Last Updated:
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸತತ 6 ಸೋಲುಗಳ ನಂತರ ಮೊದಲ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 50 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಜಿಂಬಾಬ್ವೆ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದ ಮೂಲಕ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸತತ 6 ಸೋಲುಗಳ ನಂತರ ಮೊದಲ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಜಿಂಬಾಬ್ವೆ ತಂಡವನ್ನ ಕೇವಲ 125ಕ್ಕೆ ನಿಯಂತ್ರಿಸಿತ್ತು. ನಂತರ ವೈಭವ್ ಸೂರ್ಯವಂಶಿ ಸಿಡಿಸಿದ ಸಿಡಿಲಬ್ಬರದ ಅರ್ಧಶತಕ ಹಾಗೂ ಇಶಾನ್ ಕಿಶನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ರ ಜವಾಬ್ದಾರಿಯುವ ಬ್ಯಾಟಿಂಗ್ ನೆರವಿನಿಂದ ಕೇವಲ 13.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
126 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 3ನೇ ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. 8 ಎಸೆತಗಳನ್ನೆದುರಿಸಿದ ಅಭಿಷೇಕ್ ಶರ್ಮಾ ಕೇವಲ 1 ರನ್ಗಳಿಸಿ ಔಟ್ ಆದರು. ಆದರೆ ವೈಭವ್ ಸೂರ್ಯವಂಶಿ ಮಾತ್ರ ತಮ್ಮ ಅಬ್ಬರವನ್ನ ಮುಂದುವರಿಸಿದರು. ಇಶಾನ್ ಕಿಶನ್ ಜೊತೆಗೆ 2ನೇ ವಿಕೆಟ್ ಜೊತೆಯಾಟದಲ್ಲಿ 21 ಎಸೆತಗಳಲ್ಲಿ 45 ರನ್ಗಳ ಜೊತೆಯಾಟ ನಡೆಸಿದರು. 7ನೇ ಓವರ್ನ ಮೊದಲ ಎಸೆತದಲ್ಲಿ 2 ರನ್ ಪಡೆಯುವ ಮೂಲಕ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿದ ವೈಭವ್ ನಂತರದ ಎಸೆತದಲ್ಲೇ ಔಟ್ ಆದರು. 19 ಎಸೆತಗಳನ್ನಾಡಿದ 15 ವರ್ಷದ ಆಟಗಾರ ತಲಾ 4 ಬೌಂಡರಿ, ಸಿಕ್ಸರ್ಗಳ ಸಹಿತ 50 ರನ್ಗಳಿಸಿ ಔಟ್ ಆದರು. ಆದರೂ ಟಿ20ಐನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ಜಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಜರಬಾನಿ 26ಕ್ಕೆ2 ವಿಕೆಟ್ ಪಡೆದರೆ, ರಿಚರ್ಡ್ ಎನ್ಗರಾವ 30ಕ್ಕೆ1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಜಿಂಬಾಬ್ವೆ ತಂಡ ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿತ್ತು. 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 125 ರನ್ಗಳಿಸಲಷ್ಟೇ ಶಕ್ತವಾಗಿತ್ತು.
ತವರಿನ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ತಂಡ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿತು. 2 ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ಮಯಾಂಕ್ ಯಾದವ್ ಬ್ರಿಯಾನ್ ಬೆನೆಟ್ ಅವರನ್ನು ಪೆವಿಲಿಯನ್ಗೆ ಗೋಲ್ಡನ್ ಡಕ್ ಮಾಡಿದರು. ನಂತರ ನಾಲ್ಕನೇ ಓವರ್ನಲ್ಲಿ ಬೆನ್ ಕರ್ರನ್ (10) ಪ್ರಿನ್ಸ್ ಯಾದವ್ಗೆ ಬಲಿಯಾದರು. ಅವರು 8 ಎಸೆತಗಳಲ್ಲಿ 10 ರನ್ ಗಳಿಸಿದರು. ನಂತರ 5ನೇ ಓವರ್ನಲ್ಲಿ ಮಯಾಂಕ್ ಯಾದವ್ 14 ಎಸೆತಗಳಲ್ಲಿ 6 ರನ್ ಗಳಿಸಿದ್ದ ಡಿಯಾನ್ ಮೈಯರ್ಸ್ಗೆ ಪೆವಿಲಿಯನ್ಗೆ ದಾರಿ ತೋರಿಸಿದರು. ಶಿವಂ ದುಬೆ ನಾಯಕ ಸಿಕಂದರ್ ರಾಜಾ(4) ಅವರನ್ನು ಔಟ್ ಮಾಡಿದರು, ರಾಜಾ 7 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದರು.
ಜಿಂಬಾಬ್ವೆ 32 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಹಂತರದಲ್ಲಿ 100ರೊಳಗೆ ಆಲೌಟ್ ಆಗುವ ಭೀತಿ ಎದುರಿಸಿತ್ತು. ಆದರೆ ರಯಾನ್ ಬರ್ಲ್ ಹಾಗೂ ಮಧೆವೆರೆ 5ನೇ ವಿಕೆಟ್ ಜೊತೆಯಾಟದಲ್ಲಿ 32 ರನ್ ಸೇರಿಸಿದರು. ಬರ್ಲ್ 35 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 26 ರನ್ ಸಿಡಿಸಿ ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು.
ನಂತರ ಒಂದಾದ ಮಧೆವೆರೆ ಹಾಗೂ ಮರುಮಣಿ 6ನೇ ವಿಕೆಟ್ ಜೊತೆಯಾಟದಲ್ಲಿ 58 ರನ್ಗಳಿಸಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಮಧೆವೆರೆ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ಗಳಿಸಿ 20ನೇ ಓವರರ್ನಲ್ಲಿ ಔಟ್ ಆದರು. ಮರುಮಣಿ 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೆಯ 27 ರನ್ಗಳಿಸಿದರು. ಒಟ್ಟಾರೆ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 125 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು.














