ್ ಶೂಟಿಂಗ್‌ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಸದ್ಯ ಶಾರ್ಟ್ ಸರ್ಕ್ಯೂಟ್ ವಿದ್ಯುತ್ ಆಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ ಈವರೆಗೂ ಸ್ಪಷ್ಟ ನಿಖರ ಕಾರಣ ತಿಳಿದುಬಂದಿಲ್ಲ.
ಚಂದ್ರಧಾರಿ ಸಿಂಗ್ ಯಾದವ್ ಅವರ ಪತ್ನಿ ಮತ್ತು ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಅವರ ಮರಣದ ನಂತರ, ಬನ್ಸಾಲಿ ಪ್ರೊಡಕ್ಷನ್ಸ್ ದುಃಖತಪ್ತ ಕುಟುಂಬಕ್ಕೆ ₹ 40 ಲಕ್ಷ ಆರ್ಥಿಕ ಪರಿಹಾರವನ್ನು ನೀಡಿತು.
ಇತ್ತೀಚೆಗೆ ಚಿತ್ರೀಕರಣದ ಸೆಟ್‌ನಲ್ಲಿ ಸಂಭವಿಸಿದ ದುರಂತದ ನಂತರ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ( FWICE ) ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ಮಾಣ ಸಂಸ್ಥೆಗೆ ಮೃತ ತಂತ್ರಜ್ಞ ಚಂದ್ರಧಾರಿ ಸಿಂಗ್ ಯಾದವ್ ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದೆ.
ನಿರ್ಮಾಣ ಸಂಸ್ಥೆ ಈಗಾಗಲೇ ₹ 40 ಲಕ್ಷ ಆರ್ಥಿಕ ಸಹಾಯ ಪ್ಯಾಕೇಜ್ ಘೋಷಿಸಿದ್ದರೂ, FWICE ಆ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಲು ಒತ್ತಾಯಿಸುತ್ತಿದೆ. ಯಾದವ್ ಅವರ ಚಿಕ್ಕ ಹೆಣ್ಣುಮಕ್ಕಳ ಭವಿಷ್ಯ ಮತ್ತು ಶಿಕ್ಷಣವನ್ನು ಭದ್ರಪಡಿಸಿಕೊಳ್ಳಲು ದೊಡ್ಡ ಮೊತ್ತದ ಅಗತ್ಯವಿದೆ ಎಂದು ಒಕ್ಕೂಟ ಒತ್ತಿ ಹೇಳುತ್ತದೆ. ಕುಟುಂಬದ ದೀರ್ಘಕಾಲೀನ ಕಲ್ಯಾಣವು ಪ್ರಮುಖ ಆದ್ಯತೆಯಾಗಿ ಉಳಿಯಬೇಕು ಎಂದು FWICE ಅಧ್ಯಕ್ಷ ಬಿಎನ್ ತಿವಾರಿ ಹೇಳಿದರು.
“ಮೊದಲನೆಯದಾಗಿ, ಅವರ ಮಕ್ಕಳು ತುಂಬಾ ಚಿಕ್ಕವರಾಗಿರುವುದರಿಂದ ಮತ್ತು ಕುಟುಂಬಕ್ಕೆ ಅವರ ಶಿಕ್ಷಣಕ್ಕೆ ಹಣದ ಅಗತ್ಯವಿರುವುದರಿಂದ ಪರಿಹಾರವನ್ನು ₹ 50 ಲಕ್ಷಕ್ಕೆ ಹೆಚ್ಚಿಸಬೇಕೆಂದು ನಾವು ಬಯಸುತ್ತೇವೆ. ಅಲ್ಲದೆ, ಸೆಟ್‌ನಲ್ಲಿ ಕಠಿಣ ಸುರಕ್ಷತಾ ಕ್ರಮಗಳಿಗೆ ನಾವು ಕರೆ ನೀಡಿದ್ದೇವೆ. ಈ ಕಾರ್ಮಿಕರ ಕೆಲಸದ ಸಮಯವನ್ನು ಸಹ ಕಡಿಮೆ ಮಾಡಿದ್ದೇವೆ. ಅವರು ತುಂಬಾ ಪ್ರತಿಭಾನ್ವಿತ ತಂತ್ರಜ್ಞರಾಗಿದ್ದರು. ಅವರು ಈ ರೀತಿ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ” ಎಂದು ಬಿಎನ್ ತಿವಾರಿ ಇಂಡಿಯಾ ಟುಡೇಗೆ ತಿಳಿಸಿದರು.
ಆರ್ಥಿಕ ನೆರವಿನ ಜೊತೆಗೆ ಭನ್ಸಾಲಿಯವರ ನಿರ್ಮಾಣ ಸಂಸ್ಥೆಯು ಯಾದವ್ ಅವರ ಪತ್ನಿಗೆ ಉದ್ಯೋಗ ನೀಡಬೇಕೆಂದು ಫೆಡರೇಶನ್ ವಿನಂತಿಸಿದೆ. ಉದ್ಯೋಗವು ಸಂತ್ರಸ್ತ ಕುಟುಂಬಕ್ಕೆ ಸ್ಥಿರ ಆದಾಯ ಒದಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಮನಿ ಕಂಟ್ರೋಲ್ ವರದಿಯ ಪ್ರಕಾರ, ಅಪಘಾತಕ್ಕೆ ಸ್ವಲ್ಪ ಮೊದಲು ಸಿಬ್ಬಂದಿ ಬಹಳ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. FWICE ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಅವರು ಯಾದವ್ ಬೆಳಿಗ್ಗೆ 7 ರಿಂದ ಮರುದಿನ ಬೆಳಗಿನ ಜಾವ 3 ಗಂಟೆಯವರೆಗೆ ಡ್ಯೂಟಿಯಲಲ್ಇದ್ದರು. ಸತತ ಮೂರು ದಿನಗಳ ಕಾಲ ಈ ಶೆಡ್ಯೂಲ್ ರಿಪೀಟ್ ಮಾಡಿದ್ದರು ಎಂದು ಬಹಿರಂಗಪಡಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಫೆಡರೇಶನ್ ಪ್ರೊಡಕ್ಷನ್ ಹೌಸ್ಗಳಿಗೆ ಕಠಿಣ ಸುರಕ್ಷತಾ ವ್ಯವಸ್ಥೆ ಮಾಡಲು ಸೂಚಿಸಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ ಸಿನಿಮಾ ಲವ್ & ವಾರ್, ಪ್ರಸ್ತುತ ಬಾಲಿವುಡ್‌ನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.












