Last Updated:
ಐರ್ಲೆಂಡ್ ಮತ್ತು ಭಾರತ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಈಗ ಎಲ್ಲರ ಕಣ್ಣುಗಳು ಭಾರತದ ಯಂಗ್ಸ್ಟಾರ್ ವೈಭವ್ ಸೂರ್ಯವಂಶಿ ಮೇಲೆ ನೆಟ್ಟಿವೆ. ಕೇವಲ 15 ವರ್ಷದಲ್ಲೇ ಭಾರತದ ಪರ ಆಡಲು ಸೂರ್ಯವಂಶಿ ರೆಡಿಯಾಗಿದ್ದಾರೆ.
ಕೇವಲ 15 ವರ್ಷ ವಯಸ್ಸಿನಲ್ಲೇ ತನ್ನ ಮಿಂಚಿನ ಬ್ಯಾಟಿಂಗ್ನಿಂದ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಐರ್ಲೆಂಡ್ (Ireland) ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಈಗ ಕ್ರಿಕೆಟ್ (Cricket) ಜಗತ್ತಿನಲ್ಲಿರುವ ಹಾಟೆಸ್ಟ್ ಸುದ್ದಿಯೆಂದರೆ, ಯುವ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ (Debut) ಮಾಡುವ ಅವಕಾಶ ಪಡೆಯುತ್ತಾರೆಯೇ ಎಂಬುದು. ಶುಕ್ರವಾರ ಟೀಮ್ ಇಂಡಿಯಾ (Team India) ತನ್ನ ಮೊದಲ ಟಿ20ಐ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಬೆಲ್ಫಾಸ್ಟ್ನಲ್ಲಿ ಆಡಲು ಸಜ್ಜಾಗಿದೆ. ಈ ಪಂದ್ಯದ ಮೂಲಕ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಆಗಲಿದೆ.
ವಿಶ್ವ ಚಾಂಪಿಯನ್ ನಾಯಕ ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ, ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೋಚ್ ಗೌತಮ್ ಗಂಭೀರ್ ಆಡುವ ಹನ್ನೊಂದರ ಆಯ್ಕೆ ಬಗ್ಗೆ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಅವರು ಮೊದಲ ಪಂದ್ಯದಲ್ಲಿ ವೈಭವ್ಗೆ ಅವಕಾಶ ನೀಡುತ್ತಾರೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳಿವೆ.
ಈ ಎಲ್ಲಾ ಊಹಾಪೋಹಗಳ ನಡುವೆ, ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ ಅವರ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ವತಃ ಈ ಪೋಸ್ಟ್ ಅನ್ನು ವೈಭವ್ ಸೂರ್ಯವಂಶಿ ಹಂಚಿಕೊಂಡಿದ್ದು, ಭಾರತದ ಪರ ಪಾದಾರ್ಪಣೆ ಮಾಡುವ ಬಗ್ಗೆ ಕೇವಲ ಎರಡು ಮಾತುಗಳಲ್ಲಿ ಸುಳಿವು ನೀಡಿದ್ದಾರೆ. ಈ ಪೋಸ್ಟ್ ನೋಡಿದ ಕ್ರಿಕೆಟ್ ಅಭಿಮಾನಿಗಳು ವೈಭವ್ ಪಾದರ್ಪಣೆ ಕನ್ಫರ್ಮ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಭಾರತ ಹೊಸ ಟಿ20 ಯುಗದ ಉದಯಕ್ಕೆ ಹತ್ತಿರವಾಗುತ್ತಿದೆ. ಅದರ ಕೇಂದ್ರಬಿಂದು 15 ವರ್ಷದ ವೈಭವ್ ಸೂರ್ಯವಂಶಿ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕಿಂತ ಮೊದಲು, ಸೂರ್ಯವಂಶಿ ಹಂಚಿಕೊಂಡಿರುವ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.
ಈ ಪೋಸ್ಟ್ನಲ್ಲಿ ಅವರು ಕೇವಲ ಎರಡು ಪದಗಳನ್ನು ಬರೆದಿದ್ದಾರೆ. ಹೌದು, ಸೂರ್ಯವಂಶಿ ಬ್ಲೂ ಜೆರ್ಸಿಯಲ್ಲಿರುವ ಫೋಟೋ ಜೊತೆಗೆ “ನ್ಯೂ ಚಾಪ್ಟರ್” ಎಂದು ಬರೆದಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಕ್ರಿಕೆಟ್ ಜಗತ್ತಿನ ಚಿತ್ತ ಕದ್ದಿದೆ.
ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೊದಲೇ ತನ್ನ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಕೇವಲ 14ನೇ ವಯಸ್ಸಿನಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ನಂತರ ಅವರು ಐಪಿಎಲ್ 2026 ರಲ್ಲಿ 778 ರನ್ ಗಳಿಸಿದರು. ಲೀಗ್ ಕೊನೆಯಲ್ಲಿ ಅವರು ಐದು ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರು.
Jun 26, 2026 10:39 AM IST













