Last Updated:
ಈ ತ್ರಿಕೋನ ಸರಣಿಯ ಭಾಗವಾಗಿ, ಸೋಮವಾರದ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ಎದುರಿಸುತ್ತಿದೆ. ದಂಬುಲ್ಲಾದಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಗಿದೆ. ಆದರೆ ಭಾರತ ತಂಡಕ್ಕೆ 10 ರನ್ ದಂಡ ವಿಧಿಸಲಾಗಿದೆ.
ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ನಡುವಿನ ತ್ರಿಕೋನ ಸರಣಿಯ ಭಾಗವಾಗಿ, ಸೋಮವಾರದ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ಎದುರಿಸುತ್ತಿದೆ. ದಂಬುಲ್ಲಾದಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಗಿದೆ. ಆರಂಭಿಕ ಆಟಗಾರರಾದ ಪ್ರಭ್‌ಸಿಮ್ರನ್ ಸಿಂಗ್ (11) ಮತ್ತು ವೈಭವ್ ಸೂರ್ಯವಂಶಿ (21) ದೊಡ್ಡ ಮೊತ್ತ ದಾಖಲಿಸಲು ವಿಫಲರಾದರೆ, ರುತುರಾಜ್ ಗಾಯಕ್ವಾಡ್ 37 ರನ್ ಗಳಿಸಿದರು ಮತ್ತು ನಾಯಕ ತಿಲಕ್ ವರ್ಮಾ 23 ರನ್ ಗಳಿಸಿ ನಿರಾಶೆ ಮೂಡಿಸಿದರು. ಆದರೆ ಆಲ್‌ರೌಂಡರ್‌ಗಳಾದ ಸೂರ್ಯಾಂಶ್ ಶೆಡ್ಗೆ (72) ಮತ್ತು ವಿಪ್ರಜ್ ನಿಗಮ್ (51) ಅರ್ಧಶತಕಗಳಿಸಿ ಭಾರತ ಗೌರವಾನ್ವಿತ ಮೊತ್ತವನ್ನು ಗಳಿಸಲು ನೆರವಾದರು.
ಬಹಳ ಕಷ್ಟಪಟ್ಟು 265 ರನ್ಗಳಿಸಿದ್ದ ಭಾರತ ತಂಡಕ್ಕೆ ಅಂಪೈರ್ಸ್ ಭಾರಿ ಶಾಕ್ ನೀಡಿದ್ದಾರೆ. ಆಲ್‌ರೌಂಡರ್ ವಿಪ್ರಜ್ ಮಾಡಿದ ತಪ್ಪಿಗೆ ಭಾರತ ಭಾರೀ ಬೆಲೆ ತೆರುವಂತಾಯಿತು. ಭಾರತ ‘ಎ’ ಇನ್ನಿಂಗ್ಸ್‌ನಲ್ಲಿ, ವಿಪ್ರಜ್ 35 ಮತ್ತು 37 ನೇ ಓವರ್‌ಗಳಲ್ಲಿ ಸಿಂಗಲ್ ಪಡೆಯಲು ಪ್ರಯತ್ನಿಸುವಾಗ ಕ್ರೀಸ್ ಮಧ್ಯದಲ್ಲಿ ಓಡಿದರು. ಎಂಸಿಸಿ ಕಾನೂನು 41.14 ರ ಪ್ರಕಾರ, ಒಬ್ಬ ಆಟಗಾರನು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಪಿಚ್‌ನ ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸಿ ಹಾನಿ ಉಂಟುಮಾಡಿದರೆ, ಅಂಪೈರ್ ಮೊದಲು ಬ್ಯಾಟರ್ಗೆ ಎಚ್ಚರಿಕೆ ನೀಡುತ್ತಾರೆ.
ಅದೇ ದೋಷ ಪುನರಾವರ್ತನೆಯಾದರೆ, ಬ್ಯಾಟಿಂಗ್ ತಂಡದ ಸ್ಕೋರ್‌ಗೆ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ವಿಪ್ರಜ್ ಎಚ್ಚರಿಕೆ ನಂತರವೂ ಅದೇ ತಪ್ಪನ್ನ ಪುನರಾವರ್ತಿಸಿದರು. ಇದಕ್ಕೂ ಮೊದಲು ಅನುಕುಲ್ ರಾಯ್ ಈ ಹಿಂದೆ ಇದೇ ರೀತಿಯ ತಪ್ಪನ್ನು ಮಾಡಿದ್ದರು. ಆದರೆ ಕೇವಲ ಎಚ್ಚರಿಕೆ ನೀಡಲಾಗಿತ್ತು. ಆದರೂ, ವಿಪ್ರಜ್ ಎರಡು ಬಾರಿ ಪಿಚ್‌ನ ಮಧ್ಯಕ್ಕೆ ಬಂದ ಕಾರಣ ಎರಡೂ ತಪ್ಪು ಸೇರಿ ಭಾರತಕ್ಕೆ ಒಟ್ಟು ಹತ್ತು ರನ್‌ಗಳ ದಂಡ ವಿಧಿಸಲಾಯಿತು.
ವಿಪ್ರಜ್ ತಪ್ಪಿನಿಂದಾಗಿ ಶ್ರೀಲಂಕಾ ತನ್ನ ಇನ್ನಿಂಗ್ಸ್ ಆರಂಭಿಸುವ ಮುನ್ನವೇ 10/0 ಸ್ಕೋರ್‌ನೊಂದಿಗೆ ಪ್ರಾರಂಭಿಸಿತು. ಇದರರ್ಥ ವಿಪ್ರಜ್ ಅವರ ತಪ್ಪಿನಿಂದಾಗಿ ಎದುರಾಳಿ ತಂಡವು ಒಂದೇ ಒಂದು ಎಸೆತವನ್ನ ಎದುರಿಸದೇ ಹತ್ತು ರನ್‌ಗಳನ್ನು ಗಳಿಸಿತು. ಫೈನಲ್‌ಗೆ ಸ್ಪರ್ಧಿಸಲು ಭಾರತ ಗೆಲ್ಲಲೇಬೇಕಾದ ಪಂದ್ಯದಲ್ಲಿ ಈ ಆಲ್‌ರೌಂಡರ್ ಮಾಡಿದ ತಪ್ಪೇ ಭಾರತಕ್ಕೆ ಮುಳುವಾಗಲಿದಿಯಾ ಎಂದು ಕಾದುನೋಡಬೇಕಿದೆ.
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ತಂಡ ಇದುವರೆಗೆ ಎರಡು ಪಂದ್ಯಗಳನ್ನು ಆಡಿದೆ. ತಿಲಕ್ ವರ್ಮಾ ನೇತೃತ್ವದ ತಂಡವು ಮೊದಲು ಆತಿಥೇಯ ತಂಡ ಶ್ರೀಲಂಕಾವನ್ನು ಎದುರಿಸಿತು ಮತ್ತು ಎಂಟು ರನ್‌ಗಳ ಸಣ್ಣ ಗೆಲುವಿನೊಂದಿಗೆ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಫ್ಘಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ, ಭಾರತ ತಂಡವು 349 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿದರೂ ಸೋಲನ್ನು ಅನುಭವಿಸಿತು. ಮಳೆಯಿಂದ ಪದೇ ಪದೇ ಅಡ್ಡಿಪಡಿಸಿದ ಪಂದ್ಯದಲ್ಲಿ, ಅಫ್ಘಾನಿಸ್ತಾನವು ಡಕ್‌ವರ್ತ್-ಲೂಯಿಸ್ ವಿಧಾನದಡಿಯಲ್ಲಿ ನಾಲ್ಕು ರನ್‌ಗಳ ಅಲ್ಪ ಅಂತರದಿಂದ ಜಯ ಸಾಧಿಸಿತು.
ಭಾರತವನ್ನ ಮಣಿಸಿದ್ದ ಅಫ್ಘಾನಿಸ್ತಾನ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತ್ತು. ಆದರೆ ಶ್ರೀಲಂಕಾ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಅಗ್ರ ಸ್ಥಾನವನ್ನು ಪಡೆದ ನಂತರ, ಭಾರತ ಎರಡನೇ ಸ್ಥಾನದಲ್ಲಿ ಉಳಿದಿದೆ. ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆದ್ದರೆ ಫೈನಲ್ ಬಹುತೇಕ ಸ್ಥಾನ ಖಚಿತವಾಗಲಿದೆ. ಮುಂದಿನ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನದ ವಿರುದ್ಧ ದೊಡ್ಡ ಅಂತರದಿಂದ ಗೆದ್ದು, ನಂತರ ಶ್ರೀಲಂಕಾ ಅಫ್ಘಾನ್ ತಂಡವನ್ನ ಸೋಲಿಸಲಿ ಎಂದು ಪ್ರಾರ್ಥಿಸುವಂತಾಗಲಿದೆ.













