Last Updated:
ಬೆಂಗಳೂರು ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಕೃತಕ ಹೃದಯ ಪಂಪ್ ಬಳಸಿ ಮೂವರು ಹದಿಹರೆಯದ ರೋಗಿಗಳಿಗೆ ಹೃದಯ ಕಸಿ ಯಶಸ್ವಿ, ವೈದ್ಯರು ಇದನ್ನು ವೈದ್ಯಕೀಯ ಅದ್ಭುತವೆಂದಿದ್ದಾರೆ
ಬೆಂಗಳೂರು: ಸಾವಿನೊಂದಿಗೆ ಹೋರಾಡುತ್ತಿದ್ದ ಮೂವರು ಹದಿಹರೆಯದ ಯುವಕರು ಇಂದು ಮತ್ತೆ ನಗುನಗುತ್ತಾ ಮನೆಗೆ ಮರಳಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು ಬೆಂಗಳೂರಿನ (Bengaluru) ಖ್ಯಾತ ನಾರಾಯಣ ಹೆಲ್ತ್ ಆಸ್ಪತ್ರೆಯ (Narayana Health Hospital) ವೈದ್ಯರು (Doctor) ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಅಕ್ಷರಶಃ ಸಾವಿನ ದವಡೆಯಿಂದ ಮೂರು ಜೀವಗಳನ್ನು ವಾಪಸ್ ಕರೆತಂದಿದ್ದಾರೆ. ಇದು ಕೇವಲ ಚಿಕಿತ್ಸೆಯಲ್ಲ, ವೈದ್ಯಕೀಯ ಲೋಕದ ಒಂದು ಅದ್ಭುತ ಪವಾಡ (Miracle).
ಈ ಪ್ರಕರಣಗಳಲ್ಲಿ ಒಬ್ಬ ಯುವಕ ಈ ಹಿಂದೆ ಕಿಡ್ನಿ ಕಳೆದುಕೊಂಡು ಕ್ಯಾನ್ಸರ್ ಗೆದ್ದು ಬಂದಿದ್ದ ಧೀರ. ಇನ್ನುಳಿದ ಇಬ್ಬರ ಸ್ಥಿತಿ ಕೂಡ ಶೋಚನೀಯವಾಗಿತ್ತು. ಆದರೆ ನಾರಾಯಣ ಹೆಲ್ತ್‍ನ ಡಾ. ಶಶಿರಾಯ್ ಸುಬ್ರಮಣ್ಯ, ಡಾ. ವರುಣ್ ಶೆಟ್ಟಿ ಮತ್ತು ಡಾ. ರಿಯಾನ್ ಸುಕುಮಾರ್ ಶೆಟ್ಟಿ ಅವರ ನೇತೃತ್ವದ ತಂಡ ಇವರನ್ನು ಬಿಟ್ಟುಕೊಡಲಿಲ್ಲ. ಕೇವಲ 28 ರಿಂದ 45 ದಿನಗಳ ಅವಧಿಯಲ್ಲಿ ಈ ಮೂವರಿಗೂ ಸರಿಹೊಂದುವ ಹೃದಯಗಳು ದೊರೆತಿದ್ದು ಮತ್ತೊಂದು ವಿಶೇಷ.
ಒಂದು ಕಾಲದಲ್ಲಿ ಇಂತಹ ಸಂಕೀರ್ಣ ಚಿಕಿತ್ಸೆಗಳು ಕೇವಲ ವಿದೇಶಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇಂದು ಬೆಂಗಳೂರಿನಲ್ಲೇ ಅತ್ಯಂತ ಕಡಿಮೆ ದರದಲ್ಲಿ ಇಂತಹ ಜೀವ ರಕ್ಷಕ ಚಿಕಿತ್ಸೆಗಳು ದೊರೆಯುತ್ತಿರುವುದು ಹೆಮ್ಮೆಯ ವಿಷಯ. ಈ ಯುವಕರು ಬದುಕುವುದು ಅಸಾಧ್ಯವೆಂಬಂತಿತ್ತು, ಆದರೆ ಇಂದು ಅವರು ನಗುನಗುತ್ತಾ ಮನೆಗೆ ಹೋಗುತ್ತಿದ್ದಾರೆ ಎಂದು ವೈದ್ಯರು ಹೆಮ್ಮೆಯಿಂದ ಹೇಳುತ್ತಾರೆ. ಈ ಸ್ಫೂರ್ತಿದಾಯಕ ಯಶಸ್ಸು ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ.
ಯಾವ ಪ್ರಕರಣಗಳು?
ಹೃದಯದ ತೀವ್ರ ಅಸಮರ್ಪಕ ಕಾರ್ಯನಿರ್ವಹಣೆ ಮತ್ತು ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿದ್ದ ಹದಿಹರೆಯದ ರೋಗಿಗೆ, ಹೃದಯದ ಎರಡೂ ಭಾಗಗಳಿಗೆ ನೆರವು ನೀಡುವ ಯಾಂತ್ರಿಕ ವ್ಯವಸ್ಥೆಯನ್ನು (ಬಿಐವಿಎಡಿ) ಅಳವಡಿಸಲಾಗಿತ್ತು. 45 ದಿನಗಳ ಕಾಲ ಈ ಸಾಧನದ ಬೆಂಬಲದಲ್ಲಿದ್ದ ಅವರಿಗೆ ನಂತರ ಹೃದಯ ಕಸಿ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಕೇವಲ ಕೆಲವೇ ವಾರಗಳಲ್ಲಿ ಅವರು ಆಸ್ಪತ್ರೆಯಿಂದ ಮನೆಗೆ ಹೋದರು.
ಹೃದಯದ ಸ್ನಾಯುಗಳು ಹಿಗ್ಗುವ ಮತ್ತು ದುರ್ಬಲಗೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಈ ಹದಿಹರೆಯದ ರೋಗಿಯನ್ನು ಯಾಂತ್ರಿಕ ಪಂಪ್ ಮೂಲಕ 28 ದಿನಗಳ ಕಾಲ ಜೀವಂತವಾಗಿರಿಸಲಾಗಿತ್ತು. ತದನಂತರ ಅವರಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು.
ಬಾಲ್ಯದಲ್ಲಿ ಕ್ಯಾನ್ಸರ್ ಗೆದ್ದು ಬಂದಿದ್ದ ಈ ಬಾಲಕ, ಈ ಹಿಂದೆ ಗೆಡ್ಡೆಯ ಕಾರಣದಿಂದ ಒಂದು ಕಿಡ್ನಿಯನ್ನು ಕಳೆದುಕೊಂಡಿದ್ದನು. ಈಗ ಹೃದಯ ವೈಫಲ್ಯದ ರೂಪದಲ್ಲಿ ಅವನಿಗೆ ಹೊಸ ಸವಾಲು ಎದುರಾಗಿತ್ತು. 30 ದಿನಗಳ ಕಾಲ ಕೃತಕ ಹೃದಯ ಪಂಪ್ ನ ನೆರವಿನಲ್ಲಿದ್ದ ಈತನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಯಿತು. ಇದು ಎಲ್ಲಾ ಅಡೆತಡೆಗಳ ನಡುವೆಯೂ ಸಾಧಿಸಿದ ಅದ್ಭುತ ಚಿಕಿತ್ಸೆಯಾಗಿದೆ.
Bangalore,Karnataka













