Last Updated:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ.
ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. 2026ರ T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು. T20ಗಳಲ್ಲಿ ಅವರ ಪ್ರದರ್ಶನವನ್ನು ಗಮನಿಸಿದರೆ, ಅವರು ಏಕದಿನ ತಂಡದಲ್ಲಿಯೂ ಸ್ಥಾನ ಪಡೆಯಬಹುದು ಎಂಬ ವರದಿಗಳು ಇದ್ದವು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಪಂತ್ ಸ್ಥಾನಕ್ಕೆ ಬದಲಿಯಾಗಿ ಇಶಾನ್ ಕಿಶನ್ ಅವರನ್ನ ಬ್ಯಾಕ್‌ಅಪ್ ಓಪನರ್ ಮತ್ತು ಬ್ಯಾಕ್‌ಅಪ್ ವಿಕೆಟ್‌ಕೀಪರ್ ಆಗಿ ODI ತಂಡಕ್ಕೆ ಆಯ್ಕೆಮಾಡಿದೆ. ಇದಲ್ಲದೆ ತಂಡದಲ್ಲಿ ಹಲವಾರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಇಶಾನ್ ಕಿಶನ್ ಮಾತ್ರವಲ್ಲದೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಸರಣಿಗೆ ಪಾಂಡ್ಯ ಅವರನ್ನು ಆಯ್ಕೆ ಮಾಡಿರಲಿಲ್ಲ. ಆ ಸಮಯದಲ್ಲಿ, ಆಯ್ಕೆದಾರರು ಅವರು 10 ಓವರ್‌ಗಳ ಪೂರ್ಣ ಕೋಟಾ ಬೌಲಿಂಗ್ ಮಾಡುವಷ್ಟು ಫಿಟ್ ಆಗಿದ್ದಾರೆ ಎಂದು ನಂಬಿರಲಿಲ್ಲ. ಆದಾಗ್ಯೂ, 2026 ರ ಐಪಿಎಲ್ ಋತುವಿನಲ್ಲಿಯೂ ಅವರು ಗಾಯದಿಂದ ಬಳಲುತ್ತಿದ್ದಾರೆ. ಗಾಯದಿಂದಾಗಿ ಅವರು ಕಳೆದ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಆದರೂ ಅವರಿಗೆ ಏಕದಿನ ತಂಡದಲ್ಲಿ ಅವಕಾಶ ನೀಡಲಾಗಿದೆ.
ಇನ್ನೂ ಇಶಾನ್ ಕಿಶನ್ 2023ರ ಏಕದಿನ ವಿಶ್ವಕಪ್ ಬಳಿಕ ಏಕದಿನ ತಂಡದಿಂದ ಹೊರಬಿದ್ದಿದ್ದರು. ಇದೀಗ 3 ವರ್ಷಗಳ ಬಳಿಕ ಮತ್ತೆ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇಶಾನ್ ಕಿಶನ್ ಎರಡೂ ರೂಪದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ರಾಹುಲ್ಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಹಾಗೂ ಬ್ಯಾಕ್ ಅಪ್ ಓಪನರ್ ಆಗಿ ಆಡಲಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್ ಮತ್ತು ಗಾಯಕ್ವಾಡ್ರನ್ನ ಮತ್ತೆ ಏಕದಿನ ತಂಡದಿಂದ ಕಡೆಗಣಿಸಲಾಗಿದೆ.
ಐಪಿಎಲ್ ಮುಗಿಯುತ್ತಿದ್ದಂತೆ ನಡೆಯುತ್ತಿರುವ ಈ ಸರಣಿಗೆ ಟೀಮ್ ಇಂಡಿಯಾ ಟಾಪ್ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾರನ್ನ ಆಯ್ಕೆ ಮಾಡಿಲ್ಲ. ಇವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಿಳಿಸಿದ್ದಾರೆ. ಜಡೇಜಾರನ್ನ ಟೆಸ್ಟ್ಗೆ ಮಾತ್ರವಲ್ಲ, ಏಕದಿನ ತಂಡದಿಂದಲೂ ಕೈಬಿಡಲಾಗಿದೆ.
ಐಪಿಎಲ್‌ನಲ್ಲಿ ಮಿಂಚುತ್ತಿರುವ ಪ್ರಿನ್ಸ್ ಯಾದವ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ಗಮನ ಸೆಳೆದಿರುವ ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಿನ್ಸ್ ಯಾದವ್ 2026 ರ ಐಪಿಎಲ್‌ನಲ್ಲಿ ತಮ್ಮ ಅಸಾಧಾರಣ ಬೌಲಿಂಗ್ ಪ್ರದರ್ಶನದಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅವರು ಪ್ರಸ್ತುತ ಲಖನೌ ಸೂಪರ್ ಜೈಂಟ್ಸ್ ಸದಸ್ಯರಾಗಿದ್ದಾರೆ.
ಏಕದಿನ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಅವರ ಆಯ್ಕೆ ಅವರ ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ. ಇಬ್ಬರೂ ಆಟಗಾರರು ಪ್ರಸ್ತುತ ಗಾಯಗಳಿಂದ ಬಳಲುತ್ತಿದ್ದಾರೆ. ಸರಣಿಗೆ ಮೊದಲು ಅವರು ತಮ್ಮ ಫಿಟ್‌ನೆಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದರೆ ಮಾತ್ರ ಅವರು ಏಕದಿನ ತಂಡವನ್ನು ಸೇರಲು ಸಾಧ್ಯವಾಗುತ್ತದೆ. ಹಾರ್ದಿಕ್ ಪಾಂಡ್ಯ ಕೊನೆಯದಾಗಿ ಮಾರ್ಚ್ 2025 ರಲ್ಲಿ ಏಕದಿನ ಪಂದ್ಯವನ್ನು ಆಡಿದ್ದರು.
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಹರ್ಷ್ ದುಬೆ, ಗುರ್ನೂರ್ ಬ್ರಾರ್













