ದಾವಣಗೆರೆ: ಬೇಸಿಗೆ ಮಳೆ ಕೆಲವ್ರ ಪಾಲಿಗೆ ವರವಾದ್ರೆ, ಇನ್ನೂ ಕೆಲವರ ಪಾಲಿಗೆ ಶಾಪವಾಗಿ ಮಾರ್ಪಟ್ಟಿದೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದವ್ರು ಕಣ್ಣೀರಿಡ್ತಿದ್ದಾರೆ. ಏಕಾಏಕಿ ಸುರಿದ ಮಳೆಗೆ ದಾವಣೆಗೆರೆ ಜಿಲ್ಲೆಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆಲಿಕಲ್ಲು ಮಳೆಗೆ ಹರಿಹರ, ತ್ಯಾವಣಿಗಿ, ಚನ್ನಗಿರಿ ಭಾಗದಲ್ಲಿ ಫಸಲಿಗೆ ಬಂದಿದ್ದ 1 ಸಾವಿರ ಎಕರೆಗೂ ಅಧಿಕ ಭತ್ತದ ಬೆಳೆ ಮಣ್ಣು ಪಾಲಾಗಿದೆ. ಭತ್ತದ ಕಾಳುಗಳು ನೆಲಕಚ್ಚಿ ಹೋಗಿದ್ದು ಅನ್ನದಾತರು ಪರಿಹಾರಕ್ಕಾಗಿ ಸರ್ಕಾರದತ್ತ ಕೈ ಚಾಚಿಸಿದ್ದಾರೆ.
ಮುದ್ದಾಬಳ್ಳಿ, ಕೊಪ್ಪಳ: ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗ್ತಿದೆ. ಬಿಟ್ಟೂ ಬಿಡದೆ ಸುರಿದ ಮಳೆಗೆ ಮುದ್ದಾಬಳ್ಳಿ ಗ್ರಾಮದಲ್ಲಿ ಅನಾಹುತಗಳ ಸರಮಾಲೆಯೇ ಸೃಷ್ಟಿಯಾಗಿದೆ. ನಾಗಪ್ಪ ಚುಕ್ಕನಕಲ್ಲು ಎಂಬ ರೈತನಿಗೆ ಸೇರಿದ ವೀಳ್ಯದೆಲೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಸಾಲ ಸೂಲ ಮಾಡಿ ಬೆಳೆ ಬೆಳೆದಿದ್ದ ರೈತ ಒಳ್ಳೆ ಲಾಭದ ನಿರೀಕ್ಷೆಯಲ್ಲಿದ್ರು..ಆದ್ರೆ, ಮಳೆಯ ಹೊಡೆತಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬಾಗಲಕೋಟೆ: ಜನ ಮಹಾಮಳೆಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಎರಡು ದಿನದಿಂದ ಮೇಲಿಂದ ಮೇಲೆ ಸುರೀತಿರೋ ಮಳೆಗೆ ಕೊರ್ತಿ, ರೊಳ್ಳಿ, ಬಾಡಗಂಡಿ, ಸಿದ್ದಾಪುರ ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಶೆಡ್ಗಳು, ಮನೆಗಳು ನೆಕಚ್ಚಿ ಹೋಗಿವೆ. ಶೆಡ್ಗಳೆಲ್ಲಾ ದಿಕ್ಕಾಪಾಲಾಗಿ ಹೋಗಿದ್ದು, ಜನ ಕಂಗಾಲಾಗಿದ್ದಾರೆ. ಅಷ್ಟೆ ಅಲ್ಲ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ರೊಳ್ಳಿ ಗ್ರಾಮದಲ್ಲಿ ಆಕಳ ಕರು ಬಲಿಯಾಗಿದೆ.
ಬನ್ನಿಹಟ್ಟಿ, ಹಾವೇರಿ: ಹಾವೇರಿಯಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಧಾರಾಕಾರ ಮಳೆಗೆ ಬನ್ನಿಹಟ್ಟಿ ಗ್ರಾಮದಲ್ಲಿ ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದ ಪರಿಣಾಮ, ಅರ್ಧಕರ್ಧ ಮನೆ ನೆಲಕಚ್ಚಿ ಹೋಗಿದೆ. ಇದದರ ಜೊತೆಗೆ ಸಾಲು ಸಾಲು ವಿದ್ಯುತ್ ಕಂಬಗಳು ನೆಕ್ಕುರುಳಿದಿದ್ದು, ಇಡೀ ಊರಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ ಮರಗಳು ಬಿದ್ದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ.

ಕಳ್ಳಿಹಾಳ, ಹಾವೇರಿ: ಈ ದೃಶ್ಯ ನೋಡ್ತಿದ್ರೆ ಕಣ್ಣಾಲೆಗಳು ತುಂಬಿ ಬರುತ್ತೆ. ತಿಂಗಳಾನುಗಟ್ಟಲೆ ಹಗಲು ರಾತ್ರಿ ಎನ್ನದೆ ರೇಷ್ಟೆ ಹುಳುಗಳನ್ನ ಸಾಕಿದವ್ರು ಈಗ ಕಣ್ಣೀರಿಡ್ತಿದ್ದಾರೆ. ಯಾಕಂದ್ರೆ, ಒಂದೇ ಸಮನೆ ಬಂದ ಮಳೆ ಅನ್ನದಾತನ ಶ್ರವನ್ನೆಲ್ಲಾ ಸರ್ವನಾಶ ಮಾಡಿದೆ. ಕಳ್ಳಿಹಾಳ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ರೇಷ್ಮೆ ಬೆಳೆ ಮಣ್ಣು ಪಾಲಾಗಿದೆ. ರೇಷ್ಮೆ ಗೂಡಿನ ಗೋಡಾನ್ ಮೇಲ್ಛಾವಣಿ ಹಾರಿ ಹೋಗಿದ್ದು, 2.5 ಕ್ವಿಂಟಲ್ ರೇಷ್ಮೆ ಗೂಡು ಹಾಳಾಗಿದೆ. ಜೊತೆಗೆ ರೇಷ್ಮೆ ಹುಳಗಳು ಸಹ ಸಾವನ್ನಪ್ಪಿವೆ.
ಶಿಡ್ಲಾಪುರ, ಹಾವೇರಿ: ಹಾವೇರಿಯ ಶಿಡ್ಲಾಪುರ ಗ್ರಾಮದಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಬಿರುಗಾಳಿಯ ಹೊಡೆತಕ್ಕೆ ಸರ್ಕಾರಿ ಶಾಲೆಯ ಮೇಲ್ಚಾವಣಿ ದಿಕ್ಕಾಪಾಲಾಗಿದೆ.

ಶಿರಸಿ, ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲೂ ಮುಂಗಾರು ಪೂರ್ವ ಮಳೆಗೆ ಸಾಕಷ್ಟು ಹಾನಿ ಮಾಡಿದೆ. ಶಿರಸಿಯಲ್ಲಿ ಬಿದ್ದ ಧಾರಾಕಾರ ಮಳೆಯಿಂದಾಗಿ ಕಾರೊಂದರ ಮೇಲೆ ಬೃಹತ್ ತೆಂಗಿನ ಮರ ಬಿದ್ದು ಸಂಪೂರ್ಣ ಜಖಂಗೊಂಡಿದೆ.
ಶೃಂಗಾರ ತೋಟ, ವಿಜಯನಗರ: ಜಿಲ್ಲೆಯಲ್ಲೂ ಮಳೆ ಅಬ್ಬರಿಸಿದೆ. ಹರಪನಹಳ್ಳಿ ತಾಲೂಕಿನ ಶೃಂಗಾರ ತೋಟ ಗ್ರಾಮದಲ್ಲಿ ಗಾಳಿ ಮಳೆಗೆ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಲವು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆಗಳ ತಗಡಿನ ಶೀಟ್ ಹಾರಿಹೋಗಿವೆ. ಮನೆಗಳ ಮೇಲೆ ಮರದ ರೆಂಬೆ, ಕೊಂಬೆಗಳು ಬಿದ್ದಿದ್ದರಿಂದ ಜನರ ಬದುಕು ಬೀದಿಗೆ ಬಿದ್ದಿದೆ.
ಹುಬ್ಬಳ್ಳಿಯಲ್ಲೂ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ. ಬಿಸಿಲಿನಿಂದ ಕಾದು ಕೆಂಡವಾಗಿದ್ದ ಭೂಮಿಗೆ ಮಳೆರಾಯ ತಂಪೆರೆದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಸುತ್ತ ಮುಟ್ಟ ಭಾರೀ ಮಳಳೆಯಾಗಿದೆ. ಸರಗೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಮನೆಯ ಮೇಲ್ಚಾವಣಿಗಳು ಹಾರಿ ಹೋಗಿದೆ. ಅಲ್ಲದೆ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಒಟ್ನಲ್ಲಿ ಕರುನಾಡಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟಿಸ್ತಿದ್ದು, ಜನ ಜೀವನ ಅಸ್ತವ್ಯಸ್ತ ಆಗಿರೋದಂತೂ ಸುಳ್ಳಲ್ಲ.












