Last Updated:
ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಅನುಭವಿ ರಾಹುಲ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.
ಭಾರತ-ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ (ODI Series) ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಬದಲಾವಣೆ ಮಾಡಿಕೊಂಡಿದೆ. ಹಿರಿಯ ವಿಕೆಟ್ ಕೀಪರ್ ಕೆಎಲ್ ರಾಹುಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಇಶಾನ್ ಕಿಶನ್ ತಂಡಕ್ಕೆ ಸೇರ್ಪಡೆಯಾಗಿದ್ದು, ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.
ಟಾಸ್ ನಂತರ ಮಾತನಾಡಿದ ನಾಯಕ ಶುಭ್ಮನ್ ಗಿಲ್, ಕೆಎಲ್ ರಾಹುಲ್ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದರು. “ನಾವು ಟಾಸ್ ಗೆದ್ದರೆ, ನಾವು ಮೊದಲು ಬೌಲಿಂಗ್ ಮಾಡಲು ಬಯಸುತ್ತಿದ್ದೆವು. ಕೊನೆಯ ಪಂದ್ಯದಲ್ಲಿ, ನಾವು ಸಾಮೂಹಿಕ ಪ್ರದರ್ಶನವನ್ನು ನೀಡಿದ್ದೇವೆ. ಇಂದು ಇದೇ ರೀತಿಯ ಪ್ರದರ್ಶನವನ್ನು ನೀಡಲು ನಾನು ಆಶಿಸುತ್ತೇನೆ.
ಕಳೆದ ಪಂದ್ಯದಲ್ಲಿ ನಾವು ಪವರ್ ಪ್ಲೇನಲ್ಲಿ ಮೊದಲ ಆರೇಳು ಓವರ್ಗಳನ್ನ ಅತ್ಯುತ್ತಮವಾಗಿ ಎಸೆದಿದ್ದೆವು. ಆದರೆ ನಂತರ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ನಮ್ಮ ಮೇಲೆ ಒತ್ತಡ ಹೇರಿದರು. ಆದರೆ ನಮ್ಮ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ಕಮ್‌ಬ್ಯಾಕ್ ಮಾಡಿದ ರೀತಿ, ವಿಕೆಟ್ ಪಡೆದ ರೀತಿ ಅದ್ಭುತವಾಗಿತ್ತು. ನಾನು ಈ ಹಿಂದೆ ಇಲ್ಲಿ ಆಡಿದ್ದೇನೆ. ನನಗೆ ಒಳ್ಳೆಯ ನೆನಪುಗಳಿವೆ. ನಾವು ನಮ್ಮ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದೇವೆ. ಕೆಎಲ್ ರಾಹುಲ್ ಅನಾರೋಗ್ಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಇಶಾನ್ ಕಿಶನ್ ಆಡುತ್ತಿದ್ದಾರೆ’ ಎಂದು ಶುಭಮನ್ ಗಿಲ್ ಹೇಳಿದ್ದಾರೆ.
ಮತ್ತೊಂದೆಡೆ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರು ಪಿಚ್ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. “ಪಿಚ್‌ನಲ್ಲಿ ಸ್ವಲ್ಪ ಹುಲ್ಲು ಇದೆ. ಆದ್ದರಿಂದ ಚೆಂಡು ಆರಂಭದಲ್ಲಿ ಸೀಮ್ ಮತ್ತು ಸ್ವಿಂಗ್ ಆಗುತ್ತದೆ ಎಂದು ಆಶಿಸುತ್ತೇವೆ. ಕಳೆದ ಪಂದ್ಯವನ್ನು ಸೋತ ನಂತರ ನಾವು ನಮ್ಮ ಯೋಜನೆಗಳನ್ನು ಇನ್ನಷ್ಟು ಉತ್ತಮವಾಗಿ ಕಾರ್ಯಗತಗೊಳಿಸಲು ಬಯಸುತ್ತೇವೆ. ಯಾವುದೇ ಪಂದ್ಯದಲ್ಲಿ ನಾವು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕಳೆದ ಪಂದ್ಯದಲ್ಲೂ ನಾವು ಕಠಿಣ ಹೋರಾಟ ನೀಡಿದ್ದೆವು. ಇಂದಿನ ಪಂದ್ಯದಲ್ಲಿ ನಾವು ಎರಡು ಬದಲಾವಣೆ ಮಾಡಿಕೊಂಡಿದ್ದೇವೆ. ಜೋಸ್ ಟಂಗ್ ಡಾಸೆನ್ ಬದಲಿಗೆ ಗಸ್ ಅಟ್ಕಿನ್ಸನ್ ಹಾಗೂ ಸಾದಿಕ್ ಮಹ್ಮೂದ್ ತಂಡಕ್ಕೆ ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.
ಭಾರತ-ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್
ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ವಿಲ್ ಜಾಕ್ಸ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.














