DMK-BJP: ತಮಿಳುನಾಡು ರಾಜಕೀಯದ ಬಿಗ್ ಬ್ರೇಕಿಂಗ್ ನ್ಯೂಸ್! ಬಿಜೆಪಿ ಜೊತೆ ಮೈತ್ರಿಗೆ ಮುಂದಾಯ್ತಾ ಡಿಎಂಕೆ? ಕಾಂಗ್ರೆಸ್‌ಗೆ ಬಿಗ್ ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

DMK-BJP: ದ್ರಾವಿಡ ದಿಗ್ಗಜನ ಯು-ಟರ್ನ್! ಟಿವಿಕೆಯೊಂದಿಗೆ ಕಾಂಗ್ರೆಸ್ ಮೈತ್ರಿ ಪರಿಣಾಮ ಬಿಜೆಪಿ ಜೊತೆ DMK ಡೀಲ್ ಫಿಕ್ಸ್? ಸ್ಟಾಲಿನ್-ಮೋದಿ ಒಂದಾದರೆ ದ್ರಾವಿಡ ನಾಡಿನಲ್ಲಿ ಕಾಂಗ್ರೆಸ್ ಕಥೆ ಏನು?

News18
News18

ಚೆನ್ನೈ (ತಮಿಳುನಾಡು): 2026 ತಮಿಳುನಾಡು ವಿಧಾನಸಭಾ ಚುನಾವಣಾ (Tamil Nadu Assembly Elections) ಸೋಲಿನ ಬಳಿಕ ಕಾಂಗ್ರೆಸ್​ (Congress) ಪಕ್ಷ ತನ್ನ 60 ವರ್ಷಗಳ ಮಿತ್ರ ಡಿಎಂಕೆಯನ್ನ (DMK) ತೊರೆದಿದೆ. ಇದರೊಂದಿಗೆ, ಮತ್ತೊಂದು ಮಿತ್ರ ಪಕ್ಷವಾದ ಇಂಡಿಯನ್​ ಯೂನಿಯನ್ ಮುಸ್ಲಿಂ ಲೀಗ್​ ಕೂಡ ಇದೀಗ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟ ತೊರೆದಿದೆ. ಇದರ ಬೆನ್ನಲ್ಲೇ, ಡಿಎಂಕೆ ತನ್ನ ರಾಜಕೀಯ ಇತಿಹಾಸದಲ್ಲೇ ಅತಿ ದೊಡ್ಡ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದ್ದು, ಸ್ಟಾಲಿನ್​ (Stalin) ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (Dravida Munnetra Kazhagam) ಇಂಡಿ ಕೂಟದಿಂದ (INDI Alliance) ಹೊರ ನಡೆದು ಬಿಜೆಪಿ (BJP) ಸಖ್ಯ ಮಾಡಲಿದೆ ಎನ್ನುವ ವರದಿ ರಾಷ್ಟ್ರ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ.

ಬದಲಾದ ತಮಿಳುನಾಡು ರಾಜಕೀಯ ಚಿತ್ರಣ

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದ ಸಾಂಪ್ರದಾಯಿಕ ರಾಜಕೀಯ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಭರ್ಜರಿ ಜಯಗಳಿಸಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ, ರಾಜಕೀಯವಾಗಿ ಡಿಎಂಕೆಗೆ ತೀವ್ರ ಆಘಾತ ನೀಡಿದ್ದು ಕಾಂಗ್ರೆಸ್‌ನ ನಡೆ. ಚುನಾವಣೆಯ ನಂತರ ಕಾಂಗ್ರೆಸ್, ಸಿಪಿಐ, ವಿಸಿಕೆ ಮತ್ತು ಐಯುಎಂಎಲ್ ಸೇರಿದಂತೆ ಡಿಎಂಕೆಯ ಹಳೇ ಮಿತ್ರಪಕ್ಷಗಳೆಲ್ಲವೂ ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ಆಡಳಿತಾರೂಢ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ. ಇದನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು “ಕಾಂಗ್ರೆಸ್ ಮಾಡಿದ ಬೆನ್ನಿಗೆ ಚೂರಿ ಹಾಕುವ ಕೆಲಸ” ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Shashi Tharoor: ಮೋದಿ ಹೊಗಳಿದ ಶಶಿ ತರೂರ್ ವಿರುದ್ಧ ಮತ್ತೆ ಕೆರಳಿ ಕೆಂಡವಾದ ಕಾಂಗ್ರೆಸ್! ಬಿಜೆಪಿ ಹೇಳಿದ್ದೇನು?

ಏತನ್ಮಧ್ಯೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚೆನ್ನೈನಲ್ಲಿ ನಡೆದ ತನ್ನ ಸಾಮಾನ್ಯ ಮಂಡಳಿ ಸಭೆಯಲ್ಲಿ ಮುಸ್ಲಿಂ ಲೀಗ್ (IUML) 14 ನಿರ್ಣಯಗಳನ್ನು ಅಂಗೀಕರಿಸಿತು, ಅದರಲ್ಲಿ DMK ಮೈತ್ರಿಕೂಟದಿಂದ ಹಿಂದೆ ಸರಿಯುವ ನಿರ್ಣಯವೂ ಸೇರಿದೆ. ವಿಧಾನಸಭಾ ಚುನಾವಣೆಯ ನಂತರ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ವೆಟ್ರಿ ಕಳಗಂ (TVK) ಸರ್ಕಾರವನ್ನು ಬೆಂಬಲಿಸಿರುವುದಾಗಿ ಮತ್ತು ಪ್ರಸ್ತುತ ರಾಜಕೀಯ ಸಂದರ್ಭಗಳಲ್ಲಿ DMK ಮೈತ್ರಿಕೂಟದಲ್ಲಿ ಉಳಿಯುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Supreme Court: ವಿಮಾ ಒಪ್ಪಂದದ ಅಡಿಯಲ್ಲಿ ಯಾವುದೇ ಮೂರನೇ ವ್ಯಕ್ತಿ ಕ್ಲೈಮ್‌ ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಮುಂದುವರೆದು, ಕಾಂಗ್ರೆಸ್‌ನ ಈ ವಂಚನೆಯಿಂದ ಬೇಸತ್ತಿರುವ ಡಿಎಂಕೆ, ಜೂನ್ 8 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರಮುಖ ಸಭೆಯನ್ನು ಬಹಿಷ್ಕರಿಸುವ ಮೂಲಕ ಅಧಿಕೃತವಾಗಿ ತನ್ನ ಅಂತರವನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಸಂಸತ್ತಿನಲ್ಲಿ ಕಾಂಗ್ರೆಸ್‌ನೊಂದಿಗೆ ಕುಳಿತುಕೊಳ್ಳಲು ನಿರಾಕರಿಸಿರುವ ಡಿಎಂಕೆ, ತಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದೆ. ಅದರಂತೆ, ಸಂಪೂರ್ಣವಾಗಿ ಒಂಟಿಯಾಗಿರುವ ಡಿಎಂಕೆಗೆ ಈಗ ತಮಿಳುನಾಡಿನಲ್ಲಿ ನಟ ವಿಜಯ್ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ಎದುರಿಸಲು ಬಲಿಷ್ಠ ಶಕ್ತಿಯೊಂದರ ಅಗತ್ಯವಿದೆ. ಇದೇ ಕಾರಣಕ್ಕೆ ಕೇಂದ್ರದ ಆಡಳಿತಾರೂಢ ಬಿಜೆಪಿಯೊಂದಿಗೆ ಕೈಜೋಡಿಸಲು ಮುಂದಾಗಿದೆ ಎನ್ನಲಾಗಿದೆ.

ಕಾಂಗ್ರೆಸ್​ಗೆ ಬಿಜೆಪಿ ಚೆಕ್​ಮೇಟ್​?

ಇನ್ನು, ನ್ಯೂಸ್​ 18 ಹಿಂದಿ ವರದಿ ಮಾಡಿರುವಂತೆ, ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ವಿರೋಧ ಪಕ್ಷದಲ್ಲಿ ಉಳಿಯುವುದು ಪ್ರಾದೇಶಿಕ ಪಕ್ಷಕ್ಕೆ ರಾಜಕೀಯವಾಗಿ ಮಾರಕ ಎನ್ನುವುದು ಡಿಎಂಕೆಯ ನಡೆ ಎನ್ನಲಾಗಿದೆ. ಮತ್ತೊಂದೆಡೆ, ಬಿಜೆಪಿಗೆ ಡಿಲಿಮಿಟೇಷನ್​ ಹಾಗೂ ಮಹಿಳಾ ಮೀಸಲಾತಿ ವಿಚಾರವಾಗಿ ಸಂಸತ್ತಿನಲ್ಲಿ ವಿಶೇಷ ಬಹುಮತದ ಅಗತ್ಯವಿದೆ. ಹಾಗಾಗಿಯೇ, ಡಿಎಂಕೆಯನ್ನ ಮನವೊಲಿಸಿ ಈ ಕುರಿತು ವಿಷಯಾಧಾರಿತ ಬೆಂಬಲ ಪಡೆದು ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನ ಪಾಸ್​ ಮಾಡಿಕೊಳ್ಳವ ಸಲುವಾಗಿ ಎನ್​ಡಿಎ ಸೇರಲು ಆಹ್ವಾನಿಸಿದೆ ಎಂದು ವರದಿಯಾಗಿದೆ.

ಮುಂದುವರೆದು, ಡಿಎಂಕೆ ಲೋಕಸಭೆಯಲ್ಲಿ 22 ಸಂಸದರನ್ನು ಹೊಂದಿದೆ. ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಎನ್‌ಡಿಎಗೆ ಸೇರಲು ನಿರ್ಧರಿಸಿದರೆ, ಎನ್‌ಡಿಎ 360 ಸದಸ್ಯರ ಗಡಿಯನ್ನು ಸುಲಭವಾಗಿ ದಾಟಲಿದೆ. ಆದರೂ ಈ ವರದಿಗಳು ಮೂಲಗಳನ್ನು ಮಾತ್ರ ಆಧರಿಸಿದ್ದು, ಡಿಎಂಕೆ ಅಥವಾ ಬಿಜೆಪಿ ಈ ಬಗ್ಗೆ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ.

ಒಟ್ಟಾರೆಯಾಗಿ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದಕ್ಕೆ ತಮಿಳುನಾಡಿನ ಈ ವಿದ್ಯಮಾನ ಸಾಕ್ಷಿಯಾಗಿದೆ. ನಟ ವಿಜಯ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ತಡೆಯಲು ಮತ್ತು ತಮಿಳುನಾಡಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಡಿಎಂಕೆ ಬಿಜೆಪಿಯೊಂದಿಗೆ ಕಾರ್ಯತಂತ್ರದ ಮೈತ್ರಿ ಮಾಡಿಕೊಂಡರೆ ಅಚ್ಚರಿಯೇನಿಲ್ಲ. ಅದರಂತೆ, ಇದು ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ರಾಜಕೀಯ ದಿಕ್ಸೂಚಿಯನ್ನು ಬದಲಾಯಿಸುವುದು ಖಚಿತ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed