Last Updated:
ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು, ಈ ವೇಳೆ ಪೊಲೀಸರು ಕೆಲ ಸ್ಫೋಟಕ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರ: ಕೇತನ್ ಅಗರ್ವಾಲ್ ಕೊಲೆ ಪ್ರಕರಣ (Ketan Aggarwal murder case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮದುವೆಯಾಗುವ ಹುಡುಗಿಯಿಂದಲೇ ಪ್ರಾಣ ಕಳೆದುಕೊಂಡಿದ್ದ ಕೇತನ್ ಅಗರ್ವಾಲ್ ಹತ್ಯೆ ಕೇಸ್ನಲ್ಲಿ ಈಗಾಗಲೇ ಹಲವಾರು ಅಂಶಗಳು ಬೆಳಕಿಗೆ ಬಂದಿವೆ. ಸದ್ಯ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಸಿಯಾ ಗೋಯಲ್ (Siya Goyal) ಹಾಗೂ ಆಕೆಯ ಪ್ರಿಯತಮ ಚೇತನ್ ಚೌಧರಿ (Chetan Chaudhary) ಅರೆಸ್ಟ್ ಆಗಿದ್ದಾರೆ. ಸದ್ಯ, ಪೊಲೀಸರು ಚಾರ್ಜ್ ಶೀಟ್ (Charge Sheet) ಸಲ್ಲಿಕೆ ಮಾಡಿದ್ದು, ಈ ವೇಳೆ ಪೊಲೀಸರು ಕೆಲ ಸ್ಫೋಟಕ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಕೇತನ್ ಅಗರ್ವಾಲ್ ಅವರ ಕೊಲೆ ತನಿಖೆಯು ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಚೇತನ್ ಚೌಧರಿಯ ಬೆಂಗಳೂರು ಮೂಲದ ಸ್ನೇಹಿತನೊಬ್ಬನ ಮೂಲಕ ಸುಪಾರಿ ಕೊಡಲು ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸದ್ಯ, ಆತನನ್ನು ಈಗ ಸಾಕ್ಷಿಯನ್ನಾಗಿ ಮಾಡಿದ್ದಾರೆ ಎಂದು ಇಂಡಿಯಾ ಟುಡೇ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಜೂನ್ 18ರಂದು ಆರೋಪಿ ಸಿಯಾ ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ಕೇತನ್ ಅಗರ್ವಾಲ್ನನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಳು, ಬಳಿಕ ಏಕಾಂತ ಪ್ರದೇಶದಲ್ಲಿ ಕೇತನ್ ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಳು. ಸಿಯಾ ಮೊದಲು ಪೊಲೀಸರಿಗೆ ‘ಜೋರಾಗಿ ಗಾಳಿ ಬೀಸಿದ್ದರಿಂದ ಫೋಟೋ ತೆಗೆಯುವಾಗ ಜಾರಿ ಬಿದ್ದರು’ ಎಂದು ಸುಳ್ಳು ಹೇಳಿದ್ದಳು. ಬಳಿಕ ಕುಟುಂಬಸ್ಥರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಪೊಲೀಸರು ಸಿಯಾಳ ಒಂದೊಂದೇ ಕಳ್ಳಾಟವನ್ನು ಬಯಲು ಮಾಡಿದ್ದರು. ಸಿಯಾಳ ಜೊತೆಗ ಆಕೆಯ ಪ್ರಿಯಕರನೂ ಕೊಲೆಗೆ ಸಾಥ್ ನೀಡಿದ್ದು, ತನಿಖೆಯಲ್ಲಿ ಬಹಿರಂಗವಾಗಿತ್ತು.














