Last Updated:
ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್‌ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ
ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ ಬೇಡಿಕೆ ಮತ್ತೆ ಚರ್ಚೆಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸದ್ಯ ವಿಧಿಸುತ್ತಿರುವ ತೆರಿಗೆಯನ್ನು (Tax) ರದ್ದು ಮಾಡಿ ಜಿಎಸ್ಟಿ ಅಡಿ ತೆರಿಗೆ ವಿಧಿಸುವುದರಿಂದ ಭಾರೀ ಪ್ರಮಾಣದಲ್ಲಿ (Bengaluru Petrol Price) ತೆರಿಗೆ ದರ ಕಡಿಮೆಯಾಗಲಿದೆ.
ದೇಶದಲ್ಲಿ ಸದ್ಯ ಇಂಧನ ಬೆಲೆಗಳು ಹೆಚ್ಚಾಗುತ್ತಿದ್ದು, ಈ ತಿಂಗಳಿನಲ್ಲಿ ಮೂರನೇ ಬಾರಿ ಪೆಟ್ರೋಲ್, ಡೀಸೆಲ್ ಹೆಚ್ಚಳ ಆಗಿದೆ. ಕಳೆದ ಎಂಟು ದಿನಗಳಲ್ಲಿ ಬರೋಬ್ಬರಿ ಮೂರು ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ. ಶನಿವಾರ ಮತ್ತೊಮ್ಮೆ ಪೆಟ್ರೋಲ್ ದರ ಹೆಚ್ಚಾಗಿತ್ತು. ಇದರೊಂದಿಗೆ ಭಾರತದ ಹಲವು ನಗರಗಳಲ್ಲಿ 100 ರೂಪಾಯಿ ಗಡಿದಾಟಿತ್ತು. ದೇಶದ ರಾಜಧಾನಿಯಲ್ಲಿ ಲೀಟರ್ 99.51ಕ್ಕೆ ಹೆಚ್ಚಳವಾಗಿದೆ. ಆದರೆ ಶನಿವಾರ ಲೀಟರ್ ಪೆಟ್ರೋಲ್ ಮೇಲೆ 87 ಪೈಸೆ, ಡೀಸೆಲ್ 91 ಪೈಸೆ ಹೆಚ್ಚಳ ಆಗಿತ್ತು.
ತಕ್ಷಣದಿಂದ ಹೊಸ ದರ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು. ಈ ಹಿಂದೆ ಲೀಟರ್ ಪೆಟ್ರೋಲ್ ಬೆಲೆ 03 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೊಮ್ಮೆ ಇಂಧನ ಬೆಲೆ ಹೆಚ್ಚಾಗಿರೋದು ಜನರ ಮೇಲೆ ಭಾರೀ ಹೊರೆಯಾಗಿದೆ. ಇದರ ನಡುವೆಯೇ ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ವಾದ ಜೋರಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳು ಸದ್ಯ ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಡಿಮ್ಯಾಂಡ್ ಮಾಡಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಉದ್ಯಮಿಗಳ ಮತ್ತು ವ್ಯಾಪಾರಿಗಳ ಉನ್ನತ ಸಂಘಟನೆಯಾದ ‘ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ’ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಹಣದುಬ್ಬರ ಹೆಚ್ಚಾಗುತ್ತಿರುವ ಕಾರಣ ಜನರಿಗೆ ರಿಲೀಫ್ ನೀಡುವ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ದರಗಳನ್ನು ತಕ್ಷಣವೇ ಜಿಎಸ್ಟಿ ಅಡಿ ತೆಗೆದುಕೊಂಡು ಬರಬೇಕು ಎಂದು ಗೋಯಲ್ ಮನವಿ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆಗಳನ್ನು ಹಾಕುತ್ತಿವೆ. ದೆಹಲಿಯಲ್ಲಿ ಮೇ 22 ರಂದು ಪೆಟ್ರೋಲ್ ದರ 66.29 ರೂಪಾಯಿ ಇದ್ದು, ಎಕ್ಸೈಸ್ ದರ 11.90, ವ್ಯಾಟ್ 16.03, ಡೀಲರ್ ಮಾರ್ಜಿನ್ 4.42 ರೂಪಾಯಿ ಇದೆ.
ತೆರಿಗೆ (ಸಾಂದರ್ಭಿಕ ಚಿತ್ರ)
ತೆರಿಗೆ ಹಾಗೂ ಮಾರ್ಜಿನ್ ದರ ಒಟ್ಟಿಗೆ ಸೇರಿ ಲೀಟರ್ ಪೆಟ್ರೋಲ್ ಮೇಲೆ 32 ರೂಪಾಯಿ ಯಿಂದ 33 ರೂಪಾಯಿ ವರೆಗೂ ಇರುತ್ತದೆ. ಇನ್ನು ಡೀಸೆಲ್ ಬೆಲೆ 67.36 ರೂಪಾಯಿ ಇದ್ದು, ತೆರಿಗೆ ಹಾಗೂ ಮಾರ್ಜಿನ್ ಸೇರಿ ಲೀಟರ್ ಮೇಲೆ 24 ರೂಪಾಯಿ ವರೆಗೂ ಇರುತ್ತದೆ. ಒಂದೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುವ ಈ ತೆರಿಗೆಗಳನ್ನು ರದ್ದು ಮಾಡಿ ಜಿಎಸ್ಟಿ ವ್ಯಾಪ್ತಿಗೆ ತಂದರೆ ಇಂದು ತೆರಿಗೆ ಮಾತ್ರ ಇರುತ್ತದೆ. ಜಿಎಸ್ಟಿ ವಿಧಿಸುವುದರಿಂದ ಕೇಂದ್ರ ಸರ್ಕಾರ ತೆರಿಗೆ ಹಾಗೂ ರಾಜ್ಯ ಸರ್ಕಾರ ವಿಧಿಸುವ ವ್ಯಾಟ್ ಎರಡು ಇಲ್ಲವಾಗುತ್ತದೆ. ಇದರೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸುಮಾರು 27.93 ರೂಪಾಯಿ ಕಡಿಮೆಯಾಗುತ್ತದೆ.
ಪೆಟ್ರೋಲ್ ದರ 66.29 ರೂಪಾಯಿ ಇದ್ದು, ಶೇಕಡಾ 18 ರಷ್ಟು ಜಿಎಸ್ಟಿ ವಿಧಿಸಿದರೂ ಇದರ ಮೊತ್ತ 11.93 ರೂಪಾಯಿ ಆಗುತ್ತದೆ. ಆಗ ಲೀಟರ್ ಪೆಟ್ರೋಲ್ ಬೆಲೆ 78.22 ರೂಪಾಯಿಗೆ ಲಭ್ಯವಾಗುತ್ತದೆ. ಅಂದರೆ ಪೆಟ್ರೋಲ್ ದರ 22 ರೂಪಾಯಿ ಕಡಿಮೆಯಾಗುತ್ತದೆ. ಇನ್ನು ಕರ್ನಾಟಕದಲ್ಲಿ ಪೆಟ್ರೋಲ್ ಮೇಲೆ ಶೇಕಡಾ 29.84 ರಷ್ಟು (ಅಂದರೆ 23.50 ಯಿಂದ 24 ರೂಪಾಯಿ) ಮತ್ತು ಡೀಸೆಲ್ ಮೇಲೆ ಶೇಕಡಾ 21.17 ರಷ್ಟು (16 ರಿಂದ 17.50 ರೂಪಾಯಿ) ವ್ಯಾಟ್ ವಿಧಿಸಲಾಗುತ್ತಿದೆ. ಇಂಧನ ಮೂಲ ಬೆಲೆ ಮತ್ತು ಡೀಲರ್ ಕಮಿಷನ್ ಸೇರಿ 75.50 ರೂಪಾಯಿ ಆದರೆ ಕೇಂದ್ರ ತೆರಿಗೆ ಮತ್ತು ರಾಜ್ಯ ಸರ್ಕಾರದ ತೆರಿಗೆ ಸೇರಿ 24.50 ರೂಪಾಯಿ ಸೇರಿ ಅಂದಾಜು 103 ರೂಪಾಯಿ ಆಗುತ್ತದೆ. (ಗಮನಿಸಿ: ಈ ದರವು ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಅನುಗುಣವಾಗಿ ಪ್ರತಿದಿನ ಬದಲಾವಣೆ ಆಗುತ್ತದೆ. ಇದರಿಂದ ರಾಜ್ಯ ಶೇಕಡಾವಾರು ತೆರಿಗೆ ಮೊತ್ತ ಸಣ್ಣ ಪ್ರಮಾಣದಲ್ಲಿ ಬದಲಾವಣೆಯಾಗುತ್ತದೆ.) ಇದರಂತೆ ನೋಡುವುದಾದರೆ ಬೆಂಗಳೂರಿನಲ್ಲಿ ಅಂದಾಜು ಲೀಟರ್ ಪೆಟ್ರೋಲ್ ಬೆಲೆ 87.43 ಆಗಲಿದ್ದು, ಪ್ರತಿ ಲೀಟರ್ ಮೇಲೆ 16 ರೂಪಾಯಿ ಹೆಚ್ಚು ಹಣ ಉಳಿತಾಯ ಆಗಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ (ಸಾಂದರ್ಭಿಕ ಚಿತ್ರ)
ಒಂದು ದೇಶ ಒಂದು ತೆರಿಗೆ ವಿಧಾನವನ್ನು 2017ರಲ್ಲಿಯೇ ಜಿಎಸ್ಟಿ ಜಾರಿಗೆ ತಂದಾಗ ಘೋಷಣೆ ಮಾಡಿತ್ತು. ಆದಾಗ್ಯೂ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರದಿರುವುದು ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ಭಾವನೆಗೆ ದೊಡ್ಡ ಹೊಡೆತ ಬಿದ್ದಿದೆ. ಇದರೊಂದಿಗೆ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಮತ್ತು ವ್ಯಾಟ್ ಅನ್ನು ರದ್ದುಗೊಳಿಸಿ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಮತ್ತೊಮ್ಮೆ ಜೋರಾಗಿ ಕೇಳಿ ಬರುತ್ತಿದೆ. ಆದರೆ ಇಂಧನ ಬೆಲೆ ಜಿಎಸ್ಟಿ ವ್ಯಾಪ್ತಿಗೆ ಬಂದರೆ ರಾಜ್ಯ ಸರ್ಕಾರಗಳಿಗೆ ಭಾರೀ ಆದಾಯ ನಷ್ಟ ಉಂಟಾಗುತ್ತದೆ. ಏಕೆಂದರೆ ರಾಜ್ಯ ಸರ್ಕಾರಗಳಿಗೆ ಅಬಕಾರಿ ತೆರಿಗೆ ಮತ್ತು ಇಂಧನದ ಮೇಲಿ ವ್ಯಾಟ್ ವಿಧಿಸುವುದರಿಂದ ಹೆಚ್ಚಿನ ಆದಾಯ ಬರುತ್ತದೆ. ಇದಕ್ಕೆ ಪರಿಹಾರವಾಗಿ ಕೇಂದ್ರವೇ ರಾಜ್ಯಗಳಿಗೆ ಆಗುವ ಭಾರೀ ನಷ್ಟವನ್ನು ಭರಿಸಬೇಕಾಗುತ್ತದೆ. ಆಗ ಇದಕ್ಕೆ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸುವ ಕಡೆ ಚಿಂತನೆ ಮಾಡುತ್ತವೆ.
Bangalore [Bangalore],Bangalore,Karnataka
May 24, 2026 11:54 AM IST













