ಇದುವರೆಗೂ ಇದು ಯಾವುದೋ ಸೈನ್ಸ್ ಫಿಕ್ಷನ್ ಇರಬೇಕು ಅನ್ನಿಸಿದರೂ ಇದು ಈಗ ನಿಜವಾಗುತ್ತಿದೆ. ಹಾಗಾದರೆ ಇದು ಹೇಗೆ ಸಾಧ್ಯ? ನಾಯಿಗಳಿಗೆ ಇಂತಹ ಅದ್ಭುತ ಶಕ್ತಿ ಹೇಗೆ ಬಂತು? ಇದು ವೈದ್ಯಕೀಯ ಕ್ಷೇತ್ರದಲ್ಲಿ ಯಾವ ರೀತಿ ಕ್ರಾಂತಿ ಮಾಡುತ್ತದೆ? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.
ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ, ಬೆಂಗಳೂರು ಮೂಲಕದ ‘ಡಾಗ್ನೊಸಿಸ್’ (Dognosis) ಎಂಬ ಸ್ಟಾರ್ಟ್ ಅಪ್, ನಾಯಿಗಳಿಗೆ ಇರುವ ಅಸಾಧಾರಣ ವಾಸನೆಯ ಶಕ್ತಿಯೊಂದಿಗೆ, ಆಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸಂಯೋಜನೆ ಮಾಡಿ ಸಂಚಲನಾತ್ಮಕ ಪ್ರಯೋಗವನ್ನು ಮಾಡುತ್ತಿದೆ.
ಇಲ್ಲಿ ಬರೋಬ್ಬರಿ 16 ಶ್ವಾನಗಳಿಗೆ ಎಐ ಸಹಾಯದಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ. ಮನುಷ್ಯನ ಉಸಿರಾಟದಲ್ಲಿರುವ ‘VOCs’ (Volatile Organic Compounds) ನಿರ್ದಿಷ್ಟ ವಾಸನೆಗಳಲ್ಲಿನ ಬದಲಾವಣೆಗಳನ್ನು ನಾಯಿಗಳು ಸುಲಭವಾಗಿ ಪತ್ತೆ ಮಾಡಬಹುದು. ಮನುಷ್ಯರಿಗಿಂತ ಶ್ವಾನಗಳಿಗೆ ಹೆಚ್ಚು ವಾಸನೆಯ ಸಾಮರ್ಥ್ಯ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಈ ಪ್ರಯೋಗ ಎಷ್ಟು ಪ್ರಭಾವಶಾಲಿ ಆಗಿ ಕೆಲಸ ಮಾಡಲಿದೆ ಎಂದು ಪರೀಕ್ಷೆ ಮಾಡಲು ಕರ್ನಾಟಕದ ಆರು ಆಸ್ಪತ್ರೆಗಳಲ್ಲಿ ಸುಮಾರು 3,275 ಮಂದಿಗೆ ಕ್ಲಿನಿಕಲ್ ಟ್ರಯಲ್ಸ್ ಮಾಡಲಾಗಿದೆ. ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅವರು ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನಿಖರತೆಯೊಂದಿಗೆ ಪತ್ತೆಹಚ್ಚಲು ಸಾಧ್ಯವಾಗಿದೆ. ಜೊತೆಗೆ ಪ್ರತಿ 10 ಕ್ಯಾನ್ಸರ್ ರೋಗಿಗಳಲ್ಲಿ 9 ಜನರನ್ನು ನಿಖರವಾಗಿ ಗುರುತಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೊದಲ ಮತ್ತು ಎರಡನೇ ಹಂತಗಳಲ್ಲಿ ಆರಂಭಿಕ ಹಂತದ ಕ್ಯಾನ್ಸರ್‌ಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಮುಖ್ಯವಾಗಿ ಒಂದು ನಿಮಿಷದಲ್ಲಿ 72 ಉಸಿರಾಟದ ಮಾದರಿಗಳನ್ನು (Breath Samples) ಪರೀಕ್ಷೆ ಮಾಡಿ, ಫಲಿತಾಂಶ ನೀಡಿರುವುದು ಇದರ ವಿಶೇಷತೆ ಎಂದು ಹೇಳಬಹುದಾಗಿದೆ.
ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)
ಭಾರತದಲ್ಲಿ ಕ್ಯಾನ್ಸರ್ ಪತ್ತೆಗೆ ಆಗುವ ಭಾರೀ ಪ್ರಮಾಣದ ಖರ್ಚು ಇದರಿಂದ ಕಡಿಮೆಯಾಗುತ್ತದೆ. ಸದ್ಯ ನಮ್ಮ ದೇಶದಲ್ಲಿ ಕ್ಯಾನ್ಸರ್ ಇದೆಯಾ? ಇಲ್ಲವೋ ಎಂದು ಪತ್ತೆ ಮಾಡಲು 20 ರಿಂದ 65 ಸಾವಿರ ರೂಪಾಯಿವರೆಗೂ ಖರ್ಚಾಗುತ್ತಿದೆ. ಆದರೆ ಈ ಹೊಸ ಪದ್ಧತಿಯಲ್ಲಿ ಈಗ ಆಗುತ್ತಿರುವ ಖರ್ಚಿನಲ್ಲಿ ಶೇಕಡಾ 10ರಷ್ಟು ಹಣದೊಂದಿಗೆ ಪ್ರಾಥಮಿಕ ಪರೀಕ್ಷೆ ನಡೆಸಲು ಅವಕಾಶ ಇದೆ ಎಂದು ಡಾಗ್ನೋಸಿಸ್ ಸಿಬ್ಬಂದಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದನ್ನು ಸರ್ಕಾರಿ ಪ್ರಯೋಜಕತ್ವದಲ್ಲಿ ಮಾಡಿದರೆ ಜನರಿಗೆ ಉಚಿತ ಸೇವೆ ನೀಡಲು ಅವಕಾಶವಿದೆ. ಈಗಾಗಲೇ ಆಂಧ್ರ ಪ್ರದೇಶ, ಕರ್ನಾಟಕದಂತಹ ರಾಜ್ಯಗಳಲ್ಲಿ ಪೈಲಟ್ ಪ್ರಾಜೆಕ್ಟ್‌ಗಾಗಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಗುರುತಿಸಿದರೆ ಚಿಕಿತ್ಸೆ ಯಶಸ್ವಿಯಾಗಲು ನೀಡಲು ಇರುವ ಅವಕಾಶಗಳು ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಭಾರ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೆಚ್ಚು ಅಪಾಯದಲ್ಲಿ ಇರುವವರನ್ನು ಗುರುತಿಸಿ ಮುಂದಿನ ವೈದ್ಯಕೀಯ ಪರೀಕ್ಷೆಗಳಿಗೆ ಕಳುಹಿಸುವುದು ನಮ್ಮ ಉದ್ದೇಶವಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಈ ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಎಂಬ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಶ್ವಾನ (ಸಾಂದರ್ಭಿಕ ಚಿತ್ರ)
ಇದಕ್ಕೆ ಭಾರೀ ಪ್ರಮಾಣದ ಮೂಲಭೂತ ಸೌಲಭ್ಯಗಳು ಅಗತ್ಯವಿಲ್ಲ ಕಾರಣ ಕಡಿಮೆ ಆದಾಯ ಹೊಂದಿರುವ ಪ್ರದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಕ್ಯಾನ್ಸರ್ ಪರೀಕ್ಷೆಗಳನ್ನು ನಡೆಸಬಹುದು. ಬೆಂಗಳೂರಿನ ನೆಲಮಂಗಲದಲ್ಲಿರುವ ಈ ಡಾಗ್ನೋಸಿಸ್ ಕೇಂದ್ರ ಸಾಮಾನ್ಯ ಪ್ರಯೋಗಾಲಯ ಅಲ್ಲ. ಇದನ್ನು ವಿಶೇಷ ಆಕಾರದಲ್ಲಿ ರೂಪಿಸಲಾಗಿದ್ದು, ವಿಶೇಷ ತರಬೇತಿ ಕೇಂದ್ರ ಎಂದು ಕರೆಯಬಹುದು. ಇಲ್ಲಿನ ಪ್ರಮುಖ ಆಕರ್ಷಣೆ ಕ್ಲೋಯ್ ಎಂಬ ಬೀಗಲ್ ಜಾತಿ ಶ್ವಾನ. ಇದಕ್ಕೆ ಇಇಜಿ ಹೆಲ್ಮೆಟ್ ಮತ್ತು ಸೆನ್ಸರ್ ಹಾರ್ನೆಸ್‌ನಂತಹ ಉಪಕರಣಗಳನ್ನು ಅಳವಡಿಸಲಾಗಿದೆ. 12 ಸ್ಟೇಷನ್‌ಗಳಲ್ಲಿ ಉಸಿರಾಟದ ಮಾದರಿಗಳನ್ನು ಸ್ನಿಫ್ ಮಾಡುವುದನ್ನು ತೋರಿಸಲಾಗಿದೆ. ಕ್ಯಾನ್ಸರ್ ಹೊಂದಿರುವ ಮಾದರಿಯನ್ನು ಪತ್ತೆ ಮಾಡಿದ ತಕ್ಷಣ ಶ್ವಾನ ಅಲ್ಲಿಯೇ ನಿಲ್ಲುತ್ತದೆ.
ಈ ಶ್ವಾನಗಳು ಕ್ಯಾನ್ಸರ್ ಮಾತ್ರ ಅಲ್ಲ, ಮಲೇರಿಯಾ, ಪಾರ್ಕಿನ್ಸನ್‌ನಂತಹ ರೋಗಗಳನ್ನು ಕೂಡ ವಾಸನೆ ಮೂಲಕ ಗುರುತಿಸುತ್ತವೆ. ಆದರೆ ಶ್ವಾನ ಯಾವ ಖಾಯಿಲೆಯನ್ನು ಗುರುತಿಸಿದೆ ಎಂದು ನಾವು ಹೇಗೆ ತಿಳಿದುಕೊಳ್ಳುವುದು ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಪರಿಹಾರವಾಗಿ ಎಐ ತಂತ್ರಜ್ಞಾನದ ಮೊರೆ ಹೋಗಿರುವ ಡಾಗ್ನೋಸಿಸ್, ಆಧುನಿಕ ಎಐ ಮತ್ತೆ ಮಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತದೆ. ಶ್ವಾನಗಳ ವರ್ತನೆ, ಉಸಿರಾಟ ಹಾಗೂ ಅವುಗಳ ಮೆದುಳಿನ ಪ್ರತಿಕ್ರಿಯೆಗಳನ್ನು ಸೆನ್ಸಾರ್‌ಗಳ ಮೂಲಕ ದಾಖಲಿಸಿಕೊಳ್ಳಲಾಗುತ್ತದೆ. ಪ್ರತಿ ನಾಯಿಗೂ ‘ಡಿಜಿಟಲ್ ಟ್ವಿನ್’ ಅಥವಾ ‘ಸ್ನಿಫ್ ಡೈರಿ’ (Sniff Diary) ಯನ್ನು ತಯಾರಿಸುತ್ತಿದ್ದಾರೆ.
ಮಾಸ್ಕ್ (ಸಾಂದರ್ಭಿಕ ಚಿತ್ರ)
ಓರ್ವ ವ್ಯಕ್ತಿ 10 ನಿಮಿಷಗಳ ಕಾಲ ಮಾಸ್ಕ್ ಮೂಲಕ ಉಸಿರಾಟ ನಡೆಸಿದರೆ, ಆ ಮಾದರಿ ಮೂಲಕ ಕ್ಯಾನ್ಸರ್ ಇದೆಯಾ? ಇಲ್ಲವೇ? ಅಂತ ಶ್ವಾನಗಳು ಗುರುತಿಸುತ್ತವೆ. ಈಗಾಗಲೇ ಈ ಸ್ಟಾರ್ಟ್ ಅಪ್ 3 ಸಾವಿರಕ್ಕೂ ಹೆಚ್ಚು ಜನರಿಗೆ ಟ್ರಯಲ್ಸ್ ಮಾಡಿದೆ. PET-CT ಸ್ಕ್ಯಾನ್‌ನಂತಹ ದುಬಾರಿ ಪರೀಕ್ಷೆಗಳನ್ನು ನಡೆಯುವ ಮುನ್ನ ಒಂದು ಪ್ರಾಥಮಿಕ ರಿಪೋರ್ಟ್ ಆಗಿ ಇದು ಅದ್ಭುತವಾಗಿ ಕಾರ್ಯನಿರ್ವಹಿಸಲಿದೆ. ಒಂದು ಕಡೆ ಲಕ್ಷಾಂತರ ರೂಪಾಯಿ ಮಷಿನ್‌ಗಳು, ಮತ್ತೊಂದು ಕಡೆ ವಾಸನೆ ಮೂಲಕ ನಿರ್ಧರಿಸುವ ಶ್ವಾನಗಳು. ಇದು ಸಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಪರ್ಯಾಯವಾಗಿ ಭವಿಷ್ಯದಲ್ಲಿ ನಮ್ಮ ಮನೆಯಲ್ಲಿ ಇರಬಹುದಾದ ಸ್ಕ್ರೀನಿಂಗ್ ಕಿಟ್ ಆಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನುಷ್ಯನಿಗೆ ಅತೀ ಹೆಚ್ಚು ವಿಶ್ವಾಸದಿಂದ ಇರುವ ಶ್ವಾನಗಳು, ಈಗ ಜೀವ ರಕ್ಷಣೆ ಮಾಡುವ ಡಾಕ್ಟರ್‌ಗಳಾಗಿ ಬದಲಾವಣೆಯಾಗುತ್ತಿವೆ. ಭವಿಷ್ಯದಲ್ಲಿ ಜನರ ಜೀವಗಳನ್ನು ಉಳಿಸುವಲ್ಲಿ ಎಂತಹ ಕ್ರಾಂತಿಯನ್ನು ಸೃಷ್ಟಿ ಮಾಡುತ್ತೆ ಅಂತ ಕಾದುನೋಡಬೇಕಿದೆ.












