Last Updated:
ಪುಣೆ ಕೇತನ್ ಅಗರವಾಲ್ ಕೊಲೆ ಪ್ರಕರಣದ ಎಫ್ಐಆರ್ ಹಲವಾರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುತ್ತಿದೆ. ಎಫ್ಐಆರ್ ಪ್ರಕಾರ, ಕೇತನ್ಗೆ ತನ್ನ ಭಾವಿ ಪತ್ನಿ ಸಿಯಾ ಗೋಯಲ್ ಬಗ್ಗೆ ಮೊದಲೇ ಅನುಮಾನವಿತ್ತು ಎಂದು ತಿಳಿದುಬಂದಿದೆ.
ಪುಣೆಯ ಗಹುಂಜೆಯ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಅವರ ಸಾವಿನ ಬಗ್ಗೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇದೆ. ಮೊದಲು ದುರಂತ ಅಪಘಾತ ಎಂದು ತಿಳಿಯಲಾಗಿದ್ದ ಈ ಸಾವು ನಂತರ ಕೊಲೆಯಾಗಿ (Murder) ಮಾರ್ಪಾಡಾಗಿದೆ. ಜೂನ್ 18 ರಂದು ಲೋಹಗಢ ಕೋಟೆಯ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತಾದರೂ ನಂತರ ಅದು ಕೊಲೆಯ ಭಯಾನಕ ಪ್ಲಾನ್ ಎಂದು ಸಾಬೀತಾಗಿದೆ. ಇದೀಗ ಆತನ ಭಾವಿ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕೇತನ್ ಸಾವು ಪೂರ್ವನಿಯೋಜಿತ ಕೊಲೆ ಎಂದು ಬಯಲಾಗಿದ್ದು, ಕೇತನ್ ಅವರ ತಂದೆ ವಿಶಾಲ್ ದೇವಿಚಂದ್ ಅಗರ್ವಾಲ್ ಅವರು ನೀಡಿರುವ ದೂರಿನಲ್ಲಿ (ಎಫ್ಐಆರ್) ಹಲವು ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ.
ಕೇತನ್ ತಮ್ಮ ಭಾವಿ ಪತ್ನಿ ಸಿಯಾ ಗೋಯಲ್ ಅವರ ನಡವಳಿಕೆಯ ಬಗ್ಗೆ ಈ ಮೊದಲೇ ತುಂಬಾ ಅನುಮಾನ ವ್ಯಕ್ತಪಡಿಸಿದ್ದರು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಸಿಯಾಳ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿದ್ದೀರಾ ಎಂದು ಕೇತನ್ ತನ್ನ ಕುಟುಂಬವನ್ನು ಪದೇ ಪದೇ ಕೇಳುತ್ತಿದ್ದನಂತೆ. ಸಿಯಾ ಫೋನ್ನಲ್ಲಿ ಯಾವಾಗಲೂ ಬ್ಯೂಸಿ ಇರುತ್ತಾರೆ, ಮಾತನಾಡುವಾಗ ಚೇತನ್ ಚೌಧರಿ ಎಂಬ ಯುವಕನ ಹೆಸರನ್ನು ಪದೇ ಪದೇ ಹೇಳುತ್ತಾಳೆ ಎಂದು ಕೇತನ್ ಕುಟುಂಬಕ್ಕೆ ಹೇಳಿದ್ದರಂತೆ.
ಫೆಬ್ರವರಿ 2026ರಲ್ಲಿ ಪುಣೆಯ ಒಂದು ಹೋಟೆಲ್ನಲ್ಲಿ ಸಿಯಾ ಮತ್ತು ಕೇತನ್ ಅವರ ನಿಶ್ಚಿತಾರ್ಥ ನಡೆದಿತ್ತು. ಸಂಬಂಧಿಕರ ಮೂಲಕ ಏರ್ಪಾಟಾಗಿದ್ದ ಈ ಮದುವೆಯ ನಂತರ ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದರು. ಆದರೆ ಕ್ರಮೇಣ ಸಿಯಾ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತಂತೆ. ಕ್ಷುಲ್ಲಕ ವಿಷಯಗಳಿಗೆ ಜಗಳ, ಮತ್ತು ಲೋಹಗಢ ಕೋಟೆಗೆ ಹೋಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದಳು ಎಂದು ಕೇತನ್ ಕುಟುಂಬಕ್ಕೆ ತಿಳಿಸಿದ್ದರಂತೆ.
ಮೇ 31 ಮತ್ತು ಜೂನ್ 14 ರಂದು ಇಬ್ಬರೂ ಲೋಹಗಢಕ್ಕೆ ಭೇಟಿ ನೀಡಿದ್ದರೂ ಸಿಯಾ ಮತ್ತೆ ಮತ್ತೆ ಅಲ್ಲಿಗೆ ಹೋಗುವಂತೆ ಒತ್ತಾಯಿಸುತ್ತಲೇ ಇದ್ದಳು ಎಂಬುದು ಬಯಲಾಗಿದೆ. ಘಟನೆಯ ಹಿಂದಿನ ದಿನ ಜೂನ್ 17ರಂದು ಸಿಯಾ ಕೇತನ್ಗೆ ಕರೆ ಮಾಡಿ, ಜೂನ್ 18 ತನ್ನ ಹುಟ್ಟುಹಬ್ಬದ ನೆಪದಲ್ಲಿ ಲೋಹಗಢಕ್ಕೆ ಹೋಗೋಣ ಎಂದು ಒತ್ತಾಯಿಸಿದ್ದಳು ಎಂದು ಆರೋಪವಿದೆ. ಕೇತನ್ ತಾಯಿ ಮೊದಲು ಒಪ್ಪದಿದ್ದರೂ ಸಿಯಾ ಪದೇ ಪದೇ ವಿನಂತಿಸಿದ್ದರಿಂದ ಕುಟುಂಬ ಒಪ್ಪಿಕೊಂಡಿತ್ತು.
ಜೂನ್ 21ರಂದು ಅಂತ್ಯಕ್ರಿಯೆ ನಂತರ ಕುಟುಂಬ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಅಲ್ಲಿ ಯಾರೂ ‘ಅಷ್ಟು ಸುಲಭವಾಗಿ ಬೀಳುವುದು ಅಸಾಧ್ಯ’ ಎಂಬುದು ಗೊತ್ತಾಗಿದೆ. ಕೇತನ್ ಹಿಂದಿನ ಅನುಮಾನಗಳು, ಸಿಯಾ ನಡವಳಿಕೆ ಮತ್ತು ಸ್ಥಳದ ಪರಿಶೀಲನೆಯಿಂದ ಇದು ಕೊಲೆ ಪಿತೂರಿ ಎಂದು ಕುಟುಂಬ ಆರೋಪಿಸಿದೆ.
ಎಫ್ಐಆರ್ ಪ್ರಕಾರ, ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕೇತನ್ ಅವರನ್ನು ಬಂಡೆಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಇವರ ದೂರಿನನ್ವಯ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಪೊಲೀಸರು ಈಗ ಮೊಬೈಲ್ ಕರೆ ದಾಖಲೆಗಳು, ಸ್ಥಳ ಇತಿಹಾಸ, ಸಿಸಿಟಿವಿ ದೃಶ್ಯಗಳು ಮತ್ತು ಡಿಜಿಟಲ್ ಪುರಾವೆಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಸಿಯಾ ಮತ್ತು ಚೇತನ್ ನಡುವಿನ ಸಂಬಂಧ, ಸಂಭಾಷಣೆಗಳು ಮತ್ತು ಘಟನೆಯ ದಿನದ ಚಟುವಟಿಕೆಗಳನ್ನು ಆಳವಾಗಿ ತನಿಖೆ ಮಾಡುತ್ತಿದ್ದಾರೆ.ಈ ಪ್ರಕರಣ ದಿನೇ ದಿನೇ ಹೆಚ್ಚು ರೋಚಕವಾಗುತ್ತಿದೆ. ಕೇತನ್ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಮತ್ತು ಸತ್ಯ ಬೆಳಕಿಗೆ ಬರಬೇಕು ಎಂಬುದು ಎಲ್ಲರ ಆಶಯವಾಗಿದೆ.
Pune,Maharashtra













