Last Updated:
ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-0 ಇಂದ ಕ್ಲೀನ್ಸ್ವೀಪ್ ಮಾಡಿದ್ದ ಭಾರತೀಯ ಯುವ ಪಡೆ ಯೂತ್ ಪಂದ್ಯವನ್ನ ಇನ್ನಿಂಗ್ಸ್ ಮತ್ತು 48 ರನ್ಗಳಿಂದ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತು.
ಆಸ್ಟ್ರೇಲಿಯಾ ವಿರುದ್ಧದ (India vs Australia) ಮೊದಲ ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತ ಅಂಡರ್-19 ಕ್ರಿಕೆಟ್ ತಂಡವು ಇನ್ನಿಂಗ್ಸ್ ಮತ್ತು 48 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-0 ಇಂದ ಕ್ಲೀನ್ಸ್ವೀಪ್ ಮಾಡಿದ್ದ ಭಾರತೀಯ ಯುವ ಪಡೆ, ಇದೀಗ ಟೆಸ್ಟ್ ಮಾದರಿಯಲ್ಲೂ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಭಾರತದ ಈ ಬೃಹತ್ ಗೆಲುವಿನಲ್ಲಿ ಬ್ಯಾಟಿಂಗ್ನಲ್ಲಿ ಲಕ್ಷ್ಯ ರಾಯ್ಚಂದಾನಿ ಅವರ ದ್ವಿಶತಕ ಹಾಗೂ ಬೌಲಿಂಗ್ನಲ್ಲಿ ಯಶವರ್ಧನ್ ಚೌಹಾಣ್ ಮತ್ತು ಇಶಾನ್ ಓಮ್ ಅವರ ಮಾರಕ ಬೌಲಿಂಗ್ ದಾಳಿ ಪ್ರಮುಖ ಪಾತ್ರ ವಹಿಸಿತು.
2ನೇ ದಿನ 430/8 ರನ್ಗಳೊಂದಿಗೆ ಇನ್ನಿಂಗ್ಸ್ ಮುಂದುವರಿಸಿದ ಭಾರತ ಕಿರಿಯರ ತಂಡ 102.3 ಓವರ್ಗಳಲ್ಲಿ 494 ರನ್ಗಳಿಗೆ ಆಲೌಟ್ ಆಯಿತು. 2ನೇ ದಿನ 210 ರನ್ಗಳಿಸಿದ್ದ ಲಕ್ಷ್ಯ ಇಂದು ಆ ಮೊತ್ತವನ್ನ 240ಕ್ಕೆ ಏರಿಸಿಕೊಂಡರು. ಅವರ ಇನ್ನಿಂಗ್ಸ್ನಲ್ಲಿ 24 ಬೌಂಡರಿ, 4 ಸಿಕ್ಸರ್ ಸಿಡಿಸಿ ಔಟ್ ಆದರು. ನಿನ್ನೆ 58 ರನ್ಗಳಿಸಿ ಅಜೇಯರಾಗಿ ಉಳಿದಿದ್ದ, 84 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ಗಳ ಸಹಿತ 92 ರನ್ಗಳಿಸಿ ಕೊನೆಯವರಾಗಿ ಔಟ್ ಆದರು. ಇದಕ್ಕೂ ಮುನ್ನ ಯಶವರ್ಧನ್ ಚೌಹಾಣ್ (54 ರನ್) ಉಪಯುಕ್ತ ಕೊಡುಗೆ ನೀಡಿದ್ದರಿಂದ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 494 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದರೊಂದಿಗೆ ಭಾರತಕ್ಕೆ 277 ರನ್ಗಳ ಭಾರಿ ಮುನ್ನಡೆ ಸಿಕ್ಕಿತು.
277 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಬ್ಯಾಟರ್ಗಳಿಗೆ ಭಾರತದ ಬೌಲರ್ಗಳು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಬ್ಯಾಟಿಂಗ್ನಲ್ಲಿ ಮಿಂಚಿದ್ದ ವೇಗಿ ಯಶವರ್ಧನ್ ಚೌಹಾಣ್ 75 ರನ್ಗಳಿಗೆ 6 ವಿಕೆಟ್ ಕಸಿದು ಆಸೀಸ್ ಪಡೆಯ ಬೆನ್ನೆಲುಬು ಮುರಿದರು. ಮತ್ತೊಂದೆಡೆ ಎಡಗೈ ಸ್ಪಿನ್ನರ್ ಇಶಾನ್ ಓಮ್ 62 ರನ್ಗಳಿಗೆ 4 ವಿಕೆಟ್ ಪಡೆದು ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು. ಇವರಿಬ್ಬರೇ ಆಸ್ಟ್ರೇಲಿಯಾದ ಎಲ್ಲಾ 10 ವಿಕೆಟ್ಗಳನ್ನು ಹಂಚಿಕೊಂಡರು.
ಆಸ್ಟ್ರೇಲಿಯಾ ಪರ ಬ್ಲೇಕ್ ಕ್ಯಾಟಲ್ ಏಕಾಂಗಿಯಾಗಿ ಹೋರಾಡಿ 114 ಎಸೆತಗಳಲ್ಲಿ 16 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 123 ರನ್ ಸಿಡಿಸಿ ಶತಕ ಗಳಿಸಿದರು. ಕ್ಯಾಟಲ್ ಹೊರೆತುಪಡಿಸಿ ಆರಂಭಿಕ ಬ್ಯಾಟರ್ ನೀಲ್ ಪಟೇಲ್ 41, ಕಾನರ್ ಗ್ರೆಗೊರಿ 36 ರನ್ಗಳಿಸಿ ಎರಡಂಕಿ ಗಡಿ ದಾಟಿದರು. ಆಸ್ಟ್ರೇಲಿಯಾದ 7 ಬ್ಯಾಟರ್ಗಳು ಎರಡಂಕಿ ಮೊತ್ತವನ್ನೂ (10 ರನ್) ದಾಟಲಿಲ್ಲ. ಪರಿಣಾಮವಾಗಿ ಆಸ್ಟ್ರೇಲಿಯಾ 229ಕ್ಕೆ ಆಲೌಟ್ ಆಗಿ ಇನ್ನಿಂಗ್ಸ್ ಹಾಗೂ 48 ರನ್ಗಳ ಸೋಲು ಒಪ್ಪಿಕೊಂಡಿತು.
ಭಾರತ ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವಿನ ಎರಡನೇ ಹಾಗೂ ಅಂತಿಮ ಯೂತ್ ಟೆಸ್ಟ್ ಪಂದ್ಯವು ಅಕ್ಟೋಬರ್ 5 ರಿಂದ 8 ರವರೆಗೆ ಇದೇ ಮೈದಾನದಲ್ಲಿ ನಡೆಯಲಿದೆ.














