IND vs ENG: ಭಾರತ ತಂಡಕ್ಕೆ ಭಾರೀ ಮುಖಭಂಗ! ಟಿ20 ಇತಿಹಾಸದಲ್ಲೇ ಟೀಮ್​ ಇಂಡಿಯಾಗೆ ಅತಿದೊಡ್ಡ ಸೋಲುಣಿಸಿದ ಇಂಗ್ಲೆಂಡ್ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್ ಮೈದಾನದಲ್ಲಿ ಮಂಗಳವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 125 ರನ್‌ಗಳ ಭಾರಿ ಅಂತರದ ಹೀನಾಯ ಸೋಲು ಕಂಡಿದೆ.

ಭಾರತ ತಂಡ
ಭಾರತ ತಂಡ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವನ್ನು ಎದುರಿಸಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್ ಮೈದಾನದಲ್ಲಿ ಮಂಗಳವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 125 ರನ್‌ಗಳ ಭಾರಿ ಅಂತರದ ಹೀನಾಯ ಸೋಲು ಕಂಡಿದೆ. ಈ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್‌ಗಳ ಲೆಕ್ಕಾಚಾರದಲ್ಲಿ ಭಾರತ ತನ್ನ 20 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮುಖಭಂಗಕ್ಕೆ ಒಳಗಾಗಿದೆ. ಮೊದಲ ಬಾರಿಗೆ 100ಕ್ಕೂ ಹೆಚ್ಚು ರನ್ಗಳ ಅಂತರದಲ್ಲಿ ಸೋಲು ಕಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅಲ್ಲದೆ ಭಾರತ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸತತ 5 ಪಂದ್ಯಗಳಲ್ಲಿ ಗೆಲುವು ರಹಿತವಾಗಿದೆ.

ಉತ್ತಮ ಆರಂಭ ಪಡೆದ ಇಂಗ್ಲೆಂಡ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ಓವರ್​​​ನಲ್ಲಿ ಮೇಡನ್​ ನೀಡಿದರೂ, ನಂತರ ಚೇತರಿಸಿಕೊಂಡು ಆರಂಭಿಕ ಬ್ಯಾಟರ್​ಗಳಾದ ಬಟ್ಲರ್ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್​ಗೆ 43 ರನ್ ಸೇರಿಸಿತು. ಬಟ್ಲರ್ 21 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿ 36 ರನ್​ಗಳಿಸಿ ಪ್ರಿನ್ಸ್ ಯಾದವ್ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಜವಾಬ್ದಾರಿ ವಹಿಸಿಕೊಂಡ ಫಿಲ್ ಸಾಲ್ಟ್​ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 44 ಎಸೆತಗಳಲ್ಲಿ 7 ಫೋರ್ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 70 ರನ್ ಸಿಡಿಸಿದ ಸಾಲ್ಟ್, ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಮಧ್ಯಮ ಕ್ರಮಾಂಕದಿಂದಲೂ ಉತ್ತಮ ಬೆಂಬಲ

ಅಲ್ಲದೆ ಹ್ಯಾರಿ ಬ್ರೂಕ್ (16) ಜೊತೆಗೆ 28, ಜೇಕಬ್ ಬೆಥೆಲ್(13) ಜೊತೆಗೆ 40 ರನ್ಸ್ ಹಾಗೂ ಸ್ಯಾಮ್​ ಕರನ್​ ಜೊತೆಗೆ 47 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ಸಾಲ್ಟ್ ನಂತರ ಅಬ್ಬರಿಸಿದ ಸ್ಯಾಮ್ ಕರನ್ ಕೇವಲ 24 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ ಅಜೇಯ 41 ರನ್​ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಲು ನೆರವಾದರು. ವಿಲ್ಸ್ ಜಾಕ್ಸ್ 7 ಎಸೆತಗಳಲ್ಲಿ 14 ರನ್​ ಸಿಡಿಸಿದರು. ಇದರ ಪರಿಣಾಮವಾಗಿ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಭಾರತದ ಪರ ಹರ್ಷಿತ್ ರಾಣಾ ಹಾಗೂ ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

ಆಘಾತಕಾರಿ ಆರಂಭ

ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಿಂದಲೇ ವಿಕೆಟ್ ಪರೇಡ್ ನಡೆಸಿತು. ಯುವ ಜೋಡಿ ಅಭಿಷೇಕ್ ಶರ್ಮಾ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಇನ್ನಿಂಗ್ಸ್​​ಗಳನ್ನ ಸ್ಫೋಟಕವಾಗಿ ಆರಂಭಿಸಿದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಅಭಿಷೇಕ್ 7 ಎಸೆತಗಳಲ್ಲಿ 10 ರನ್​ಗಳಿಸಿ ಜೋಶ್ ಟಂಗ್​ಗೆ ವಿಕೆಟ್ ಒಪ್ಪಿಸಿದರೆ, ಜೋಫ್ರಾ ಆರ್ಚರ್ ಬೌಲಿಂಗ್​​ನಲ್ಲಿ ವೈಭವ್​ 5 ಎಸೆತಗಳಲ್ಲಿ 2 ಸಿಕ್ಸರ್ ಸೇರಿದಂತೆ 13 ರನ್​ಗಳಿಸಿ ಔಟ್ ಆದರು. ಇವರಿಬ್ಬರ ನಂತರ ಬಂದ ಇಶಾನ್ ಕಿಶನ್​ 9 ಎಸೆತಗಳಲ್ಲಿ 13, ನಾಯಕ ಶ್ರೇಯಸ್​ ಅಯ್ಯರ್ 4 ಎಸೆತಗಳಲ್ಲಿ 5, ಅಕ್ಷರ್ ಪಟೇಲ್ 4 ಎಸೆತಗಳಲ್ಲಿ 10 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತ ತಂಡ ಕೇವಲ 5 ಓವರ್​ಗಳಲ್ಲಿ 52 ರನ್ ಗಳಿಸಿ ತನ್ನ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಪವರ್​ ಪ್ಲೇನಲ್ಲೇ 5 ವಿಕೆಟ್ ಲಾಸ್

ಪವರ್​ ಪ್ಲೇ ಮುಗಿದ ಬಳಿಕವೂ ಟೀಮ್ ಇಂಡಿಯಾ ಚೇತರಿಸಿಕೊಳ್ಳಲಿಲ್ಲ. ತಿಲಕ್ ವರ್ಮಾ 11 ಎಸೆತಗಳಲ್ಲಿ 3, ಶಿವಂ ದುಬೆ 4 ಎಸೆತಗಳಲ್ಲಿ 2, ಹರ್ಷಿತ್ ರಾಣಾ 13 ಎಸೆತಗಳಲ್ಲಿ 9, ಅರ್ಷದೀಪ್ ಸಿಂಗ್ 4 ಎಸೆತಗಳಲ್ಲಿ 4 ಹಾಗೂ ವರುನ್ ಚಕ್ರವರ್ತಿ 7 ಎಸೆತಗಳಲ್ಲಿ 5 ರನ್​ಗಳಿಸಿ ನಿರ್ಗಮಿಸಿದರು. ಇಡೀ ಇನಿಂಗ್ಸ್‌ನಲ್ಲಿ ಕೇವಲ ನಾಲ್ಕು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ಮುಟ್ಟಲು ಶಕ್ತರಾಗಿದ್ದರು.

76ಕ್ಕೆ ಆಲೌಟ್

ಅಂತಿಮವಾಗಿ ಭಾರತ ತಂಡ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಘಾತಕ ಬೌಲಿಂಗ್ ಪ್ರದರ್ಶಿಸಿದ ಜೋಶ್ ಟಂಗ್ 28 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಜೋಫ್ರಾ ಆರ್ಚರ್ 29 ರನ್‌ಗಳಿಗೆ 3 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆದಿಲ್ ರಶೀದ್ 2 ಹಾಗೂ ವಿಲ್ ಜಾಕ್ಸ್ 1 ವಿಕೆಟ್ ಪಡೆದರು.

ದಾಖಲೆಯ ಅಂತರದ ಸೋಲು

ಭಾರತ 125 ರನ್​ಗಳ ಅಂತರದಿಂದ ಸೋಲುವ ಮೂಲಕ ಟಿ20 ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಂತರದಿಂದ ಸೋಲು ಕಂಡಿತು. ಈ ಹಿಂದೆ 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ಅನುಭವಿಸಿದ್ದ 80 ರನ್‌ಗಳ ಸೋಲು ಭಾರತದ ಅತ್ಯಂತ ದೊಡ್ಡ ಟಿ20 ಸೋಲಾಗಿತ್ತು. ಈಗ ಇಂಗ್ಲೆಂಡ್ ವಿರುದ್ಧದ 125 ರನ್‌ಗಳ ಸೋಲು ಆ ಕಹಿ ದಾಖಲೆಯನ್ನು ಅಳಿಸಿಹಾಕಿದೆ. ಅಲ್ಲದೆ ಭಾರತ ತಂಡದ ಎರಡನೇ ಕನಿಷ್ಠ ಮೊತ್ತ ಇದಾಗಿದೆ. 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್​​ನಲ್ಲಿ 74ಕ್ಕೆ ಆಲೌಟ್ ಆಗಿದ್ದು, ಈ ಹಿಂದಿನ ಕನಿಷ್ಠ ಮೊತ್ತವಾಗಿತ್ತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed