ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಬೃಹತ್ ಯಾರ್ಡ್ ನವೀಕರಣ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್ 16, 2026 ರಿಂದ ಆಗಸ್ಟ್ ಮೊದಲ ವಾರದವರೆಗೆ (ಸುಮಾರು 50 ದಿನಗಳು) ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳು ಸಂಪೂರ್ಣ ರದ್ದಾಗಿದ್ದರೆ, ಇನ್ನು ಕೆಲವು ಅರ್ಧ ದಾರಿಯಲ್ಲೇ ತಮ್ಮ ಪ್ರಯಾಣ ಮೊಟಕುಗೊಳಿಸಲಿವೆ! ನಿಮ್ಮ ನೆಚ್ಚಿನ ರೈಲು ರದ್ದಾಗಿದೆಯಾ? ಅಥವಾ ಬೇರೆ ನಿಲ್ದಾಣಕ್ಕೆ ಶಿಫ್ಟ್ ಆಗಿದೆಯಾ? ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆಯಾದರೂ ಭವಿಷ್ಯದಲ್ಲಿ ಇದರಿಂದ ಆಗುವ ಲಾಭಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ಲಾಟ್ಫಾರ್ಮ್ 7ರ ಬೃಹತ್ ವಿಸ್ತರಣೆ: ಪ್ರಸ್ತುತ 460 ಮೀಟರ್ ಇರುವ ಪ್ಲಾಟ್ಫಾರ್ಮ್ ಅನ್ನು 600 ಮೀಟರ್ಗೆ ವಿಸ್ತರಿಸಲಾಗುತ್ತಿದೆ. ಇದರಿಂದ ವಂದೇ ಭಾರತ್ ಸೇರಿದಂತೆ ಉದ್ದುದ್ದದ ಎಕ್ಸ್ಪ್ರೆಸ್ ರೈಲುಗಳು ಸುಲಭವಾಗಿ ನಿಲ್ಲಬಹುದು.
ಒಂದೇ ಬಾರಿಗೆ ಎರಡು ರೈಲುಗಳ ಎಂಟ್ರಿ-ಎಕ್ಸಿಟ್: ಲೈನ್-1 ರಲ್ಲಿ ರೈಲು ಒಳಬರುತ್ತಿರುವಾಗಲೇ, ಲೈನ್-2 ರಿಂದ ಮತ್ತೊಂದು ರೈಲು ನಿರ್ಗಮಿಸಲು ಅವಕಾಶ ಸಿಗಲಿದೆ. ಟ್ರಾಫಿಕ್ ಜಾಮ್ಗೆ ಬ್ರೇಕ್ ಬೀಳಲಿದೆ!
ಹೈಟೆಕ್ ಸುರಕ್ಷತೆ: ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಹಾಗೂ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆಯಿಂದ ಅಪಘಾತಗಳ ಸಾಧ್ಯತೆ ಶೂನ್ಯಕ್ಕಿಳಿಯಲಿದೆ.
ಜೂನ್ 16 ರಿಂದ ಆಗಸ್ಟ್ 6ರ ವರೆಗಿನ ವಿವಿಧ ದಿನಾಂಕಗಳಲ್ಲಿ ಈ ಕೆಳಗಿನ ಪ್ರಮುಖ ರೈಲುಗಳು ಹಳಿಯೇರುವುದಿಲ್ಲ:
* ಮೈಸೂರು – ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269/206270)
* ಅರಸೀಕೆರೆ – ಮೈಸೂರು ಪ್ಯಾಸೆಂಜರ್ (56265/56266)
* ಕೆಎಸ್ಆರ್ ಬೆಂಗಳೂರು – ಚನ್ನಪಟ್ಟಣ ಮೆಮು (66535/66536)
* ಅಶೋಕಪುರಂ – ಕೆಎಸ್ಆರ್ ಬೆಂಗಳೂರು ಮೆಮು ಮತ್ತು ಎಕ್ಸ್ಪ್ರೆಸ್ ರೈಲುಗಳು
* ತುಮಕೂರು, ವೈಟ್ಫೀಲ್ಡ್, ಬಂಗಾರಪೇಟೆ ಕಡೆಗೆ ಸಂಚರಿಸುವ ಹಲವು ಮೆಮು (MEMU) ರೈಲುಗಳು ಸಂಪೂರ್ಣ ರದ್ದು.
(ಇದರ ಜೊತೆಗೆ ಕಾಕಿನಾಡ, ಚೆನ್ನೈ ಸೆಂಟ್ರಲ್, ಬೀದರ್, ವಿಜಯಪುರ, ಮಂಗಳೂರು, ಶಿವಮೊಗ್ಗ ಕಡೆಗೆ ಹೋಗುವ ಕೆಲವು ಎಕ್ಸ್ಪ್ರೆಸ್ ರೈಲುಗಳು ನಿರ್ದಿಷ್ಟ ದಿನಗಳಂದು ಸಂಪೂರ್ಣ ರದ್ದಾಗಿವೆ)
ಕೆಎಸ್ಆರ್ ಮುಖ್ಯ ನಿಲ್ದಾಣಕ್ಕೆ ಬರುವ ಹಲವು ರೈಲುಗಳನ್ನು ಹೊರವಲಯದ ನಿಲ್ದಾಣಗಳಲ್ಲೇ (ಯಶವಂತಪುರ, ಕೆಂಗೇರಿ, ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬೈಯಪ್ಪನಹಳ್ಳಿ) ನಿಲ್ಲಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಮೈಸೂರು ಪ್ರಯಾಣಿಕರಿಗೆ ಬಿಸಿ: ಮೈಸೂರಿನಿಂದ ಬರುವ ಬಹುತೇಕ ಎಕ್ಸ್ಪ್ರೆಸ್ ಮತ್ತು ಮೆಮು ರೈಲುಗಳು ಕೆಂಗೇರಿ ನಿಲ್ದಾಣದಲ್ಲೇ ತಮ್ಮ ಪ್ರಯಾಣ ಅಂತ್ಯಗೊಳಿಸಲಿವೆ. ಅಲ್ಲಿಂದಲೇ ವಾಪಸ್ ಮೈಸೂರಿನತ್ತ ಹೊರಡಲಿವೆ.
ಹುಬ್ಬಳ್ಳಿ-ಧಾರವಾಡ ಕಡೆಗೆ: ಸಿದ್ದಗಂಗಾ ಎಕ್ಸ್ಪ್ರೆಸ್ ಅರಸೀಕೆರೆಯಿಂದ, ಹುಬ್ಬಳ್ಳಿ ಜನಶತಾಬ್ದಿ, ಬೆಳಗಾವಿ ವಂದೇ ಭಾರತ್ ಮತ್ತು ಕಾರವಾರ ಎಕ್ಸ್ಪ್ರೆಸ್ ರೈಲುಗಳು ಯಶವಂತಪುರದಿಂದ ಕಾರ್ಯಾಚರಣೆ ಮಾಡಲಿವೆ.
ಚೆನ್ನೈ, ಎರ್ನಾಕುಲಂ ಕಡೆಗೆ: ವಂದೇ ಭಾರತ್, ಶತಾಬ್ದಿ, ಡಬಲ್ ಡೆಕ್ಕರ್, ಬೃಂದಾವನ್ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳು ಕೆಎಸ್ಆರ್ ಬದಲು ಬೆಂಗಳೂರು ದಂಡು (Cantonment), ಕೃಷ್ಣರಾಜಪುರಂ (KR Puram) ಅಥವಾ ಬೈಯಪ್ಪನಹಳ್ಳಿಯಿಂದ ಸಂಚರಿಸಲಿವೆ.
ಉತ್ತರ ಭಾರತದ ರೈಲುಗಳು: ನವದೆಹಲಿ ಕರ್ನಾಟಕ ಎಕ್ಸ್ಪ್ರೆಸ್, ಮುಂಬೈ ಸಿಎಸ್ಎಂಟಿ ಸೇರಿದಂತೆ ಹಲವು ರೈಲುಗಳು ಯಲಹಂಕ, ಬೈಯಪ್ಪನಹಳ್ಳಿಗೆ ಶಿಫ್ಟ್ ಆಗಿವೆ.
ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ ದೊಡ್ಡ ತಲೆನೋವು
ಇದು ದೈನಂದಿನ ಪ್ರಯಾಣಿಕರಿಗೆ, ಅದರಲ್ಲೂ ಮೈಸೂರು-ಬೆಂಗಳೂರು ನಡುವೆ ಓಡಾಡುವ ಉದ್ಯೋಗಿಗಳಿಗೆ ದೊಡ್ಡ ತಲೆನೋವು ತರುವುದು ಖಂಡಿತ. ಆದರೆ, 50 ದಿನಗಳ ಈ “ತಾತ್ಕಾಲಿಕ ಕಷ್ಟ”ವನ್ನು ಸಹಿಸಿಕೊಂಡರೆ, ಮುಂದಿನ ದಿನಗಳಲ್ಲಿ ಟ್ರೈನ್ ಲೇಟ್, ಔಟರ್ನಲ್ಲಿ ರೈಲು ನಿಲ್ಲಿಸುವುದು ಮುಂತಾದ ಕಿರಿಕಿರಿಗಳಿಂದ ಶಾಶ್ವತ ಮುಕ್ತಿ ಸಿಗಲಿದೆ. ಮನೆಯಿಂದ ಹೊರಡುವ ಮುನ್ನ, ನಿಮ್ಮ ರೈಲಿನ ನಿಖರ ಸ್ಥಿತಿ ಮತ್ತು ಅದು ಹೊರಡುವ ನಿಲ್ದಾಣದ ಬಗ್ಗೆ ಐಆರ್ಸಿಟಿಸಿ (IRCTC) ವೆಬ್ಸೈಟ್ ಅಥವಾ NTES ಆ್ಯಪ್ನಲ್ಲಿ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಿ.












