Last Updated:
ರೈತರೇ, ಹೊಲದಲ್ಲಿನ ಕೃಷಿ ತ್ಯಾಜ್ಯವನ್ನು ಸುಡುವ ಮೊದಲು ಈ ಸುದ್ದಿ ಓದಿ. ಅದೇ ತ್ಯಾಜ್ಯದಿಂದ ₹50 ಸಾವಿರಕ್ಕೂ ಹೆಚ್ಚು ಆದಾಯ ಗಳಿಸುವ ಅವಕಾಶವಿದೆ. ಸಂಪೂರ್ಣ ಮಾಹಿತಿ ತಿಳಿಯಿರಿ.
ಬೆಂಗಳೂರು: ಪ್ರತಿ ಬಾರಿ ಬೆಳೆ ಕಟಾವಾದ ಬಳಿಕ ಹೊಲದಲ್ಲಿ (Field) ಉಳಿಯುವ ಕೃಷಿ ತ್ಯಾಜ್ಯವನ್ನು ಏನು ಮಾಡಬೇಕೆಂದು ತಿಳಿಯದೇ ಸುಟ್ಟು ಹಾಕುವ ಭಾರತೀಯ ರೈತರಿಗೆ (Farmers) ಈಗ ಒಂದು ಬಂಪರ್ ಲಾಟರಿ ಹೊಡೆದಿದೆ! ಹೌದು, ರೈತರು ಕಸವೆಂದು ಕಡೆಗಣಿಸುತ್ತಿದ್ದ ಅದೇ ಕಬ್ಬು, ಜೋಳ, ಬಾಳೆ ಗಿಡಗಳ ತ್ಯಾಜ್ಯವೇ ಇನ್ನು ಮುಂದೆ ಅವರಿಗೆ ಕಾರ್ಬನ್ ಕ್ರೆಡಿಟ್ಸ್ ಮೂಲಕ ಹೊಸ ಆದಾಯ ತಂದುಕೊಡಲಿದೆ.
ಈ ಅದ್ಭುತ ಕ್ರಾಂತಿಗೆ ಕಾರಣವಾಗಿದ್ದು ನಮ್ಮ ಬೆಂಗಳೂರು ಮೂಲದ ‘RenewCred’ ಎಂಬ ನವೋದ್ಯಮ (ಸ್ಟಾರ್ಟ್‌ಅಪ್). ಅಭಿಮನ್ಯು ರಾಠಿ ಮತ್ತು ಯೋಗೇಂದ್ರ ಪಾಂಚಾಲ್ ಎಂಬ ಇಬ್ಬರು ದಶಕದ ಹಳೆಯ ಸ್ನೇಹಿತರು ಸೇರಿ ಆರಂಭಿಸಿರುವ ಈ ಡಿಜಿಟಲ್ ಪ್ಲಾಟ್‌ಫಾರ್ಮ್, ಭಾರತೀಯ ಕೃಷಿ ವಲಯದಲ್ಲಿ ಪರಿಸರ ರಕ್ಷಣೆ ಮತ್ತು ರೈತರ ಆರ್ಥಿಕ ಸಬಲೀಕರಣ ಎರಡನ್ನೂ ಒಟ್ಟಿಗೆ ಸಾಧಿಸಿ ಇಡೀ ದೇಶದ ಗಮನ ಸೆಳೆದಿದೆ.
ಬೆಂಗಳೂರಿನಲ್ಲಿ ಆಂಟ್ಲರ್ ಫೌಂಡರ್ ರೆಸಿಡೆನ್ಸಿ ಕಾರ್ಯಕ್ರಮದ ಮೂಲಕ ಬಂದ 33 ವರ್ಷದ ಅಭಿಮನ್ಯು ರಾಠಿ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದು, ಪರಿಸರ ಕಾನೂನು ಮತ್ತು ನೀತಿಯಲ್ಲಿ ಪರಿಣತಿ ಹೊಂದಿದ್ದಾರೆ. ಮೂರು ವರ್ಷಗಳ ಕಾಲ ವೆಂಚರ್ ಕ್ಯಾಪಿಟಲಿಸ್ಟ್ ಆಗಿ ಕೆಲಸ ಮಾಡಿದ ಇವರು, ಪರಿಸರ ಕಾಳಜಿಯ ಕೆಲಸಗಳನ್ನು ಮಾರುಕಟ್ಟೆಯೊಂದಿಗೆ ಜೋಡಿಸಿ ಹಣಗಳಿಸುವ ಮೂಲಸೌಕರ್ಯದ ಕೊರತೆಯನ್ನು ಗುರುತಿಸಿ ಮೇ 2024 ರಲ್ಲಿ ಕರ್ನಾಟಕದಲ್ಲಿ ‘RenewCred’ ಸಂಸ್ಥೆಯನ್ನು ನೋಂದಾಯಿಸಿದರು.
ತಕ್ಷಣವೇ ಮಾರುಕಟ್ಟೆಗೆ ಇಳಿಯದ ಈ ಜೋಡಿ, ವಿಶ್ವಾಸಾರ್ಹತೆಗಾಗಿ ಸುಮಾರು ಎರಡು ವರ್ಷಗಳ ಕಾಲ ಸತತ ಶ್ರಮಪಟ್ಟು 6 ದೇಶಗಳಲ್ಲಿರುವ ಬರೋಬ್ಬರಿ 93 ವಿಜ್ಞಾನಿಗಳ ಬೃಹತ್ ಸಮುದಾಯವನ್ನು ಕಟ್ಟಿತು. ಈ ತಜ್ಞರ ನೆರವಿನಿಂದ ಕಟ್ಟುನಿಟ್ಟಾದ ಅಳತೆ ಮತ್ತು ಪರಿಶೀಲನಾ ವಿಧಾನಗಳನ್ನು ಅಭಿವೃದ್ಧಿಪಡಿಸಿ, ಅಂತಿಮವಾಗಿ 2026 ರಲ್ಲಿ ಸಾರ್ವಜನಿಕ ಸೇವೆಗಳನ್ನು ಮುಕ್ತಗೊಳಿಸಿತು. ಈ ವ್ಯವಸ್ಥೆಯಡಿ ಮೊದಲ ಕಾರ್ಬನ್ ಕ್ರೆಡಿಟ್‌ಗಳು 2026ರ ಏಪ್ರಿಲ್ ತಿಂಗಳಿನಲ್ಲಿಯೇ ಉತ್ಪಾದನೆಗೊಳ್ಳಲು ಆರಂಭಿಸಿದವು.
ಈ ಇಡೀ ಪ್ರಕ್ರಿಯೆಯ ಹಿಂದೆ ಅತ್ಯಂತ ಸುಧಾರಿತ ತಂತ್ರಜ್ಞಾನ ಮತ್ತು ವಿಜ್ಞಾನ ಅಡಗಿದೆ. ಗಿಡಗಳು ವಾತಾವರಣದಿಂದ ಹೀರಿಕೊಂಡ ಇಂಗಾಲವನ್ನು (ಕಾರ್ಬನ್) ಹೊಲದಲ್ಲಿ ಸುಟ್ಟಾಗ ಅದು ಮತ್ತೆ ಗಾಳಿಯನ್ನು ಸೇರುತ್ತದೆ. ಆದರೆ ಅದೇ ಕೃಷಿ ತ್ಯಾಜ್ಯವನ್ನು ಅತ್ಯಂತ ಕಡಿಮೆ ಆಮ್ಲಜನಕವಿರುವ ವಾತಾವರಣದಲ್ಲಿ ‘ಪೈರೋಲಿಸಿಸ್’ (Pyrolysis) ಎಂಬ ಪ್ರಕ್ರಿಯೆಯ ಮೂಲಕ ಕಾಯಿಸಿದಾಗ ಅದು ‘ಬಯೋಚಾರ್’ (Biochar) ಎಂಬ ಅತ್ಯಂತ ಶ್ರೀಮಂತ ಇಂಗಾಲದ ವಸ್ತುವಾಗಿ ಬದಲಾಗುತ್ತದೆ. ಇದನ್ನು ಮಣ್ಣಿಗೆ ಬಳಸುವುದರಿಂದ ಇಂಗಾಲವು ದೀರ್ಘಕಾಲ ಮಣ್ಣಿನಲ್ಲೇ ಲಾಕ್ ಆಗುವುದಲ್ಲದೆ, ಮಣ್ಣಿನ ತೇವಾಂಶ ಮತ್ತು ಉತ್ಪಾದಕತೆ ಹೆಚ್ಚುತ್ತದೆ. ಈ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಲು ಡಿಜಿಟಲ್ ಮಾನಿಟರಿಂಗ್, ರಿಪೋರ್ಟಿಂಗ್ ಮತ್ತು ವೆರಿಫಿಕೇಶನ್ (DMRV) ತಂತ್ರಜ್ಞಾನದಡಿ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸೆನ್ಸರ್‌ಗಳನ್ನು ಬಳಸಿ ತೂಕ, ತಾಪಮಾನ ಮತ್ತು ಒತ್ತಡವನ್ನು ನಿಖರವಾಗಿ ಅಳೆಯಲಾಗುತ್ತದೆ. ನಂತರ ಈ ದತ್ತಾಂಶವನ್ನು 3-ಪದರಗಳ ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ (ML) ಚೌಕಟ್ಟಿನ ಮೂಲಕ ಪರಿಶೀಲಿಸಿ, ತಪ್ಪುಗಳನ್ನು ತಡೆದು, ಬ್ಲಾಕ್‌ಚೈನ್ ತಂತ್ರಜ್ಞಾನದ ಡಿಜಿಟಲ್ ರಿಜಿಸ್ಟ್ರಿಯಲ್ಲಿ ಕಾರ್ಬನ್ ಕ್ರೆಡಿಟ್‌ಗಳನ್ನು ಭದ್ರವಾಗಿ ದಾಖಲಿಸಲಾಗುತ್ತದೆ ಎಂದು ‘ದಿ ಬೆಟರ್ ಇಂಡಿಯಾ’ ವರದಿ ಮಾಡಿದೆ.
RenewCred ಸಂಸ್ಥೆಯ ಮೂಲಕ ಕೃಷಿ ತ್ಯಾಜ್ಯವನ್ನು ಬಯೋಚಾರ್ ಆಗಿ ಪರಿವರ್ತಿಸಿ ಕಾರ್ಬನ್ ಕ್ರೆಡಿಟ್‌ಗಳನ್ನು ಉತ್ಪಾದಿಸುವುದರಿಂದ ರೈತರು ವರ್ಷಕ್ಕೆ ಸುಮಾರು ₹30,000 ರಿಂದ ₹45,000 ಅಥವಾ ಅದಕ್ಕಿಂತ ಹೆಚ್ಚು ಹೆಚ್ಚುವರಿ ಆದಾಯ ಗಳಿಸುವ ಸಾಧ್ಯತೆ ಇದೆ. ಇದು ಕಾರ್ಬನ್ ಕ್ರೆಡಿಟ್ ಮಾರಾಟದಿಂದ ಬರುವ ಹಣವಾಗಿದ್ದು, ತ್ಯಾಜ್ಯ ಸುಡುವ ವೆಚ್ಚ ಉಳಿತಾಯವೂ ಸೇರಿದೆ. ಪ್ರಸ್ತುತ 200ಕ್ಕೂ ಹೆಚ್ಚು ರೈತರು ಇದರಿಂದ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಬಯೋಚಾರ್ ಮಣ್ಣಿಗೆ ಹಾಕುವುದರಿಂದ ಬೆಳೆ ಇಳುವರಿ ಹೆಚ್ಚುತ್ತದೆ, ಇದರಿಂದ ಮತ್ತಷ್ಟು ಆದಾಯ ಸಾಧ್ಯ. ಆದರೆ ಆದಾಯವು ರೈತರ ತ್ಯಾಜ್ಯ ಪ್ರಮಾಣ, ಭೂಮಿ ಗಾತ್ರ ಮತ್ತು ಮಾರುಕಟ್ಟೆ ಬೆಲೆಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ರೈತರಿಗೆ ಹೊಸ ಆರ್ಥಿಕ ಅವಕಾಶವನ್ನು ತೆರೆದಿದೆ.
Bangalore [Bangalore],Bangalore,Karnataka













