Last Updated:
FIFA World Cup 2026: ಕೇವಲ 1% ಗೆಲ್ಲೋ ಚಾನ್ಸ್ ಇಟ್ಟುಕೊಂಡು ಅಂದು ವಿಶ್ವ ಚಾಂಪಿಯನ್ ಜರ್ಮನಿಯನ್ನೇ ಧೂಳೀಪಟ ಮಾಡಿದ ಸೌತ್ ಕೊರಿಯಾದ ಆ ಖತರ್ನಾಕ್ ಐಡಿಯಾ ಏನು ಗೊತ್ತಾ? ಇಡೀ ವಿಶ್ವಕಪ್ ಇತಿಹಾಸದಲ್ಲೇ ಇಂತಹ ರಿವರ್ಸ್ ಸ್ಟ್ರಾಟಜಿ ಮ್ಯಾಜಿಕ್ ನಡೆದೇ ಇಲ್ಲ..
ಇವತ್ತು ಜಗತ್ತಿನಾದ್ಯಂತ ಫಿಫಾ ವಿಶ್ವಕಪ್ (FIFA World Cup) ಟೂರ್ನಿ ಕ್ರೇಜ್ ಹೆಚ್ಚಾಗಿದೆ. ಆದರೆ ಫುಟ್‌ಬಾಲ್ ಲೋಕದಲ್ಲಿ ಇವತ್ತಿಗೂ ಅತ್ಯಂತ ರೋಚಕವಾಗಿ ಚರ್ಚೆಯಾಗೋದು ಮಾತ್ರ 2018ರ ಜೂನ್ 27 ರಂದು ಸೌತ್ ಕೊರಿಯಾ ತಂಡ ರಚಿಸಿದ ಆ ವಿಚಿತ್ರ ಇತಿಹಾಸ. ಅಂದು ಡಿಫೆಂಡಿಂಗ್ ಚಾಂಪಿಯನ್ಸ್ ಆಗಿದ್ದ, ಫಿಫಾ ರ‍್ಯಾಂಕಿಂಗ್‌ನಲ್ಲಿ ನಂಬರ್ ಒನ್ ಪೀಠದಲ್ಲಿದ್ದ ಬಲಿಷ್ಠ ಜರ್ಮನಿ ತಂಡವನ್ನು ಸೌತ್ ಕೊರಿಯಾ 2-0 ಗೋಲುಗಳಿಂದ ಮಣ್ಣು ಮುಕ್ಕಿಸಿ ಇಡೀ ಟೂರ್ನಿಯಿಂದಲೇ ಹೊರಹಾಕಿತ್ತು. ಅಂದು ಕಷಾನ್ ಅಖಾಡದಲ್ಲಿ ನಡೆದ ಆ ಪಂದ್ಯ ಕೇವಲ ಒಂದು ಗೆಲುವಲ್ಲ, ಅದು ಇಡೀ ವಿಶ್ವ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ನಿಗೂಢ ಹಾಗೂ ಚಾಣಾಕ್ಷ ಮಾಸ್ಟರ್ ಪ್ಲಾನ್ (Master plan) ಮೂಲಕ ದಾಖಲಾದ ಮಹಾ ಗೆಲುವು.
ಸೌತ್ ಕೊರಿಯಾ ತಂಡದ ಕೋಚ್ ಶಿನ್ ತೇ-ಯಾಂಗ್ (Shin Tae-yong) ಹೂಡಿದ ಆ ಒಂದು ‘ಜೆರ್ಸಿ ನಂಬರ್’ ಐಡಿಯಾ ಇದೆಯಲ್ಲ, ಅಂತಹ ಖತರ್ನಾಕ್ ರಿವರ್ಸ್ ಸ್ಟ್ರಾಟಜಿಯನ್ನು (Reverse strategy) ಇನ್ವೆಸ್ಟ್ ಮಾಡಲು ಇಲ್ಲಿಯವರೆಗೆ ಯಾವ ದೇಶದ ಕೋಚ್‌ಗೂ ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಯಾರೂ ಮಾಡಲು ಹೋಗೋದು ಇಲ್ಲ.
ಅಂದು ಸ್ವೀಡನ್ ಮತ್ತು ಮೆಕ್ಸಿಕೋ ವಿರುದ್ಧ ಸತತವಾಗಿ ಸೋತು ಸೌತ್ ಕೊರಿಯಾ ಕಂಪ್ಲೀಟ್ ಆಗಿ ಕಂಗಾಲಾಗಿತ್ತು. ಪ್ರತಿಯೊಬ್ಬರೂ ಕೊರಿಯಾ ತಂಡ ಟೂರ್ನಿಯಿಂದ ಔಟ್ ಆಗೋದು ಗ್ಯಾರಂಟಿ ಅನ್ಕೊಂಡಿದ್ರು. ಸ್ವತಃ ಕೋಚ್ ಶಿನ್ ತೇ-ಯಾಂಗ್ ಪ್ರಕಾರ, ಅಂದು ಜರ್ಮನಿ ಎದುರು ಗೆಲ್ಲಲು ಸೌತ್ ಕೊರಿಯಾಗೆ ಇದ್ದದ್ದು ಕೇವಲ ಕಣ್ಣಿಗೆ ಕಾಣಿಸದ 1% ರಷ್ಟು ಚಾನ್ಸ್ ಮಾತ್ರ. ಆದರೆ ಆ ಒಂದು ಪರ್ಸೆಂಟ್ ನಂಬಿಕೆಯನ್ನೇ ಕೋಚ್ ಇಡೀ ತಂಡದ ಆಟಗಾರರ ಮೈಯೊಳಗೆ ರಕ್ತದಂತೆ ಹರಿಸಿದ್ದರು.
ಜರ್ಮನಿ ಪಂದ್ಯಕ್ಕೂ ಮುನ್ನ ನಡೆದ ಪ್ರ್ಯಾಕ್ಟೀಸ್ ಮ್ಯಾಚ್‌ಗಳಲ್ಲಿ ಕೋಚ್ ಶಿನ್ ತೇ-ಯಾಂಗ್ ಒಂದು ಮೈಂಡ್ ಗೇಮ್ ಆಡಿದ್ದರು. ಅವರು ತಮ್ಮ ತಂಡದ ಪ್ರಮುಖ ಆಟಗಾರರ ಜೆರ್ಸಿ ನಂಬರ್‌ಗಳನ್ನು ಕಂಪ್ಲೀಟ್ ಆಗಿ ಅದಲು-ಬದಲು ಮಾಡಿ ಮೈದಾನಕ್ಕೆ ಇಳಿಸಿದ್ದರು. ಕೇವಲ ಸ್ಟಾರ್ ಆಟಗಾರ ಸನ್ ಹೆಂಗ್-ಮಿನ್ ಮತ್ತು ಕ್ಯಾಪ್ಟನ್ ಕಿಮ್ ಕೀ-ಹೀ ಹೊರತುಪಡಿಸಿ, ಉಳಿದೆಲ್ಲಾ ಆಟಗಾರರ ಜೆರ್ಸಿ ನಂಬರ್ ಬದಲಾಯಿಸಲಾಗಿತ್ತು.
ಈ ವಿಚಿತ್ರ ಜೆರ್ಸಿ ನಂಬರ್ ಬದಲಾವಣೆಯ ರಹಸ್ಯದ ಬಗ್ಗೆ ಅಂದು ಮಾತನಾಡಿದ್ದ ಕೋಚ್ ಶಿನ್, “ಪಾಶ್ಚಿಮಾತ್ಯ ದೇಶಗಳ ಜನರಿಗೆ ನಮ್ಮ ಏಷ್ಯನ್ ಆಟಗಾರರ ಮುಖಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲ್ಲ, ಎಲ್ಲರೂ ಒಂದೇ ತರಹ ಕಾಣುತ್ತಾರೆ. ಹಾಗಾಗಿ ನಾವು ಜೆರ್ಸಿ ನಂಬರ್ ಬದಲಾಯಿಸಿದರೆ ಜರ್ಮನಿಯವರು ಸಂಪೂರ್ಣವಾಗಿ ಗೊಂದಲಕ್ಕೀಡಾಗುತ್ತಾರೆ ಅಂತಲೇ ಈ ಮೈಂಡ್ ಗೇಮ್ ಆಡಿದ್ದೆ” ಎಂದು ಚಾಣಾಕ್ಷತನದ ಸತ್ಯವನ್ನು ಬಿಚ್ಚಿಟ್ಟಿದ್ದರು!
ಜರ್ಮನಿ ತಂಡವು ಪಂದ್ಯವನ್ನು ಈಸಿಯಾಗಿ ಗೆಲ್ಲಲು ಮುಗಿಬಿದ್ದು ಅಟ್ಯಾಕ್ ಮಾಡುವಾಗ ಅವರು ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ಎಣಿಸುವುದೇ ಕೊರಿಯಾದ ಪ್ಲಾನ್ ಆಗಿತ್ತು. ಇದಕ್ಕಾಗಿ ಕೋಚ್ ಶಿನ್ ಇಡೀ ತಂಡವನ್ನು ಅತ್ಯಂತ ಕಟ್ಟುನಿಟ್ಟಾದ, ದೈಹಿಕವಾಗಿ ಅಸಾಧ್ಯವಾದ ಮತ್ತು ನಿರಂತರವಾದ ಡಿಫೆನ್ಸಿವ್ ಸಿಸ್ಟಮ್ ಒಳಗೆ ತಂದಿಟ್ಟಿದ್ದರು.
ಜರ್ಮನಿಯ ದಿಗ್ಗಜ ಆಟಗಾರರು ಎಷ್ಟು ಶೂಟ್ ಮಾಡಿದರೂ ಗೋಲ್ ಕೀಪರ್ ಜೋ ಹ್ಯುನ್-ವೂ ಅವರ ಅದ್ಭುತ ಪ್ರದರ್ಶನದಿಂದ ಎಲ್ಲವೂ ಧೂಳೀಪಟವಾಗುತ್ತಿತ್ತು. ಕಿಮ್ ಯಂಗ್-ಗ್ವಾನ್ ಮತ್ತು ಟೊಟೆನ್‌ಹ್ಯಾಮ್ ಸ್ಟಾರ್ ಫಾರ್ವರ್ಡ್ ಸನ್ ಹೆಂಗ್-ಮಿನ್ ಬಾರಿಸಿದ ಆ ಎರಡು ಗೋಲುಗಳು ಜರ್ಮನಿಯ ಎದೆಯನ್ನು ಅಂದು ಸೀಳಿಬಿಟ್ಟಿತ್ತು.
ಗೆಲ್ಲುವ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ ಕೊನೆ ಕ್ಷಣದವರೆಗೂ ಛಲ ಬಿಡದೆ ಹೋರಾಡಿ, ಜೆರ್ಸಿ ನಂಬರ್ ಬದಲಾಯಿಸುವ ರೇಂಜ್‌ಗೆ ರಾಜತಂತ್ರ ಹೂಡಿ ವಿಶ್ವ ಚಾಂಪಿಯನ್ಸ್ ಅನ್ನೇ ನಡುಗಿಸಿದ ಸೌತ್ ಕೊರಿಯಾದ ಆ ಐಡಿಯಾ ಸದಾ ಕಾಲಕ್ಕೂ ಫುಟ್‌ಬಾಲ್ ಲೋಕದ ನಂಬರ್ ಒನ್ ಮಾಸ್ಟರ್ ಪ್ಲಾನ್ ಆಗಿ ಉಳಿಯಲಿದೆ.
FIFA World Cup 2026: ಕೋಚ್‌ನ ಮಾಸ್ಟರ್ ಪ್ಲಾನ್‌ನಿಂದ ಪಂದ್ಯ ಗೆದಿತ್ತು ಆ ತಂಡ! ಫಿಫಾ ಇತಿಹಾಸದಲ್ಲೇ ಇಂಥಾ ಮ್ಯಾಚ್ ನೋಡಿರೋಕೆ ಸಾಧ್ಯನೇ ಇಲ್ಲ!













