ಇನ್ಸ್ಟಾಗ್ರಾಮ್ ಸೇರಿದಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಖುಷ್ಬೂ, ತಮ್ಮ ಕುಟುಂಬದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
ಇದು ನನ್ನ ಕುಟುಂಬ. ಪ್ರೀತಿ, ಪರಸ್ಪರ ಗೌರವ ಮತ್ತು ನಂಬಿಕೆಯ ಮೇಲೆ ನಾವು ಈ ಕುಟುಂಬವನ್ನು ಕಟ್ಟಿದ್ದೇವೆ. ಇಂದಿನ ಸ್ಥಾನವನ್ನು ತಲುಪಲು ಹಗಲಿರುಳು ಶ್ರಮಿಸಿದ್ದೇವೆ. ಸೋಲುಗಳನ್ನೂ ಕಂಡಿದ್ದೇವೆ, ಸಂಕಷ್ಟಗಳನ್ನೂ ಎದುರಿಸಿದ್ದೇವೆ. ಆದರೆ ಎಂದಿಗೂ ಹೋರಾಟ ನಿಲ್ಲಿಸಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ಹಾಗೆಯೇ ತಮ್ಮ ಇಬ್ಬರು ಪುತ್ರಿಯರನ್ನು ಉತ್ತಮ ಸಂಸ್ಕಾರ ಮತ್ತು ಜವಾಬ್ದಾರಿಯುತ ಮೌಲ್ಯಗಳೊಂದಿಗೆ ಬೆಳೆಸಿರುವುದಾಗಿ ಖುಷ್ಬೂ ಹೇಳಿಕೊಂಡಿದ್ದಾರೆ. ಸೆಲೆಬ್ರಿಟಿ ಮಕ್ಕಳಾಗಿದ್ದರೂ ಅವರು ತಂದೆ-ತಾಯಿಯ ಹೆಸರನ್ನು ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಜೊತೆಗೆ ಇತ್ತೀಚೆಗೆ ಕೆಲವರು ತಮ್ಮ ಮಕ್ಕಳ ರೂಪದ ಬಗ್ಗೆಯೂ ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಖುಷ್ಬೂ ಕಿಡಿಕಾರಿದ್ದಾರೆ.
ಇಂತಹ ಕಾಮೆಂಟ್ಗಳು ಮಾಡುವವರಲ್ಲಿ ಮಾನವೀಯತೆ ಮತ್ತು ಸಂಸ್ಕಾರದ ಕೊರತೆ ಇದೆ. ಇತರರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರೋಲರ್ಗಳಿಗೆ ನೇರವಾಗಿ ಎಚ್ಚರಿಕೆ ನೀಡಿರುವ ಖುಷ್ಬೂ, ನಿಮ್ಮದೇ ಭಾಷೆಯಲ್ಲಿ ನಿಮಗೆ ಉತ್ತರ ನೀಡುವುದು ನನಗೂ ಗೊತ್ತು. ಆದರೆ ನನ್ನ ತಾಯಿ ನನಗೆ ಅಂತಹ ಸಂಸ್ಕಾರವನ್ನು ಕಲಿಸಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆಗಾಗಿ ಅಥವಾ ಕೆಲವು ವೀಕ್ಷಣೆಗಳಿಗಾಗಿ ಇತರರ ಕುಟುಂಬವನ್ನು ಗುರಿಯಾಗಿಸಿಕೊಂಡು ಮಾತನಾಡುವವರನ್ನು ನಟಿ ಖುಷ್ಬೂ ತೀವ್ರವಾಗಿ ಟೀಕಿಸಿದ್ದಾರೆ.
ಹಾಗೆಯೇ ನಮ್ಮ ಹಕ್ಕುಗಳಿಗಾಗಿ ಮತ್ತು ನಮ್ಮವರ ಗೌರವಕ್ಕಾಗಿ ಧ್ವನಿ ಎತ್ತಬೇಕು. ನಾವು ಮೌನವಾಗಿದ್ದರೆ ಇಂತಹ ವಿಕೃತ ಮನಸ್ಥಿತಿಯವರು ಮತ್ತಷ್ಟು ಧೈರ್ಯ ಪಡೆಯುತ್ತಾರೆ ಎಂದು ನಟಿ ಹೇಳಿದ್ದಾರೆ.
ಖುಷ್ಬೂ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ನಟ-ನಟಿಯರು ಮತ್ತು ಅಭಿಮಾನಿಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೆಲೆಬ್ರಿಟಿಗಳ ಮಕ್ಕಳನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಕುಟುಂಬದ ಸದಸ್ಯರನ್ನು ಟ್ರೋಲಿಂಗ್ಗೆ ಎಳೆಯಬಾರದು ಎಂಬ ಚರ್ಚೆಯೂ ಜೋರಾಗಿದೆ.













