Last Updated:
ಐಪಿಎಲ್ 2026 ರ ಸೀಸನ್ನ ಕ್ವಾಲಿಫೈಯರ್- 2 ಪಂದ್ಯವು ಮೇ 29 ರಂದು ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವಿರುದ್ಧದ ತಯಾರಿಯ ಬಗ್ಗೆ ಜಿಟಿಯ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ 19 ನೇ ಸೀಸನ್ನ ಎರಡನೇ ಕ್ವಾಲಿಫೈಯರ್ (Qualifier) ಪಂದ್ಯವು ಗುಜರಾತ್ ಟೈಟಾನ್ಸ್ (GT) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನ್ಯೂ ಚಂಡೀಗಢ (New Chandigarh) ದ ಮುಲ್ಲನ್ಪುರ (Mullanpur) ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಹಾಲಿ ಚಾಂಪಿಯನ್ (Champion) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟಾನ್ಸ್ ಸೋಲನ್ನು ಅನುಭವಿಸಿತು. ಇದರಿಂದಾಗಿ ಫೈನಲ್ (Final) ತಲುಪಲು ಗುಜರಾತ್ ಟೈಟಾನ್ಸ್ ತಂಡಕ್ಕೆ ಇನ್ನೂ ಒಂದು ಅವಕಾಶವಿತ್ತು. ಇದರ ನಡುವೆ ಎಲಿಮಿನೇಟರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವನ್ನು 47 ರನ್ಗಳಿಂದ ಸೋಲಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಎರಡನೇ ಕ್ವಾಲಿಫೈಯರ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ರಾಜಸ್ಥಾನ ತಂಡದ ಗೆಲುವಿನಲ್ಲಿ 15 ವರ್ಷದ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ 97 ರನ್ಗಳ ಇನ್ನಿಂಗ್ಸ್ ಪ್ರಮುಖ ಪಾತ್ರ ವಹಿಸಿತು. ಈಗ, ಗುಜರಾತ್ ಟೈಟಾನ್ಸ್ ತಂಡದ ಅತಿದೊಡ್ಡ ಸವಾಲೆಂದರೆ ವೈಭವ್ ಸೂರ್ಯವಂಶಿ ಅವರನ್ನು ಕಟ್ಟಿ ಹಾಕುವುದು.
ಹೌದು, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಬೇಗನೇ ಔಟ್ ಮಾಡಲು ಮಾಸ್ಟರ್ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಗುಜರಾತ್ ಟೈಟಾನ್ಸ್ ತಂಡದ ಸಹಾಯಕ ಮತ್ತು ಬ್ಯಾಟಿಂಗ್ ಕೋಚ್ ಪಾರ್ಥಿವ್ ಪಟೇಲ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಐಪಿಎಲ್ 2026 ರ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಸೂರ್ಯವಂಶಿ ಆಡಿರುವ 15 ಪಂದ್ಯಗಳಲ್ಲಿ 680 ರನ್ ಗಳಿಸಿದ್ದಾರೆ. ಎರಡನೇ ಕ್ವಾಲಿಫೈಯರ್ಗೆ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ವೈಭವ್ ಸೂರ್ಯವಂಶಿಯನ್ನು ಕಟ್ಟಿ ಹಾಕುವ ಬಗ್ಗೆ ಕೇಳಿದಾಗ, ಗುಜರಾತ್ ಟೈಟಾನ್ಸ್ನ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಮಾಸ್ಟರ್ ಪ್ಲಾನ್ ಹೇಳಿದ್ದಾರೆ.
ಸೂರ್ಯವಂಶಿ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ನೋಡಲು ತುಂಬಾ ಸಂತೋಷವಾಗಿದೆ. ಅವರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಲು ನಮ್ಮಿಂದ ಸಾಧ್ಯವಾಗುತ್ತದೆ ಅಂದುಕೊಂಡಿದ್ದೇವೆ. ಈ ಆವೃತ್ತಿಯಲ್ಲಿ ಇತರ ತಂಡಗಳು ಸಹ ಸೂರ್ಯವಂಶಿ ಅವರನ್ನು ಬೇಗನೆ ಔಟ್ ಮಾಡಲು ಯೋಜಿಸಿದ್ದವು, ಆದರೆ ವಿಫಲವಾದವು. ವೈಭವ್ ಅವರ ಬ್ಯಾಟಿಂಗ್ನ ವೀಡಿಯೊಗಳನ್ನು ನಾವು ವೀಕ್ಷಿಸಿದ್ದೇವೆ. ಅವರ ವಿರುದ್ಧ ನಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಬಹುದು ಎಂದು ಅಂದುಕೊಂಡಿದ್ದೇವೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಪಾರ್ಥಿವ್ ಪಟೇಲ್ ಕೂಡ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯ ಬಗ್ಗೆ ಪ್ರತಿಕ್ರಿಯಿಸಿ, 15 ವರ್ಷದ ಯುವ ಆಟಗಾರನನ್ನು ಶ್ಲಾಘಿಸುತ್ತಾ, “ಕಳೆದ ಬಾರಿ ನಾನು ಅವನ ವಯಸ್ಸಿನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ಹೇಳಿದ್ದೆ. ಅವನು ಅದ್ಭುತ ಪ್ರತಿಭೆ. ಅವನು ಬ್ಯಾಟಿಂಗ್ ಮಾಡುವುದನ್ನು ಎಲ್ಲರೂ ನೋಡಲು ಇಷ್ಟಪಡುತ್ತಾರೆ. ಆದಾಗ್ಯೂ, ಎದುರಾಳಿ ತಂಡದ ದೃಷ್ಟಿಕೋನದಿಂದ ಈ ಪಂದ್ಯದಲ್ಲಿ ಅವನು ಸುಲಭವಾಗಿ ಸ್ಕೋರ್ ಮಾಡುವುದನ್ನು ತಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
May 28, 2026 10:50 PM IST
GT vs RR: ಕ್ವಾಲಿಫೈಯರ್-2 ರಲ್ಲಿ ಸೂರ್ಯವಂಶಿಯನ್ನು ಕಟ್ಟಿಹಾಕಲು ಗುಜರಾತ್ ಮಾಸ್ಟರ್ ಪ್ಲಾನ್! ಹೈವೋಲ್ಟೇಜ್ ಪಂದ್ಯ ಮುನ್ನ ಜಿಟಿ ಕೋಚ್ ಹೇಳಿದ್ದಿಷ್ಟು!













