Last Updated:
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ‘ಡೊನಾಲ್ಡ್ ಟ್ರಂಪ್’ ಎಮ್ಮೆಯನ್ನು ಬಕ್ರೀದ್ ಹಬ್ಬದಂದು ಬಲಿ ನೀಡಲಾಗುತ್ತಿದೆ. ‘ಡೊನಾಲ್ಡ್ ಟ್ರಂಪ್’ ಎಂಬ ಅಡ್ಡ ಹೆಸರಿನ ಅಪರೂಪದ ಆಲ್ಬಿನೋ ಎಮ್ಮೆ ಬಾಂಗ್ಲಾದೇಶದಲ್ಲಿ 3 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ (Social media) ದಲ್ಲಿ ‘ಡೊನಾಲ್ಡ್ ಟ್ರಂಪ್’ (Donald Trump) ಎಂಬ ಅಡ್ಡ ಹೆಸರಿನ ಎಮ್ಮೆ (Buffalo) ಎಲ್ಲರ ಗಮನ ಸೆಳೆದಿತ್ತು. ಆ ಎಮ್ಮೆಯ ಮುಖವು ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೋಲುತ್ತಿತ್ತು. ಹೀಗಾಗಿ ಜನರು ಅದನ್ನು ಅವರ ‘ಅವಳಿ ಸಹೋದರ’ ಎಂದು ಕರೆಯುವ ಮೂಲಕ ಭಾರೀ ವೈರಲ್ ಮಾಡಿದ್ದರು. ಈಗ ಡೊನಾಲ್ಡ್ ಟ್ರಂಪ್ ಎಂಬ ಅಡ್ಡ ಹೆಸರಿನ ಅಪರೂಪದ ಆಲ್ಬಿನೋ (Albino) ಎಮ್ಮೆ ಮತ್ತೆ ಸದ್ದು ಮಾಡುತ್ತಿದೆ. ಬಾಂಗ್ಲಾದೇಶ (Bangladesh) ದಲ್ಲಿ ಈದ್ ಅಲ್-ಅಧಾ (Eid al-Adha) ಅಥವಾ ಬಕ್ರೀದ್ (Bakrid) ಹಬ್ಬಕ್ಕೂ ಮುನ್ನ ಎಮ್ಮೆಯನ್ನು ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಎಮ್ಮೆಯನ್ನು ಢಾಕಾ ಸಮೀಪದ ನಾರಾಯಣಗಂಜ್ ಜಿಲ್ಲೆಯ ರಬೆಯಾ ಆಗ್ರೋ ಫಾರ್ಮ್‌ನಲ್ಲಿ ಸಾಕಲಾಗಿತ್ತು. ಆಗ್ರೋ ಫಾರ್ಮ್‌ನಲ್ಲಿ ಬಕ್ರೀದ್ ಸಮಯದಲ್ಲಿ ಪ್ರಾಣಿಗಳನ್ನು ಬಲಿ ನೀಡಲು ಸಿದ್ಧಪಡಿಸಲಾಗುತ್ತದೆ. 4 ವರ್ಷದ ಈ ಎಮ್ಮೆ ಆಲ್ಬಿನೋ ತಳಿಯದ್ದಾಗಿದೆ ಎಂದು ಫಾರ್ಮ್ ಮಾಲೀಕ ಜಿಯಾವುದ್ದೀನ್ ಮೈರಾಧಾ ಹೇಳಿದ್ದಾರೆ.
ಎಮ್ಮೆಯ ಮೈ ಬಣ್ಣ ತಿಳಿ ಗುಲಾಬಿ ಬಣ್ಣದ್ದಾಗಿದ್ದು, ಇದನ್ನು ಅಪರೂಪವೆಂದು ಹೇಳಲಾಗುತ್ತದೆ. ಸುಮಾರು 10 ತಿಂಗಳ ಹಿಂದೆ ರಾಜ್‌ಶಾಹಿ ನಗರ ಮಾರುಕಟ್ಟೆಯಿಂದ ಈ ಎಮ್ಮೆಯನ್ನು ಖರೀದಿಸಲಾಗಿತ್ತು. ನಂತರ ನನ್ನ ಕಿರಿಯ ಸಹೋದರ ಎಮ್ಮೆಯ ಕೂದಲಿನ ವಿನ್ಯಾಸವನ್ನು ನೋಡಿ ಅದಕ್ಕೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಹೆಸರಿನಿಂದಾಗಿ ಎಮ್ಮೆ ಸೋಶಿಯಲ್ ಮೀಡಿಯಾ ಮತ್ತು ಬಾಂಗ್ಲಾದ ಸ್ಥಳೀಯ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಮ್ಮೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಫಾರ್ಮ್ಗೆ ಬರುತ್ತಿದ್ದಾರೆ. ಎಮ್ಮೆಯನ್ನು ಅಂತಿಮವಾಗಿ ಜೀವಂತ ತೂಕದ ಆಧಾರದ ಮೇಲೆ ಪ್ರತಿ ಕೆಜಿಗೆ 550 ಟಕಾ ಬೆಲೆ ಮಾರಾಟ ಮಾಡಲಾಗಿದೆ.
ಎಮ್ಮೆ ಸುಮಾರು 700 ಕೆಜಿ ರಷ್ಟಿದೆ. ಹೀಗಾಗಿ ಎಮ್ಮೆಯನ್ನು ಸುಮಾರು 3.85 ಲಕ್ಷ ಟಕಾ (ಸುಮಾರು 3 ಲಕ್ಷ ರೂ.) ಗೆ ಮಾರಾಟ ಮಾಡಲಾಗಿದೆ ಎಂದು ಜಿಯಾವುದ್ದೀನ್ ಮೈರಾಧಾ ಮಾಹಿತಿ ನೀಡಿದ್ದಾರೆ. ಎಮ್ಮೆಯನ್ನು ಖರೀದಿಸಿದವರನ್ನು ಜಿಂಜಿರಾದ ರಸೂಲ್‌ಪುರ ಪ್ರದೇಶದ ನಿವಾಸಿ ಮೊಹಮ್ಮದ್ ಶೋರನ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಮೊಹಮ್ಮದ್ ಶೋರನ್ ಅವರು ಬಕ್ರೀದ್ ಹಬ್ಬದಂದು ಬಲಿ ನೀಡಲು ಎಮ್ಮೆಯನ್ನು ಖರೀದಿಸಿದ್ದಾರೆ . ಎಎನ್ಐ ವರದಿ ಮಾಡಿರುವಂತೆ, ತನ್ನ ವರದಿಗಾರ ಖರೀದಿದಾರರ ಮನೆಗೆ ಭೇಟಿ ನೀಡಿದಾಗ, ಅವರು ಎಮ್ಮೆಯನ್ನು ತೋರಿಸಲು ನಿರಾಕರಿಸಿದ್ದಾರೆ. ಅವರು ಇನ್ನೂ ಎಮ್ಮೆಯನ್ನು ಪಡೆದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಎಮ್ಮೆ ವೈರಲ್ ಆದ ನಂತರ ಜನಸಂದಣಿಯನ್ನು ತಪ್ಪಿಸಲು ಖರೀದಿದಾರ ಪ್ರಸ್ತುತ ಅದನ್ನು ಮರೆಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.













