Last Updated:
ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಕೇಸ್ನಲ್ಲಿ ಬಗೆದಷ್ಟು ರೋಚಕ ಸಂಗತಿಗಳು ಬಯಲಾಗುತ್ತಲೇ ಇದೆ. ಸಿಯಾ ಮತ್ತು ಚೇತನ್ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಇದೀಗ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆಯೂ ಬಯಲಾಗಿದೆ. ಯಾರು ಆತ? ಏನು ಸಂಬಂಧ? ಇಲ್ಲಿದೆ ನೋಡಿ.
ಪುಣೆಯ ಲೋನಾವಾಲ ಬಳಿಯ ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ (Ketan Agarwal Case) ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವು (New Twist) ಪಡೆದುಕೊಳ್ಳುತ್ತಿದೆ. ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ (Siya Goyal) ಮತ್ತು ಚೇತನ್ ಚೌಧರಿ (Chethan Chowdary) ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರ ಕಸ್ಟಡಿ ಇಂದು ಕೊನೆಗೊಳ್ಳುತ್ತಿದೆ. ಮಧ್ಯಾಹ್ನ 2:30 ರ ನಂತರ ಅವರನ್ನು ವಡ್ಗಾಂವ್ ಮಾವಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಈ ಮಧ್ಯೆ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ.
ಕೋರ್ಟ್ನಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ವಿಚಾರಣೆಗೂ ಮೊದಲೇ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯ ಪ್ರಕಾರ, ಕೇತನ್ ಹತ್ಯೆಗೆ ಸಂಚು ರೂಪಿಸುವಾಗ ಸಿಯಾ ಮತ್ತು ಚೇತನ್ ಬೇರೆಯವರ ಸಹಾಯ ಪಡೆದಿದ್ದಾರೆ ಎಂಬ ಅನುಮಾನ ದೃಢಪಟ್ಟಿದೆ. ಇದೀಗ ಮೂರನೇ ವ್ಯಕ್ತಿಯ ಎಂಟ್ರಿ ಖಚಿತವಾಗಿದೆ.
ಹೌದು, ಕೇತನ್ ಹತ್ಯೆ ಕೇಸ್ನಲ್ಲಿ ಮೂರನೇ ವ್ಯಕ್ತಿಯ ಎಂಟ್ರಿ ಪೊಲೀಸ್ ತನಿಖೆಯಲ್ಲಿ ಖಚಿತವಾಗಿದೆ. ಈ ಮೂರನೇ ಯುವಕ ಕೇತನ್ ಹತ್ಯೆಯ ಸಂಪೂರ್ಣ ಯೋಜನೆಯನ್ನು ತಿಳಿದಿದ್ದ ಎನ್ನಲಾಗಿದೆ. ಪೊಲೀಸರು ಈ ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತ ಚೇತನ್ ಮತ್ತು ಸಿಯಾ ಇಬ್ಬರಿಗೂ ಬೇಕಾಗಿದ್ದ ಗೆಳೆಯ ಎಂದು ತಿಳಿದುಬಂದಿದೆ.
ತನಿಖೆಯ ಸಮಯದಲ್ಲಿ ಪೊಲೀಸರು ಕಂಡುಹಿಡಿದ ಮಾಹಿತಿ ಪ್ರಕಾರ, ಚೇತನ್ ಮತ್ತು ಸಿಯಾ ಇಬ್ಬರೂ ಕೇತನ್ ಅಗರ್ವಾಲ್ ಅವರ ಕೊಲೆಯ ಸಂಪೂರ್ಣ ಯೋಜನೆಯ ಬಗ್ಗೆ ತಮ್ಮ ಸ್ನೇಹಿತನೊಂದಿಗೆ ಚರ್ಚಿಸಿದ್ದರು. ಆಘಾತಕಾರಿ ವಿಷಯವೆಂದರೆ ಈ ಯುವಕ ಸಿಯಾ ಮತ್ತು ಚೇತನ್ ಇಬ್ಬರಿಗೂ ‘ಕೇತನ್ ನನ್ನು ಕೊಲ್ಲಬೇಡಿ’ ಎಂದು ಪದೇ ಪದೇ ಎಚ್ಚರಿಸಿದ್ದ. ಆದರೆ ಇಬ್ಬರೂ ತಮ್ಮ ಸ್ನೇಹಿತನ ಮಾತನ್ನು ಕೇಳಲಿಲ್ಲ, ಮತ್ತು ಕೊನೆದಾಗಿ ಕೇತನ್ ನನ್ನು ಕೊಂದೇ ಬಿಟ್ಟರು ಎಂದು ಬಯಲಾಗಿದೆ.
ಚೇತನ್ ಮತ್ತು ಸಿಯಾ ಜೂನ್ 18 ರಂದು ಈ ಸ್ನೇಹಿತನನ್ನು ತಮ್ಮೊಂದಿಗೆ ಲೋಹಗಡ್‌ಗೆ ಬರುವಂತೆ ಬಲವಾಗಿ ಒತ್ತಾಯಿಸಿದ್ದರು ಎನ್ನಲಾಗಿದೆ. ಈ ಸ್ನೇಹಿತನನ್ನೂ ಅಪರಾಧದಲ್ಲಿ ಭಾಗಿಯಾಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಶಂಕಿಸಲಾಗಿದೆ. ಆದಾಗ್ಯೂ, ಆ ಯುವಕ ಜೂನ್ 18 ರಂದು ಅವರೊಂದಿಗೆ ಲೋಹಗಡ್‌ಗೆ ಹೋಗಲಿಲ್ಲ. ಪ್ರಮುಖ ಅಂಶವೆಂದರೆ ಕೇತನ್ ಅಗರ್ವಾಲ್‌ನನ್ನು ಕೊಂದ ನಂತರ, ಚೇತನ್ ಚೌಧರಿ ಮೊದಲು ಈ ಸ್ನೇಹಿತನನ್ನು ಭೇಟಿಯಾಗಿದ್ದ. ಆರೋಪಿ ಸಿಯಾ ಗೋಯಲ್ ಕೂಡ ಈ ಯುವಕನೊಂದಿಗೆ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಕೇತನ್ ಅಗರ್ವಾಲ್ ಪ್ರಕರಣದಲ್ಲಿ ಸಿಲುಕಿರುವ ಮೂರನೇ ಯುವಕ ಮೂಲತಃ ಬೀಡ್ ಜಿಲ್ಲೆಯವನು. ಪ್ರಸ್ತುತ ಅವನು ಪುಣೆಯ ಬಾಲೆವಾಡಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮೇ ಕೊನೆಯ ವಾರದಿಂದ ಅವನು ಚೇತನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಪುಣೆ ಗ್ರಾಮೀಣ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಈ ಹೊಸ ಅಪ್ಡೇಟ್ ನಿಂದಾಗಿ ಎಲ್ಲರ ಗಮನ ಈಗ ನ್ಯಾಯಾಲಯದ ವಿಚಾರಣೆ ಮತ್ತು ಪೊಲೀಸರ ಮುಂದಿನ ಕ್ರಮದತ್ತ ಸಾಗಿದೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಅವರ ಕಸ್ಟಡಿ ಇಂದು ಕೊನೆಗೊಳ್ಳುತ್ತಿದೆ. ಅವರನ್ನು ವಡ್ಗಾಂವ್ ಮಾವಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರು ಈ ಮೂರನೇ ಯುವಕನಿಂದ ಹೆಚ್ಚಿನ ಮಾಹಿತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಕೊಲೆಗೆ ಸಂಚು ರೂಪಿಸುವಲ್ಲಿ ಇವನ ಪಾತ್ರ ಏನು ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ಕೊರತೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಕೊರತೆಯು ತನಿಖೆಯನ್ನು ಸವಾಲಿನದಾಗಿಸಿದೆ. ಪೊಲೀಸರು ಡಿಜಿಟಲ್ ಪುರಾವೆಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಹೊಸ ಸುಳಿವು ಪ್ರಕರಣದ ತನಿಖೆಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ.
Pune,Maharashtra













