Last Updated:
ಉಜ್ಬೇಕಿಸ್ತಾನ್ ಮತ್ತು ಅಫ್ಘಾನಿಸ್ತಾನ್ ತಂಡಗಳ ನಡುವಿನ ಪಂದ್ಯದಲ್ಲಿ ಭಾರೀ ರನ್ಗಳ ಮಳೆ ಸುರಿಯಿತು. ಅಫ್ಘಾನಿಸ್ತಾನದ ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ನಬಿ ಅವರ ಮಗ ಕೇವಲ 28 ಎಸೆತಗಳಲ್ಲಿ ಶತಕ ಬಾರಿಸಿ ಎಲ್ಲರ ಚಿತ್ತ ಕದ್ದಿದ್ದಾರೆ.
ಉಜ್ಬೇಕಿಸ್ತಾನ್ (Uzbekistan) ಮತ್ತು ಅಫ್ಘಾನಿಸ್ತಾನ್ (Afghanistan) ತಂಡಗಳ ನಡುವಿನ ಏಕೈಕ ಟಿ20 ಪಂದ್ಯವು ಜುಲೈ 10 ರಂದು ಶುಕ್ರವಾರದಂದು ಖೋಸ್ಟ್(Khost)ನ ರಹಮತ್ ವಾಲಿ ಮಸ್ರೂರ್ ಕ್ರಿಕೆಟ್ (Cricket) ಮೈದಾನದಲ್ಲಿ ನಡೆಯಿತು. ಅಫ್ಘಾನಿಸ್ತಾನ್ನ ಆರಂಭಿಕ ಬ್ಯಾಟ್ಸ್ಮನ್ ಹಸನ್ ಇಸಾಖಿಲ್ (Hassan Eisakhil) ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರು ಉಜ್ಬೇಕಿಸ್ತಾನ್ ಬೌಲರ್ಗಳಿಗೆ ಬೆವರಿಳಿಸಿದರು. ಸ್ಪೋಟಕ ಬ್ಯಾಟಿಂಗ್ (Batting) ಮಾಡಿದ ಹಸನ್ ಇಸಾಖಿಲ್ ಕೇವಲ 28 ಎಸೆತಗಳಲ್ಲಿ ಶತಕ ಗಳಿಸಿ ಮಿಂಚಿದರು.
ಈ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್ಮನ್ ಹಸನ್ ಇಸಾಖಿಲ್ ಕೇವಲ 34 ಎಸೆತಗಳಲ್ಲಿ 120 ರನ್ ಗಳಿಸಿದರು. ಇದರಲ್ಲಿ 16 ಸಿಕ್ಸರ್ಗಳು ಮತ್ತು 4 ಬೌಂಡರಿಗಳಿದ್ದವು. ಅಂದರೆ ಬೌಂಡರಿಗಳ ಮೂಲಕ ಮಾತ್ರ ಅವರು 112 ರನ್ ಗಳಿಸಿದರು. ಇಸಾಖಿಲ್ ಅವರ ಈ ಅದ್ಭುತ ಶತಕದ ಕಾರಣದಿಂದ ಅಫ್ಘಾನಿಸ್ತಾನ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದು 323 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಉಜ್ಬೇಕಿಸ್ತಾನ್ ತಂಡವು 7 ವಿಕೆಟ್ ಕಳೆದು ಕೇವಲ 124 ರನ್ ಮಾತ್ರ ಗಳಿಸಿ, 199 ರನ್ಗಳಿಂದ ಸೋತಿತು.
19 ವರ್ಷದ ಹಸನ್ ಇಸಾಖಿಲ್ ಅಫ್ಘಾನಿಸ್ತಾನದ ಹಿರಿಯ ಕ್ರಿಕೆಟ್ ಆಟಗಾರ ಮತ್ತು ಮಾಜಿ ನಾಯಕ ಮೊಹಮ್ಮದ್ ನಬಿ ಅವರ ಮಗ. ಇಸಾಖಿಲ್ ಇದುವರೆಗೆ 4 ಪ್ರಥಮ ದರ್ಜೆ ಪಂದ್ಯಗಳು, 14 ಲಿಸ್ಟ್ ಎ ಪಂದ್ಯಗಳು ಮತ್ತು 38 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 330 ರನ್ ಗಳಿಸಿದ್ದಾರೆ. ಇದರ ಸರಾಸರಿ 47.14. ಇದರಲ್ಲಿ 2 ಶತಕಗಳೂ ಸೇರಿವೆ.
ಹಸನ್ ಇಸಾಖಿಲ್ ಅವರ ತಂದೆ ಮೊಹಮ್ಮದ್ ನಬಿ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಭವಿಷ್ಯದಲ್ಲಿ ನಬಿ ಮತ್ತು ಇಸಾಖಿಲ್ ಇಬ್ಬರೂ ಅಫ್ಘಾನಿಸ್ತಾನ ತಂಡಕ್ಕಾಗಿ ಒಟ್ಟಿಗೆ ಕ್ರಿಕೆಟ್ ಆಡುವ ಸಾಧ್ಯತೆ ಇದೆ. 41 ವರ್ಷದ ನಬಿ ಅಫ್ಘಾನಿಸ್ತಾನ ಪರ 333 ಪಂದ್ಯಗಳನ್ನು ಆಡಿದ್ದಾರೆ. ಅವರು 24.69 ಸರಾಸರಿಯಲ್ಲಿ 6,273 ರನ್ಗಳನ್ನು ಗಳಿಸಿದ್ದಾರೆ. ಜೊತೆಗೆ 30.91 ಸರಾಸರಿಯಲ್ಲಿ 294 ವಿಕೆಟ್ಗಳನ್ನೂ ಪಡೆದಿದ್ದಾರೆ.














