Last Updated:
ಫಹಾದ್ ಫಾಸಿಲ್ (Fahadh Faasil) ಅಭಿನಯದ ಬಹುನಿರೀಕ್ಷಿತ ಫ್ಯಾಂಟಸಿ ಹಾಸ್ಯ ಚಿತ್ರ ಡೋಂಟ್ ಟ್ರಬಲ್ ದಿ ಟ್ರಬಲ್ (Don’t Trouble the Trouble) ಬಿಡುಗಡೆಗೆ ಸಜ್ಜಾಗಿದೆ.
ಫಹಾದ್ ಫಾಸಿಲ್ (Fahadh Faasil) ಅಭಿನಯದ ಬಹುನಿರೀಕ್ಷಿತ ಫ್ಯಾಂಟಸಿ ಹಾಸ್ಯ ಚಿತ್ರ ಡೋಂಟ್ ಟ್ರಬಲ್ ದಿ ಟ್ರಬಲ್ (Don’t Trouble the Trouble) ಬಿಡುಗಡೆಗೆ ಸಜ್ಜಾಗಿದೆ. ವಿಭಿನ್ನ ಕಥಾಹಂದರ ಮತ್ತು ಹಾಸ್ಯದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿರುವ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದ್ದು, ಫಹಾದ್ ಹೊಸ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.
ಸುಮಾರು ಮೂರು ನಿಮಿಷಗಳ ಟ್ರೇಲರ್‌ನಲ್ಲಿ ಫಹಾದ್ ಫಾಸಿಲ್ ನ ಸೂರಿ ಎಂಬ ಪಾತ್ರದಲ್ಲಿ ಪರಿಚಯಿಸಲಾಗಿದೆ. ಸೂರಿ ಜನರನ್ನು ಮೋಸಗೊಳಿಸಿ ಹಣ ಸಂಪಾದಿಸುವ ನಕಲಿ ಜಾದೂಗಾರ. ತನ್ನ ಕೆಲಸದಲ್ಲಿ ಸಾಕಷ್ಟು ಕುತಂತ್ರ ಹೊಂದಿರುವ ಆತ, ಯಾವುದೇ ರೀತಿಯ ತೊಂದರೆಯಿಂದ ತಪ್ಪಿಸಿಕೊಂಡು ಹಣ ಗಳಿಸುವುದನ್ನೇ ಗುರಿಯಾಗಿಸಿಕೊಂಡಿದ್ದಾನೆ.
ಆದರೆ ಸೂರಿಯ ಬದುಕಿನಲ್ಲಿ ಒಂದು ಬಾಲಕಿ ಪ್ರವೇಶಿಸಿದ ಬಳಿಕ ಆತನ ಲೆಕ್ಕಾಚಾರವೇ ತಲೆಕೆಳಗಾಗುತ್ತದೆ. ಸಾಮಾನ್ಯ ಬಾಲಕಿಯಂತೆ ಕಾಣುವ ಆಕೆಗೆ ನಿಜವಾದ ಅಲೌಕಿಕ ಶಕ್ತಿಗಳಿವೆ. ತನ್ನ ಹೆತ್ತವರನ್ನು ಹುಡುಕಲು ಆಕೆಗೆ ಸೂರಿಯ ಸಹಾಯ ಬೇಕಾಗುತ್ತದೆ. ಇದೇ ಸಂದರ್ಭದಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ.
ಟ್ರೇಲರ್ ಮುಂದುವರಿದಂತೆ ಬಾಲಕಿಯ ಹೆತ್ತವರ ಕಣ್ಮರೆಯ ಹಿಂದಿನ ರಹಸ್ಯವೂ ತೆರೆದುಕೊಳ್ಳುತ್ತದೆ. ತನ್ನ ಹೆತ್ತವರ ಕಣ್ಮರೆಗೆ ಆ ಬಾಲಕಿಯೇ ಕಾರಣ ಎಂಬ ಸಂಗತಿ ಕಥೆಯಲ್ಲಿ ಪ್ರಮುಖ ತಿರುವಾಗಿ ಕಾಣಿಸಿಕೊಂಡಿದೆ. ಇದೀಗ ಆಕೆಗೆ ತನ್ನ ಹೆತ್ತವರನ್ನು ಹುಡುಕಬೇಕಾಗಿದೆ. ಇದಕ್ಕಾಗಿ ನಕಲಿ ಜಾದೂಗಾರ ಸೂರಿಯ ಸಹಾಯ ಅನಿವಾರ್ಯವಾಗುತ್ತದೆ.
ಆರಂಭದಲ್ಲಿ ಹಣಕ್ಕಾಗಿ ಬಾಲಕಿಯೊಂದಿಗೆ ಇರುವ ಸೂರಿ, ನಂತರ ಆಕೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಆರಂಭಿಸುತ್ತಾನೆ. ಇಬ್ಬರೂ ಒಟ್ಟಾಗಿ ಎದುರಿಸುವ ಸಮಸ್ಯೆಗಳು ಅವರ ನಡುವೆ ವಿಶೇಷವಾದ ಬಾಂಧವ್ಯವನ್ನು ಬೆಳೆಸುತ್ತವೆ. ಹಾಸ್ಯದ ಜೊತೆಗೆ ಭಾವನಾತ್ಮಕ ಅಂಶಗಳಿಗೂ ಸಿನಿಮಾದಲ್ಲಿ ಪ್ರಾಮುಖ್ಯತೆ ಇರುವ ಸೂಚನೆ ಟ್ರೇಲರ್‌ನಲ್ಲಿದೆ.
ಡೋಂಟ್ ಟ್ರಬಲ್ ದಿ ಟ್ರಬಲ್ ಟ್ರೇಲರ್‌ನ ಮತ್ತೊಂದು ಪ್ರಮುಖ ಆಕರ್ಷಣೆ ನಂದಮೂರಿ ಬಾಲಕೃಷ್ಣ ಅವರ ಧ್ವನಿ-ನಿರೂಪಣೆ. ಡೋಂಟ್ ಟ್ರಬಲ್ ದಿ ಟ್ರಬಲ್ಎಂ ಬ ಅರ್ಥದ ಜನಪ್ರಿಯ ಸಾಲನ್ನು ಆಧಾರವಾಗಿಟ್ಟುಕೊಂಡು ಟ್ರೇಲರ್ ಅನ್ನು ರೂಪಿಸಲಾಗಿದೆ.
ಈ ಧ್ವನಿ-ನಿರೂಪಣೆ ಸಿನಿಮಾದ ಹಾಸ್ಯ ಮತ್ತು ಸಾಹಸಮಯ ಅಂಶಗಳಿಗೆ ಮತ್ತಷ್ಟು ಮೆರುಗು ನೀಡಿದೆ. ಬಾಲಕೃಷ್ಣ ಅವರ ಧ್ವನಿ ಕೇಳಿಬಂದಿರುವುದು ತೆಲುಗು ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಹೆಚ್ಚುವರಿ ಕುತೂಹಲ ಮೂಡಿಸಿದೆ.
ಫಹಾದ್ ಫಾಸಿಲ್ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾದ ಟ್ರೇಲರ್ ಅನ್ನು ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಲಯಾಳಂ ಆವೃತ್ತಿಯಲ್ಲಿ ಮೋಹನ್ ಲಾಲ್ ಧ್ವನಿ ನೀಡಿದ್ದಾರೆ. ತಮಿಳು ಆವೃತ್ತಿಗೆ ಕಮಲ್ ಹಾಸನ್ ಧ್ವನಿ ನೀಡಿದ್ದಾರೆ.
ಡೋಂಟ್ ಟ್ರಬಲ್ ದಿ ಟ್ರಬಲ್ ಚಿತ್ರದಲ್ಲಿ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬೇಬಿ ಸ್ಸಾರಾ ಪಾಲೇಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೌರಭ್ ಸಚ್‌ದೇವ ಕೂಡ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
ಎಸ್.ಎಸ್. ಕಾರ್ತಿಕೇಯ ಸಹ-ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಎಸ್.ಎಸ್. ರಾಜಮೌಳಿ ಪ್ರಸ್ತುತಪಡಿಸುತ್ತಿದ್ದಾರೆ. ಹೀಗಾಗಿ ಫಹಾದ್ ಫಾಸಿಲ್ ಅವರ ಅಭಿಮಾನಿಗಳ ಜೊತೆಗೆ ರಾಜಮೌಳಿ ಅವರ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.














