Ketan Case Update: ಕೇತನ್ ಕೊಲೆಯ ಹಿಂದಿನ ಅಸಲಿ ಉದ್ದೇಶ ಬಹಿರಂಗ, ಸಿಯಾಳ ವಾಟ್ಸಾಪ್ ಚಾಟ್​​ನಲ್ಲಿತ್ತು ಆ ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಯಾಳ ವಾಟ್ಸಾಪ್ ಚಾಟ್​​ನಲ್ಲಿತ್ತು ಅಸಲಿ ಕಥೆ!


Last Updated:

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಸಂಬಂಧ ಹೊಸ ಕಾರಣ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮದುವೆಗೆ ಮಾನಸಿಕವಾಗಿ ಸಿದ್ಧರಿರಲಿಲ್ಲ ಮತ್ತು ಅವರ ಕುಟುಂಬದ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

ಸಿಯಾಳ ವಾಟ್ಸಾಪ್ ಚಾಟ್​​ನಲ್ಲಿತ್ತು ಅಸಲಿ ಕಥೆ!
ಸಿಯಾಳ ವಾಟ್ಸಾಪ್ ಚಾಟ್​​ನಲ್ಲಿತ್ತು ಅಸಲಿ ಕಥೆ!

ಪುಣೆಯ ಗಹುಂಜೆಯ 26 ವರ್ಷದ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಕಥೆಗಳು ಬಯಲಾಗುತ್ತಿದೆ. ಇದೀಗ ಮತ್ತೆ ತನಿಖೆಯಲ್ಲಿ ಹತ್ಯೆಗೆ ನಿಜವಾದ ಕಾರಣ ಮತ್ತು ಆಘಾತಕಾರಿ ವಿವರಗಳು ಬಯಲಾಗಿವೆ. ಲೋನಾವಾಲಾದ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ನಡೆದ ಈ ಘಟನೆ ಮೊದಲು ಅಪಘಾತ ಎಂದು ತಿಳಿಯಲಾಗಿದ್ದರೂ ನಂತರ ಅದು ಕೊಲೆ ಎಂದು ತಿಳಿದುಬಂದಿದ್ದು, ಸಿಯಾ ವಾಟ್ಸಾಪ್​ ಚಾಟ್​​ನಲ್ಲಿ (WhatsApp Chat) ಸ್ಫೋಟಕ ವಿಚಾರಗಳು ಬಯಲಾಗಿದೆ.

ಪೊಲೀಸರ ಪ್ರಕಾರ, ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮದುವೆಗೆ ಮಾನಸಿಕವಾಗಿ ಸಿದ್ಧಳಿರಲಿಲ್ಲ ಎಂಬುದು ತಿಳಿದುಬಂದಿದೆ. ಆಕೆ ಮತ್ತು ಆಕೆಯ ಪ್ರಿಯಕರನ ವಿಚಾರಣೆ ವೇಳೆ ಕೇತನ್​ ಕೊಲೆಗೆ ನಿವಾದ ಕಾರಣ ಬಹಿರಂಗವಾಗಿದೆ.

ಕೇತನ್​ ಜೊತೆ ಮದುವೆಗೆ ಸಿದ್ಧವಿರಲಿಲ್ವಾ ಸಿಯಾ?

ಕೇತನ್​ ಜೊತೆ ಮದುವೆಗೆ ಸಿಯಾ ಈಗಲೇ ಮಾನಸಿಕವಾಗಿ ಸಿದ್ಧರಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕುಟುಂಬದ ಅಪಾರ ಒತ್ತಡದಿಂದಾಗಿ ಸಂಬಂಧ ಮುಂದುವರಿಸುತ್ತಿದ್ದ ಅವಳು, ಕೇತನ್ ಅವರನ್ನು ಶಾಶ್ವತವಾಗಿ ಮುಗಿಸುವ ಭಯಾನಕ ನಿರ್ಧಾರಕ್ಕೆ ಬಂದಳು ಎಂಬುದು ಬಯಲಾಗಿದೆ. ಇದಕ್ಕೆ ಅವಳ ಪ್ರೇಮಿ ಚೇತನ್ ಚೌಧರಿ ಪೂರ್ಣ ಬೆಂಬಲ ನೀಡಿದ್ದಾನೆ. ಹೀಗಾಗಿ ಇಬ್ಬರು ಸೇರಿ ಹೊಂಚು ಹಾಕಿ ಕೇತನ್​ ಕೊಲೆ ಮಾಡಲು ಮುಂದಾಗಿದ್ದರು ಎಂಬುದು ಬಯಲಾಗಿದೆ.

ದೀಪಾವಳಿ ಪಾರ್ಟಿಯಲ್ಲಿ ಪ್ರಾರಂಭವಾದ ಪ್ರೇಮ

ತನಿಖೆಯಿಂದ ತಿಳಿದುಬಂದಂತೆ, ಕಳೆದ ವರ್ಷ ದೀಪಾವಳಿ ಪಾರ್ಟಿಯಲ್ಲಿ ಪುಣೆಯ ಕೊಂಧ್ವಾ ನಿವಾಸಿ ಚೇತನ್ ಚೌಧರಿ ಅವರನ್ನು ಸಿಯಾ ಭೇಟಿಯಾಗಿದ್ದಳು. ಕ್ರಮೇಣ ಅವರ ನಡುವೆ ಪ್ರೇಮ ಸಂಬಂಧ ಬೆಳೆದಿದೆ. ಸಿಯಾ ತನ್ನ ಮದುವೆಯನ್ನು ಮುಂದೂಡಲು ಪದೇ ಪದೇ ಸಮಯ ಕೇಳುತ್ತಿದ್ದಳು. ಆದರೆ ಕುಟುಂಬದವರು ಆಕೆಯ ಮಾತನ್ನು ಕೇಳಲಿಲ್ಲ. ಕುಟುಂಬದ ಒತ್ತಡ ತಡೆಯಲಾರದೆ ಅವಳು ಕೇತನ್ ನನ್ನು ಕೊಲ್ಲುವ ಸಂಚು ರೂಪಿಸಿದಳು ಎಂದು ತಿಳಿದುಬಂದಿದ್ದು, ವಾಟ್ಸಾಪ್ ಚಾಟ್‌ಗಳು ಮತ್ತು ಡಿಜಿಟಲ್ ಪುರಾವೆಗಳು ಈ ಸಂಚನ್ನು ಸ್ಪಷ್ಟಪಡಿಸಿವೆ.

ಜೂನ್ 14ರಂದು ಮೊದಲ ಪ್ರಯತ್ನ!

ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಜೂನ್ 18ರ ಘಟನೆಗೆ ನಾಲ್ಕು ದಿನಗಳ ಮುಂಚೆ, ಜೂನ್ 14ರಂದು ಸಿಯಾ ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಅಲ್ಲಿ ಅವಳು ಕೇತನ್ ನನ್ನು ಕಂದಕಕ್ಕೆ ತಳ್ಳಲು ಪ್ರಯತ್ನಿಸಿದಳು. ಆದರೆ ಕೇತನ್ ಹತ್ತಿರದ ಪೊದೆಗಳನ್ನು ಹಿಡಿದು ತಪ್ಪಿಸಿಕೊಂಡ. ಸಿಯಾ “ಹಾವು! ಹಾವು!” ಎಂದು ಕೂಗಿ, ಭಯದಿಂದ ಆಕಸ್ಮಿಕವಾಗಿ ತಳ್ಳಿದ್ದಾಗಿ ಸುಳ್ಳು ಹೇಳಿದ್ದಾಗಿ ಹೇಳಿದ್ದಾರೆ. ಮೇ 31ರಂದು ಸಿಯಾ ಕೋಟೆಗೆ ಹೋಗಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಲಿ ಪ್ರವಾಸದಲ್ಲಿ ಪಾಸ್‌ಪೋರ್ಟ್ ಕಣ್ಮರೆ!

ಇನ್ನೂ ಕೇತನ್ ಅವರ ಮದುವೆಗೂ ಮುನ್ನ ಬಾಲಿಯಲ್ಲಿ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಏರ್ಪಡಿಸಲಾಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಕೇತನ್ ಅವರ ಪಾಸ್‌ಪೋರ್ಟ್ ಕಾಣೆಯಾಯಿತು. ಸಿಯಾ ಲೋನಾವಾಲಾ ಫುಡ್ ಮಾಲ್‌ನಲ್ಲಿ ಫೋನ್ ತೆಗೆದುಕೊಳ್ಳುವ ನೆಪದಲ್ಲಿ ಕಾರಿಗೆ ಹಿಂದಿರುಗಿ, ಪಾಸ್‌ಪೋರ್ಟ್ ಅನ್ನು ಶೌಚಾಲಯದಲ್ಲಿ ಫ್ಲಶ್ ಮಾಡಿದ್ದಳು ಎಂದು ಕೇತನ್ ತಂದೆ ಆರೋಪಿಸಿದ್ದಾರೆ. ಇದರಿಂದ ಪ್ರಯಾಣ ರದ್ದಾಗಿ, ಕೇತನ್ ಅವರನ್ನು ಭಾರತದಲ್ಲೇ ಇರಿಸುವ ಉದ್ದೇಶ ಈಡೇರಿತು ಎಂದು ಹೇಳಿದ್ದಾರೆ.

ಜೂನ್ 18: ಹುಟ್ಟುಹಬ್ಬದ ನೆಪದಲ್ಲಿ ಕೊಲೆ

ಜೂನ್ 18ರಂದು ಸಿಯಾ ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ಕೇತನ್ ನನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದು, ಅಲ್ಲಿ ಚೇತನ್ ಚೌಧರಿ ಈಗಾಗಲೇ ಹೊಂಚು ಹಾಕಿ ಕಾಯುತ್ತಿದ್ದ. ಏಕಾಂತ ಪ್ರದೇಶದಲ್ಲಿ ಕೇತನ್ ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ಸಿಯಾ ಮೊದಲು ಪೊಲೀಸರಿಗೆ ‘ಬಲವಾದ ಗಾಳಿಯಿಂದ ಫೋಟೋ ತೆಗೆಯುವಾಗ ಜಾರಿ ಬಿದ್ದರು’ ಎಂದು ಸುಳ್ಳು ಹೇಳಿದ್ದಳು. ಆದರೆ ಕೇತನ್ ಅವರ ಶವ ತಂದಾಗ ಸಿಯಾ ಮುಖದಲ್ಲಿ ಯಾವುದೇ ದುಃಖ ಕಾಣಲಿಲ್ಲ ಎಂದು ಕೇತನ್ ತಂದೆ ಹೇಳಿದ್ದಾರೆ. ಅವಳ ನಡವಳಿಕೆ ಅನುಮಾನಾಸ್ಪದವಾಗಿತ್ತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಅದ್ದೂರಿ ಮದುವೆಗೆ ಪ್ಲಾನ್​ ಮಾಡಿದ್ದ ಕುಟುಂಬ

ಕೇತನ್ ಕುಟುಂಬ ಅದ್ದೂರಿ ಮದುವೆಗೆ ರಾಜಸ್ಥಾನದಲ್ಲಿ ಅರಮನೆ ಬುಕ್ ಮಾಡಿ, ಎರಡು ಖಾಸಗಿ ವಿಮಾನಗಳನ್ನು ವ್ಯವಸ್ಥೆ ಮಾಡಿತ್ತು. ಆದರೆ ಇದರ ಹಿಂದೆ ಭಯಾನಕ ಪಿತೂರಿ ನಡೆಯುತ್ತಿತ್ತು. ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರನ್ನೂ ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ. ಪುಣೆ ಗ್ರಾಮೀಣ ಪೊಲೀಸರು ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ವಾಟ್ಸಾಪ್ ಚಾಟ್‌ಗಳು, ಸಿಸಿಟಿವಿ ದೃಶ್ಯಗಳು ಮತ್ತು ಇತರ ಡಿಜಿಟಲ್ ಪುರಾವೆಗಳು ಪ್ರಕರಣವನ್ನು ಬಲಪಡಿಸುತ್ತಿವೆ. ಈ ಪ್ರಕರಣ ಪ್ರೀತಿ, ವಂಚನೆ ಮತ್ತು ಕುಟುಂಬ ಒತ್ತಡದ ನಡುವಿನ ಅಪಾಯಕಾರಿ ಸನ್ನಿವೇಶಗಳನ್ನು ತೋರಿಸುತ್ತಿದೆ. ಕೇತನ್ ಕುಟುಂಬಕ್ಕೆ ನ್ಯಾಯ ಸಿಗುವುದನ್ನು ಎಲ್ಲರೂ ಆಶಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed