Last Updated:
ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯ ವೇಳೆ ಹೊಸ ಸುಳಿವು ಹೊರಬಂದಿವೆ. ಕೇತನ್ ಸಾವಿಗೆ ಕೊನೆಯ 2 ನಿಮಿಷ ಮೊದಲು ಸಿಯಾ ಆಡಿದ್ದ ಆಟ ಬಯಲಾಗಿದೆ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿದೆ.
ಪುಣೆಯ ಲೋಹಗಡ್ ಕೋಟೆಯಲ್ಲಿ (Lohagrh Fort) ನಡೆದ ಕೇತನ್ ಅಗರ್ವಾಲ್ ಕೊಲೆ (Ketan Agarwal Case) ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪೊಲೀಸ್ ತನಿಖೆ (Police Investigation) ಮುಂದುವರೆದಂತೆ ಹೊಸ ಹೊಸ ಸುಳಿವುಗಳು ಬಯಲಾಗುತ್ತಿವೆ. ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chethan Chowdari) ಕೇತನ್ ಅವರನ್ನು ಕೋಟೆಯಿಂದ ತಳ್ಳಿದ್ದಾರೆ ಎಂದು ಪೊಲೀಸರು ಶಂಕಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇದೀಗ ಸಿಯಾ ಆಡಿದ ಮತ್ತೊಂದು ಆಟ ಬಯಲಾಗಿದೆ.
ಪೊಲೀಸರು ಈಗ ಕೇತನ್ ಅವರ ಫೋನ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕೇತನ್ ಅವರನ್ನು ತಳ್ಳುವ ಸಮಯದಲ್ಲಿ ಸಿಯಾ ಆತನ ಫೋನ್ ತೆಗೆದುಕೊಂಡಿದ್ದಾಳೆ. ನಂತರ ಕುಟುಂಬಸ್ಥರು ಬಂದಾಗ ಫೋನ್ ಅವರಿಗೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಹೌದು, ಕೇತನ್ ಸಾವಿಗೂ ಎರಡು ನಿಮಿಷಗಳ ಮುನ್ನ ಸಿಯಾ ಕೇತನ್ ಫೋನ್ ತೆಗೆದುಕೊಂಡಿದ್ದಾಳೆ. ನಂತರ ಕೇತನನ್ನು ಚೇತನ್ ಮತ್ತು ಸಿಯಾ ಸೇರಿ ತಳ್ಳಿದ್ದಾರೆ ಎನ್ನಲಾಗಿದೆ. ಸಿಯಾ ಕೇತನ್ ಫೋನ್ ತೆಗೆದುಕೊಂಡಾದ ಈ ನಡುವೆ ಫೋನ್ನ ಡೇಟಾವನ್ನು ಅಳಿಸಿಹಾಕಲಾಗಿದೆ ಎಂದು ತನಿಖಾ ಪೊಲೀಸರು ಶಂಕಿಸುತ್ತಿದ್ದಾರೆ. ಇದಕ್ಕಾಗಿ ಫೋನ್ ಅನ್ನು ವಿಧಿವಿಜ್ಞಾನ ಇಲಾಖೆಗೆ ಕಳುಹಿಸುವ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದಾರೆ.
ಪೊಲೀಸ್ ತನಿಖೆಗಳ ಪ್ರಕಾರ, ಪಿತೂರಿಯ ಭಾಗವಾಗಿ ಸಿಯಾ ಲೋಹಗಡ್ ಕೋಟೆಯ ಎತ್ತರದ ಸ್ಥಳಕ್ಕೆ ಹೋಗಿ ತನ್ನ ಶೂಲೇಸ್ಗಳನ್ನು ಕಟ್ಟಿಕೊಳ್ಳುವಂತೆ ನಟಿಸುತ್ತಾ ಕುಳಿತಿದ್ದಾಳೆ. ಅವಳು ಬಾಗಿದಾಗ ಚೇತನ್ ಚೌಧರಿ ಕೇತನ್ ನನ್ನು ಹಿಂದಿನಿಂದ ತಳ್ಳಿದ್ದಾನೆ. ಕೇತನ್ ಅವಳನ್ನು ಹಿಡಿಯಲು ಸಾಧ್ಯವಾಗದಂತೆ ಅವಳು ಕುಳಿತಿದ್ದಳು ಎಂದು ಪೊಲೀಸರು ಹೇಳುತ್ತಿದ್ದಾರೆ.
ಪೊಲೀಸರು ಸಿಯಾ ಗೋಯಲ್ ಮೇಲೆ ಪಾಲಿಗ್ರಾಫ್ (ಸುಳ್ಳು ಪತ್ತೆಕಾರಕ) ಪರೀಕ್ಷೆ ನಡೆಸಲು ಬಯಸುತ್ತಿದ್ದಾರೆ. ಇದು ಹೊಸ ಸುಳಿವುಗಳನ್ನು ನೀಡುವ ಸಾಧ್ಯತೆ ಇದೆ. ಸಿಯಾ ಅಜಾಗರೂಕತೆಯಿಂದ ತನಿಖೆಗೆ ಸಹಾಯವಾಗುವ ಮಾಹಿತಿ ಬಹಿರಂಗಪಡಿಸಬಹುದು ಎಂಬ ನಿರೀಕ್ಷೆಯಿದೆ. ಅವಳು ಗೂಗಲ್ನಲ್ಲಿ ಲೋಹಗಡ್ ಕೋಟೆಯ ಎತ್ತರ ಹುಡುಕಿದ್ದಾಳೆಯೇ, ಇತರ ಡಿಜಿಟಲ್ ಚಟುವಟಿಕೆಗಳನ್ನು ಮಾಡಿದ್ದಾಳೆಯೇ ಎಂದು ಪರಿಶೀಲಿಸುತ್ತಿದ್ದಾರೆ.
ಪ್ರಕರಣ ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ. ಪ್ರತ್ಯಕ್ಷದರ್ಶಿಗಳು ಇಲ್ಲ. ಸಿಸಿಟಿವಿ ದೃಶ್ಯಾವಳಿಗಳೂ ಇಲ್ಲ. ಚೇತನ್ ಚೌಧರಿ ಹೂಡಿ ಧರಿಸಿದ್ದನ್ನು ಮಾತ್ರ ಸಿಸಿಟಿವಿಯಲ್ಲಿ ಕಾಣುತ್ತಿದೆ. ಇದು ಕೊಲೆಗೆ ನೇರ ಪುರಾವೆಯಾಗುವುದಿಲ್ಲ. ಪೊಲೀಸರು ಡಮ್ಮಿಯನ್ನು ಬಳಸಿ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಿದ್ದಾರೆ. ಆದರೆ ಡಮ್ಮಿ ಬೀಳುವುದು ಅದರ ತೂಕ, ಕೋನ ಮತ್ತು ವೇಗವನ್ನು ಅವಲಂಬಿಸಿರುವುದರಿಂದ ಇದಕ್ಕೆ ಕಡಿಮೆ ಕಾನೂನು ಮಹತ್ವವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪೊಲೀಸರು ಸಿಯಾ ಕೇತನ್ ಅವರನ್ನು ಮದುವೆಯಾಗಲು ಇಷ್ಟಪಡದ ಕಾರಣ ಸಿಯಾ ಮತ್ತು ಚೇತನ್ ಒಟ್ಟಾಗಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕೊಲೆ ಪೂರ್ವಯೋಜಿತವಾಗಿದೆ ಎಂಬುದನ್ನು ಸಾಬೀತುಪಡಿಸಲು ಮೊಬೈಲ್ ಡೇಟಾ, ಕರೆ ದಾಖಲೆಗಳು, ಇಂಟರ್ನೆಟ್ ಹುಡುಕಾಟ ಇತಿಹಾಸ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಸಾಕ್ಷ್ಯಗಳ ಸರಪಳಿಯಲ್ಲಿ ಒಂದು ಕೊಂಡಿಯಾದರೂ ಮುರಿದರೆ ಇಡೀ ಪ್ರಕರಣ ದುರ್ಬಲಗೊಳ್ಳಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಆದ್ದರಿಂದ ಅತ್ಯಂತ ಎಚ್ಚರಿಕೆಯಿಂದ ಚಾರ್ಜ್ಶೀಟ್ ಸಿದ್ಧಪಡಿಸುತ್ತಿದ್ದಾರೆ. ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪೊಲೀಸರು ಡಿಜಿಟಲ್ ಪುರಾವೆಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಪ್ರಕರಣದ ತೀರ್ಪು ಏನು ಎಂಬುದನ್ನು ನೋಡುವುದಕ್ಕೆ ಎಲ್ಲರೂ ಕಾಯುತ್ತಿದ್ದಾರೆ.
Pune,Maharashtra
Jul 02, 2026 12:35 PM IST













