Last Updated:
ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 81 ರನ್ ಸಿಡಿಸಿ ಭಾರತ ತಂಡ 192 ರನ್ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು.
ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್ಗಳ ಸವಾಲಿನ ಮೊತ್ತ ಕಲೆಹಾಕಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 81 ರನ್ ಸಿಡಿಸಿ ಅಬ್ಬರಿಸಿದರು. ಸ್ಟಾರ್ ಆಟಗಾರರು ವಿಫಲರಾದರೂ, ಜಿಂಬಾಬ್ವೆ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಅವರು ಕೇವಲ 49 ಎಸೆತಗಳಲ್ಲಿ 81 ರನ್ ಚಚ್ಚಿ ತಂಡಕ್ಕೆ ಬೃಹತ್ ಮೊತ್ತಕ್ಕೆ ಅತಿದೊಡ್ಡ ಕೊಡುಗೆ ನೀಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ತಂಡ ಇಂದೂ ಕೂಡ ಕೆಟ್ಟ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಸತತ 3ನೇ ಪಂದ್ಯದಲ್ಲೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇಂದು ಅವರು 4 ಎಸೆತಗಳಲ್ಲಿ 2 ರನ್ಗಳಿಸಿ ಮುಜರಬಾನಿಗೆ ವಿಕೆಟ್ ಒಪ್ಪಿಸಿದರು. ಆದರೆ 15ರ ಪೋರ ಸೂರ್ಯವಂಶಿ ಮಾತ್ರ ತಮ್ಮ ಅಬ್ಬರ ಮುಂದುವರಿಸಿದರು. ಇಶಾನ್ ಕಿಶನ್ ಜೊತೆಗೂಡಿ 2ನೇ ವಿಕೆಟ್ ಜೊತೆಯಾಟದಲ್ಲಿ 75 ಸೇರಿಸಿದರು. ಇಶಾನ್ ಕಿಶನ್ ಇಂದು ಜಿಂಬಾಬ್ವೆ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಲು ವಿಫಲರಾದರು. 26 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 29 ರನ್ಗಳಿಸಿದರು.
ನಂತರ ಬಂದ ಶ್ರೇಯಸ್ ಅಯ್ಯರ್ 3ನೇ ವಿಕೆಟ್ಗೆ ವೈಭವ್ ಜೊತೆಗೂಡಿ 50 ರನ್ಗಳ ಜೊತೆಯಾಟ ನೀಡಿದರು. ಅತ್ಯುತ್ತಮವಾಗಿ ಆಡುತ್ತಿದ್ದ ವೈಭವ್ ಸೂರ್ಯವಂಶಿ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ಗಳ ಸಹಿತ 81 ರನ್ಗಳಿಸಿ ಮಾಧೆವೆರೆಗೆ ವಿಕೆಟ್ ಒಪ್ಪಿಸಿದರು. ಇನ್ನೂ 5 ಓವರ್ ಇದ್ದಿದ್ದರಿಂದ ಶತಕ ಸಿಡಿಸಲು ಸಾಕಷ್ಟು ಎಸೆತಗಳಿದ್ದವು. ಆದರೆ ವೈಭವ್ ಆತುರದ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ವೈಭವ್ ನಂತರ ಭಾರತದ ಬ್ಯಾಟಿಂಗ್ ಅಬ್ಬರ ಕುಸಿಯಿತು. ಶ್ರೇಯಸ್ ಅಯ್ಯರ್ 18 ಎಸೆತಗಳಲ್ಲಿ 2 ಬೌಂಡರಿ, ಸಹಿತ 29 ರನ್ಗಳಿಸಿ ಔಟ್ ಆದರು. ತಿಲಕ್ ವರ್ಮಾ 9 ಎಸೆತಗಳಲ್ಲಿ 11 ರನ್ಗಳಿಸಿದರೆ, ರಿಂಕು ಸಿಂಗ್ 14 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 25 ರನ್ಗಳಿಸಿದರು.
ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ 41ಕ್ಕೆ2, ಬ್ಲೆಸ್ಸಿಂಗ್ ಮುಜರಬಾನಿ 33ಕ್ಕೆ1, ಸಿಕಂದರ್ ರಾಜಾ 40ಕ್ಕೆ1, ವೆಸ್ಲೆ ಮಾಧೆವೆರೆ 37ಕ್ಕೆ1 ವಿಕೆಟ್ ಪಡೆದರು.
ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್ (ನಾಯಕ) ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ರವಿ ಬಿಷ್ಣೋಯ್, ಅಶೋಕ್ ಶರ್ಮಾ, ಯಶ್ ಠಾಕೂರ್, ಮಯಾಂಕ್ ಯಾದವ್
ಜಿಂಬಾಬ್ವೆ: ಸಿಕಂದರ್ ರಜಾ (ನಾಯಕ), ಬ್ರಿಯಾನ್ ಬೆನೆಟ್, ಬೆನ್ ಕರನ್, ಡಿಯೋನ್ ಮೈಯರ್ಸ್, ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮೂರಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ














