Karnataka Drought: ಮುಂಗಾರು ‘ಕಣ್ಣಾಮುಚ್ಚಾಲೆ’, 178 ತಾಲೂಕುಗಳನ್ನ ಕಾಡ್ತಿದೆ ಭೀಕರ ಬರ! 627 ಹೋಬಳಿಗಳಲ್ಲಿ ಬಿದ್ದೇ ಇಲ್ಲ ಹನಿ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Karnataka Drought: ಮುಂಗಾರು ‘ಕಣ್ಣಾಮುಚ್ಚಾಲೆ’, 178 ತಾಲೂಕುಗಳನ್ನ ಕಾಡ್ತಿದೆ ಭೀಕರ ಬರ! 627 ಹೋಬಳಿಗಳಲ್ಲಿ ಬಿದ್ದೇ ಇಲ್ಲ ಹನಿ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News)


ಚಿಕ್ಕೋಡಿ, ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆರಾಯನ ಅಬ್ಬರ ಮತ್ತೆ ಶುರುವಾಗಿದೆ. 15 ದಿನದಿಂದ ತಣ್ಣಗಾಗಿದ್ದ ವರುಣ ಮತ್ತೆ ಕೇಕೆ ಹಾಕ್ತಿದ್ದಾನೆ. ಹೀಗಾಗಿ ಬೆಳಗಾವಿ ರೈತರಲ್ಲಿ ಮತ್ತೆ ಮಂದಹಾಸ ಮೂಡಿಸಿದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳಲ್ಲಿ ನೀರಿನ ಒಳ ಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದೆ. ಕೃಷ್ಣಾ ನದಿಗೆ ಒಟ್ಟು 60 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದ್ದು, ಜಿಲ್ಲೆಯ ನಾಲ್ಕು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ.

ಕಲಬುರಗಿ: ಜಿಲ್ಲೆಯಲ್ಲಿ ಮಳೆ ಅನ್ನೋದೇ ಮರೀಚಿಕೆಯಾಗಿತ್ತು. ನದಿ, ಬೋರವೆಲ್‌ಗಳು ಬತ್ತಿ ಹೋಗೋದಕ್ಕೆ ಶುರುವಾಗಿದ್ದವು. ಇಂತಾ ಹೊತ್ತಲ್ಲೇ ಮಳೆರಾಯ ಕೃಪೆ ತೋರಿದ್ದಾನೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ. ಬಿತ್ತನೆಗಾಗಿ ಕಾಯ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಯಾದಗಿರಿ: ಜಿಲ್ಲೆಯಲ್ಲಿ ಮಳೆರಾಯ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾನೆ. ಆರಂಭದಲ್ಲಿ ಸುರಿದಿದ್ದ ಮಳೆ ಆಮೇಲೆ ಮರೀಚಿಕೆಯಾಗಿತ್ತು. ಇನ್ನೇನು ಮಳೆಯೇ ಆಗಲ್ವಾ ಅಂತಾ ಕಂಗಾಲಾಗಿದ್ದವ್ರ ಬದುಕಲ್ಲಿ ವರುಣ ತಂಗಾಳಿ ಬೀಸಿದ್ದಾನೆ. ಸುರಪುರ, ಶಹಾಪುರ, ಹುಣಸಗಿ, ಗುರುಮಿಠಕಲ್ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಹೀಗಾಗಿ ಒಣಗ್ತಿದ್ದ ಹತ್ತಿ, ತೊಗರಿ, ಹೆಸರು ಬೆಳೆಗೆ ಜೀವ ಬಂದಂತಾಗಿದೆ.

ಕೋಲಾರ: ಮಳೆಗಾಲ ಶುರುವಾಗಿ ಎರಡು ತಿಂಗಳಾದ್ರೂ ಕೋಲಾರದಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ಇನ್ನೇನು ಹಿಂಗಾರು ಕೂಡಾ ಇದೇ ಪರಿಸ್ಥಿತಿ ನಿರ್ಮಾಣ ಮಾಡುತ್ತಾ ಅನ್ನೋ ಆತಂಕ ಶುರುವಾಗಿತ್ತು. ಇದೇ ಹೊತ್ತಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ಕೋಲಾರದಲ್ಲೂ ಗಾಳಿ ಸಹಿತ ಜೋರು ಮಳೆ ಆಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಮಳೆ ಇಲ್ಲದೆ ಒಣಗುತ್ತಿರುವ ಬೆಳೆಗಳು

ಕೈಕೊಟ್ಟ ಮಳೆರಾಯ, ಬೀದಿಗೆ ಬಿದ್ದ ಬದುಕು!

ಗಂಗಿಮಡಿ, ಗದಗ: ಜಿಲ್ಲೆಯಲ್ಲಿ ಈ ವರ್ಷ ಮಳೆ ಅನ್ನೋದೇ ಕಣ್ಮರೆಯಾಗಿದೆ. ಹನಿ ಮಳೆಯಾಗ್ತಿಲ್ಲ. ಹೀಗೇ ಆದ್ರೆ ಮುಂದೇಗೆ ಅನ್ನೋ ಆತಂಕ ಶುರುವಾಗಿದೆ. ಜಿಲ್ಲೆಯ 7 ತಾಲೂಕಿನಲ್ಲೂ ವರುಣದೇವನ ಸುಳಿವೇ ಇಲ್ಲ. ಇದರ ಪರಿಣಾಮ ಹೆಸರು, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿವೆ. ಗಂಗಿಮಡಿ ಪ್ರದೇಶದಲ್ಲಿ ರೈತ ಶಿವಾನಂದ್ ಅನ್ನೋರು 40 ಎಕರೆ ಜಾಗದಲ್ಲಿ ಬಿತ್ತನೆ ಮಾಡಿದ್ದ ಹೆಸರು ಬೆಳೆಯನ್ನ ತಾನೇ ನಾಶ ಮಾಡಿದ್ದಾನೆ. ಹೀಗಾಗಿ ಗದಗ ಜಿಲ್ಲೆಯನ್ನ ಬರ ಪೀಡಿತ ಜಿಲ್ಲೆ ಅಂತಾ ಘೋಷಿಸುವಂತೆ ರೈತರು ಒತ್ತಾಯಿಸ್ತಿದ್ದಾರೆ.

ಗೋಪನಹಳ್ಳಿ, ಚಿತ್ರದುರ್ಗ: ಚಿತ್ರದುರ್ಗದಲ್ಲೂ ಮಳೆ ಕೈಕೊಟ್ಟಿದ್ದು, ಬಿರುಬಿಸಿಲಿಗೆ ಜನರು ತತ್ತರಿಸಿದ್ದಾರೆ. ಹನಿ ಮಳೆ ಇಲ್ಲದೇ ಬಿತ್ತನೆ ಕಾರ್ಯವೂ ಆಗಿಲ್ಲ. ದಿಕ್ಕು ಕಾಣದಂತಾದ ಜನ ಕತ್ತೆಗಳ ಮದುವೆ ಮಾಡಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಉತ್ತಮ ಮಳೆಯಾಗಲಿ ಅಂತಾ ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತೀಮಾಕಲಪಲ್ಲಿ, ಚಿಕ್ಕಬಳ್ಳಾಪುರ: ಒಂದ್ಕಡೆ ಮಳೆಯಾಗ್ತಿಲ್ಲ. ಇನ್ನೊಂದ್ಕಡೆ ಬೆಳೆಗಳಿಗೆ ಬೆಲೆ ಸಿಕ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಮಳೆ ಕೈಕೊಟ್ಟ ಹೊತ್ತಲ್ಲೇ ಬೆಲೆ ಕುಸಿತದ ಶಾಕ್‌ ತಟ್ಟೋದಕ್ಕೆ ಶುರುವಾಗಿದೆ. ಟೊಮ್ಯಾಟೊ ಬೆಲೆ ಕುಸಿತದಿಂದ ಕೋಲಾರ, ಚಿಕ್ಕಬಳ್ಳಾಪುರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಗೇಪಲ್ಲಿ, ತೀಮಾಕಲಪಲ್ಲಿ ಗ್ರಾಮದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತ ಶ್ರೀನಿವಾಸ್ ಎಂಬುವರು ಸಾಲಸೂಲ ಮಾಡಿ ಒಂದುವರೆ ಎಕರೆಯಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದರು. ಒಳ್ಳೆ ಬೆಳೆಯೂ ಬಂದಿದೆ. ಆದರೆ, ಬೆಲೆ ಇಲ್ಲದ ಕಾರಣ ಟೊಮ್ಯಾಟೋವನ್ನ ರಸ್ತೆಗೆ ಚೆಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಬಹುತೇಕ ಬರದ ಛಾಯೆ ಆವರಿಸಿದೆ. ಒಂದೆರಡು ಜಿಲ್ಲೆಯಲ್ಲಿ ಮಳೆಯಾಗಿದ್ದು ಬಿಟ್ರೆ, ಎಲ್ಲಾ ಕಡೆ ಬರ ತಾಂಡವವಾಡ್ತಿದೆ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಮಳೆ ಕೊರತೆ ಪ್ರಮಾಣ

  • ಮಲೆನಾಡು – 43%
  • ಕರಾವಳಿ ಕರ್ನಾಟಕ – 35%
  • ಉತ್ತರ ಒಳನಾಡು – 33%
  • ದಕ್ಷಿಣ ಒಳನಾಡು – 31%

ಒಟ್ಟಾರೆ ರಾಜ್ಯದಲ್ಲಿ ಶೇಕಡಾ 39 ಮಳೆ ಕೊರತೆಯಾಗಿದೆ. ಮಲೆನಾಡು ಭಾಗಲ್ಲಿ ಶೇಕಡಾ 43 ಮಳೆ ಕೊರತೆಯಾದರೆ, ಕರಾವಳಿ ಕರ್ನಾಟಕದಲ್ಲಿ ಶೇಕಡಾ 35 ಮಳೆ ಕಡಿಮೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಶೇಕಡಾ 33 ಮಳೆ ಕೊರತೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಶೇಕಡಾ 31ರಷ್ಟು ಮಳೆ ಕಡಿಮೆ ಬಿದ್ದಿದೆ.

ಇದನ್ನೂ ಓದಿ: Sheep to Work: ಫೋಕ್ಸ್ ವ್ಯಾಗನ್ ಕಂಪನಿಯಲ್ಲಿ 100 ಕುರಿಗಳಿಗೆ ಉದ್ಯೋಗ! ಏನಿದರ ವಿಶೇಷತೆ?

ಮಳೆಯ ಕಣ್ಣಾಮುಚ್ಚಾಲೆಗೆ ಇಡೀ ಕರುನಾಡೇ ಕಂಗಾಲಾಗಿ ಹೋಗ್ತಿದೆ. 178 ತಾಲೂಕುಗಳಲ್ಲಿ ಬರದ ಸ್ಥಿತಿ ಎದುರಾಗಿದ್ದು, 627 ಹೋಬಳಿಗಳಲ್ಲಿ ಮಳೆಯೇ ಬಿದ್ದಿಲ್ಲ. ಹೀಗಾಗಿ ಕುಡಿಯೋ ನೀರಿಗೂ ತತ್ವಾರ ಶುರುವಾಗ್ತಿದ್ದು, ಹಿಂಗಾರು ಮಳೆ ಕೈಕೊಟ್ಟರೆ ಜನರ ಬದುಕನ್ನ ಊಹಿಸಿಕೊಳ್ಳೋದೂ ಕಷ್ಟವಾಗ್ತಿದೆ. ಒಟ್ಟಿನಲ್ಲಿ ಕರುನಾಡಲ್ಲಿ ಭೀಕರ ಬರದ ಮುನ್ಸೂಚನೆ ಸಿಕ್ತಿದ್ದು, ರೈತರನ್ನ ಮಳೆರಾಯನೇ ಕೈ ಹಿಡಿಬೇಕು. (ವರದಿ: ಬ್ಯೂರೋ ರಿಪೋರ್ಟ್​ ನ್ಯೂಸ್​18) 



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed