Last Updated:
ಬಾಲಿವುಡ್ ನಟಿ ಕತ್ರೀನಾ ಕೈಫ್ (Actress Katrina Kaif) ಸ್ಪಿರಿಟ್ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಬಹುನಿರೀಕ್ಷಿತ ಸ್ಪಿರಿಟ್ (Spirit) ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರಕ್ಕೆ ಸಂಬಂಧಿಸಿದ ಹೊಸ ಅಪ್ಡೇಟ್ಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಇದೀಗ ಬಾಲಿವುಡ್ ನಟಿ ಕತ್ರೀನಾ ಕೈಫ್ (Actress Katrina Kaif) ಈ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ.
ಪ್ರಭಾಸ್ ಸದ್ಯ ಫೌಜಿ, ಸ್ಪಿರಿಟ್ ಮತ್ತು ಸಲಾರ್ 2 ಸೇರಿದಂತೆ ಹಲವು ದೊಡ್ಡ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಈ ಪೈಕಿ ಅನಿಮಲ್ ಚಿತ್ರದ ಯಶಸ್ಸಿನ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಸ್ಪಿರಿಟ್ ಮೇಲೆ ಸಿನಿಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.
ಈ ಚಿತ್ರದಲ್ಲಿ ಪ್ರಭಾಸ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ನಿರ್ಮಾಣವಾಗಿದೆ. ಟಾಲಿವುಡ್ ಸಿನಿ ವಲಯದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಬಾಲಿವುಡ್ ನಟಿ ಕತ್ರೀನಾ ಕೈಫ್ ಅವರನ್ನು ‘ಸ್ಪಿರಿಟ್’ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಸಂಪರ್ಕಿಸಲಾಗಿದೆ ಎನ್ನಲಾಗಿದೆ.
ಈಗಾಗಲೇ ಸ್ಪಿರಿಟ್ ಚಿತ್ರದ ನಾಯಕಿಯಾಗಿ ತೃಪ್ತಿ ದಿಮ್ರಿ ಹೆಸರನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಹೀಗಾಗಿ ಕತ್ರೀನಾ ಕೈಫ್ ಈ ಸಿನಿಮಾದಲ್ಲಿ ಕಾಣಿಸಿಕೊಂಡರೆ, ಅದು ವಿಭಿನ್ನ ಹಾಗೂ ಪ್ರಮುಖ ಪಾತ್ರವಾಗಿರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ, ಖ್ಯಾತ ನಟ ವಿವೇಕ್ ಒಬೆರಾಯ್ ಚಿತ್ರದ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕತ್ರೀನಾ ಕೈಫ್ ಈ ಹಿಂದೆ ದಕ್ಷಿಣ ಭಾರತದ ಹಲವು ಸಿನಿಮಾಗಳಿಂದ ಅವಕಾಶಗಳು ಬಂದಿದ್ದರೂ, ಹೆಚ್ಚಿನ ಯೋಜನೆಗಳನ್ನು ಒಪ್ಪಿಕೊಂಡಿರಲಿಲ್ಲ. ಒಂದು ವೇಳೆ ಸ್ಪಿರಿಟ್ ಮೂಲಕ ಅವರು ತಂಡವನ್ನು ಸೇರ್ಪಡೆಯಾದರೆ, ಇದು ದಕ್ಷಿಣ ಭಾರತದ ಮತ್ತೊಂದು ಪ್ರಮುಖ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವರ ಗಮನಾರ್ಹ ಕಮ್ಬ್ಯಾಕ್ ಆಗಲಿದೆ ಎಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಟಿ-ಸಿರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸ್ಪಿರಿಟ್ ಚಿತ್ರವನ್ನು ಮಾರ್ಚ್ 2027ರಲ್ಲಿ ಚಿತ್ರಮಂದಿರಗಳಿಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ. ಆದರೆ ಕತ್ರೀನಾ ಕೈಫ್ ಚಿತ್ರದ ಭಾಗವಾಗಲಿದ್ದಾರೆ ಎಂಬ ಸುದ್ದಿ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ.
ಸಂದೀಪ್ ರೆಡ್ಡಿ ವಂಗಾ ಅವರ ವಿಶಿಷ್ಟ ನಿರ್ದೇಶನ ಶೈಲಿ ಹಾಗೂ ಬಲಿಷ್ಠ ತಾರಾಗಣದ ಕಾರಣ ಸ್ಪಿರಿಟ್ ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಅಪ್ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Bangalore [Bangalore],Bangalore,Karnataka














