Lakshya Raichandani: 17ನೇ ವಯಸ್ಸಲ್ಲಿ 2ನೇ ದ್ವಿಶತಕದ ಅಬ್ಬರ! ಯೂತ್​ ಟೆಸ್ಟ್​​​ನಲ್ಲಿ ಕಾಂಗರೂ ಬೌಲರ್​ಗಳಿಗೆ ನರಕ ತೋರಿಸಿದ ಲಕ್ಷ್ಯ | ಕ್ರೀಡಾ ಸುದ್ದಿ | ACTPnews

ಲಕ್ಷ್ಯ ರಾಯ್​ಚಂದಾನಿ


Last Updated:

ಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಯೂತ್ ಟೆಸ್ಟ್ ಪಂದ್ಯದ ಎರಡನೇ ದಿನದ ಆಟವು ಭಾರತದ ಯುವ ಬ್ಯಾಟರ್‌ಗಳ ಸಂಪೂರ್ಣ ಮೇಲುಗೈಗೆ ಸಾಕ್ಷಿಯಾಗಿದೆ. ಭಾರತ 213 ರನ್​ಗಳ ಭರ್ಜರಿ ಬೃಹತ್ ಮುನ್ನಡೆ ಸಾಧಿಸಿದೆ.

 ಲಕ್ಷ್ಯ ರಾಯ್​ಚಂದಾನಿ
ಲಕ್ಷ್ಯ ರಾಯ್​ಚಂದಾನಿ

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೊದಲ ಅನ್​ಅಫೀಶಿಯಲ್ ಯೂತ್ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ಸಂಪೂರ್ಣವಾಗಿ ಭಾರತದ ಯುವ ಆರಂಭಿಕ ಬ್ಯಾಟರ್ ಲಕ್ಷ್ಯ ರಾಜೇಶ್ ರಾಯಚಂದಾನಿ ಅವರ ಪಾಲಾಯಿತು. ಕಾಂಗರೂ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಲಕ್ಷ್ಯ, ಆಕರ್ಷಕ ಅಜೇಯ ದ್ವಿಶತಕ ಸಿಡಿಸಿ ಭಾರತ ತಂಡವನ್ನು ಅತ್ಯಂತ ಸುದೃಢ ಸ್ಥಿತಿಗೆ ತಲುಪಿಸಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಅಂಡರ್-19 ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 430 ರನ್ ಕಲೆಹಾಕಿದೆ.

217ಕ್ಕೆ ಗಂಟು ಮೂಟೆ ಕಟ್ಟಿದ ಆಸೀಸ್

4 ದಿನಗಳ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 217 ರನ್‌ಗಳಿಗೆ ಆಲೌಟ್ ಆಯಿತು. ಬ್ಲಾಕ್ ಕ್ಯಾಟಲ್ 102 ಹಾಗೂ ಜೆಡ್ ಹಾಲಿಕ್ 59 ರನ್​ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು. ಭಾರತದ ಪರ ಇಶಾನ್ ಓಂ 53ಕ್ಕೆ 5 ವಿಕೆಟ್ ಪಡೆದರೆ, ಮೋಹಿತ್ ಉಲ್ವಾ 37ಕ್ಕೆ 3 ನಾಯಕ ಯಶೋವರ್ಧನ್ ಚೌಹಾಣ್ 56ಕ್ಕೆ 2 ವಿಕೆಟ್ ಪಡೆದರು.

ಅಬ್ಬರಿಸಿದ ರಾಯ್​ಚಾಂದಾನಿ

ಆಸ್ಟ್ರೇಲಿಯಾವನ್ನು 217 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಮೊದಲ ದಿನದ ಆಟ ಮುಗಿಯುವ ಮುನ್ನ ಭಾರತ ಕೇವಲ 1 ಓವರ್ ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರ ಲಕ್ಷ್ಯ ರಾಯಚಂದಾನಿ ಎರಡು ಬೌಂಡರಿಗಳ ನೆರವಿನಿಂದ 8 ರನ್ ಗಳಿಸಿದ್ದು, ಮೊದಲ ದಿನದ ಮುಕ್ತಾಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿತ್ತು.

ಅಜೇಯ ದ್ವಿಶತಕ ಸಿಡಿಸಿದ ಲಕ್ಷ್ಯ

ಮೊದಲ ದಿನದ 8/0 ಸ್ಕೋರ್‌ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಅಂಡರ್-19 ತಂಡ, ದಿನದ ಅಂತ್ಯಕ್ಕೆ 92 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 430/8 ರನ್ ಕಲೆಹಾಕಿದೆ. ಆರಂಭಿಕನಾಗಿ ಕಣಕ್ಕಿಳಿದಿದ್ದ ಲಕ್ಷ್ಯ ರಾಯಚಂದಾನಿ 256 ಎಸೆತಗಳಲ್ಲಿ 20 ಬೌಂಡರಿ ಹಾಗೂ 4 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 210 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.

ಭಾರತ ತಂಡವು 46 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದಾಗ, ಲಕ್ಷ್ಯ ಜೊತೆಗೂಡಿದ ನಾಯಕ ಯಶ್ವರ್ಧನ್ ಸಿಂಗ್ ಚೌಹಾಣ್ ಮೂರನೇ ವಿಕೆಟ್‌ಗೆ 124 ರನ್‌ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದರು. ಚೌಹಾಣ್ ಬಳಿಕ ಬಂದವರು ಹೆಚ್ಚು ಸಮಯ ನಿಲ್ಲಲಿಲ್ಲ. ಮನಲ್ ಚೌಗಾಣ್ 0, ಕುಶ್ ಪಟೇಲ್ 1, ಮನವ್ ಕೃಷ್ಣ 25, ಅಯಾನ್ ಅಕ್ರಮ್ 26, ಇಶಾನ್ ಓಂ 7 ರನ್​ಗಳಿಸಿದರು.

10ನೇ ವಿಕೆಟ್​ಗೆ ಶತಕದ ಜೊತೆಯಾಟ

ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ವಿಕೆಟ್‌ಗಳು ಉರುಳಿ ಭಾರತ 293 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಾಗ ಆಸೀಸ್ ಮೇಲುಗೈ ಸಾಧಿಸುವಂತೆ ಕಂಡಿತು. ಆದರೆ 10ನೇ ಕ್ರಮಾಂಕದಲ್ಲಿ ಬಂದ ಬೌಲರ್ ಮೊಹಿತ್ ಉಲ್ವಾ ಅವರು ಲಕ್ಷ್ಯ ಅವರೊಂದಿಗೆ ಸೇರಿ ಕೌಂಟರ್ ಅಟ್ಯಾಕ್ ಮಾಡಿದರು. ಇವರಿಬ್ಬರು ಮುರಿಯದ 9ನೇ ವಿಕೆಟ್‌ಗೆ ಕೇವಲ ಒಂದು ಎಸೆತಕ್ಕಿಂತಲೂ ಹೆಚ್ಚಿನ ವೇಗದಲ್ಲಿ 137 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಮೊಹಿತ್ ಉಲ್ವಾ ಕೇವಲ 56 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 58 ರನ್ ಗಳಿಸಿ ಅಜೇಯರಾಗಿದ್ದಾರೆ.

ಆಸ್ಟ್ರೇಲಿಯಾ ಪರ ಕೇಸಿ ಬಾರ್ಟನ್ 3 ವಿಕೆಟ್ ಹಾಗೂ ಕಾನರ್ ಗ್ರೆಗೊರಿ 2 ವಿಕೆಟ್ ಪಡೆದರಾದರೂ, ದಿನದ ಕೊನೆಯ ಸೆಷನ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಅಬ್ಬರಕ್ಕೆ ತತ್ತರಿಸಿ ರನ್ ನಿಯಂತ್ರಿಸಲು ಸಂಪೂರ್ಣ ವಿಫಲರಾದರು.

ಮುಂದುವರಿದ ಲಕ್ಷ್ಯ ಆಟ

ಲಕ್ಷ್ಯ ಅವರ ಈ ಅದ್ಭುತ ಫಾರ್ಮ್ ಆಕಸ್ಮಿಕವೇನಲ್ಲ. ಇದೇ ವರ್ಷದ ಜುಲೈನಲ್ಲಿ ನಡೆದಿದ್ದ ಶ್ರೀಲಂಕಾ ಪ್ರವಾಸದಲ್ಲೂ ಅವರ ಬ್ಯಾಟ್ ಭರ್ಜರಿಯಾಗಿ ಸದ್ದು ಮಾಡಿತ್ತು. ಲಂಕಾದ ಕಠಿಣ ಪಿಚ್‌ಗಳಲ್ಲಿ ಕೇವಲ 3 ಇನ್ನಿಂಗ್ಸ್‌ಗಳಲ್ಲಿ ಅವರು ಒಂದು ದ್ವಿಶತಕ (207) ಸೇರಿ 2 ಅದ್ಭುತ ಶತಕಗಳನ್ನು ಬಾರಿಸಿದ್ದರು. ತಮ್ಮ ಕೊನೆಯ 4 ಯೂತ್ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಲಕ್ಷ್ಯ ಸಿಡಿಸಿರುವ 3ನೇ ಶತಕ (ದ್ವಿಶತಕ ಸೇರಿದಂತೆ) ಇದಾಗಿದೆ.

ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದ ಭಾರತ

ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ನಂತರ ಭಾರತೀಯ ಯುವ ಪಡೆ 4.67ರ ರನ್ ರೇಟ್‌ನಲ್ಲಿ ವೇಗವಾಗಿ ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಕೆಲ ವಿಕೆಟ್‌ಗಳು ಬೇಗನೆ ಉರುಳಿದರೂ, ಲಕ್ಷ್ಯ ಕೆಳ ಕ್ರಮಾಂಕದ ಬ್ಯಾಟರ್‌ಗಳ ಜೊತೆಗೂಡಿ ಉಪಯುಕ್ತ ಜೊತೆಯಾಟವಾಡಿದರು. ಪ್ರಸ್ತುತ 213 ರನ್‌ಗಳ ಮುನ್ನಡೆ ಹೊಂದಿರುವ ಭಾರತ ತಂಡ, ಮೂರನೇ ದಿನದಂದು ಆಸೀಸ್ ಪಡೆಗೆ ಇನ್ನು ದೊಡ್ಡ ಮೊತ್ತದ ಗುರಿ ನೀಡುವ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯುವ ಯೋಜನೆಯಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed